ಟಿಪ್ಪು ಜಯಂತಿ ವಿಚಾರಗೋಷ್ಠಿಯಲ್ಲಿ ಧರ್ಮನಿಂದನೆ ಪ್ರಕರಣ: ಸಂತೋಷ್ ತಮ್ಮಯ್ಯ ಅವರಿಗೆ ಐದು ವರ್ಷಗಳ ಬಳಿಕ ಮತ್ತೆ ಸಮನ್ಸ್
ಮಡಿಕೇರಿ:ಟಿಪ್ಪು ಜಯಂತಿ ಕಾರ್ಯಕ್ರಮದ ಕುರಿತಾಗಿ ಈ ಹಿಂದೆ ನಡೆದ ವಿಚಾರಗೋಷ್ಠಿಯೊಂದರಲ್ಲಿ ಧರ್ಮನಿಂದನೆ ಮಾಡಲಾಗಿದೆ ಎಂಬ ಆರೋಪದಂತೆ ಹಿಂದೂ ಸಂಘಟನೆಯ ಕಾರ್ಯಕರ್ತ ಸಂತೋಷ್ ತಮ್ಮಯ್ಯ ಸೇರಿದಂತೆ ಹಲವರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಕ್ಕೆ ಮತ್ತೆ ಇದೀಗ ಮರು ಜೀವ ಬಂದಿದ್ದು, ಮತ್ತೆ ಸಮನ್ಸ್ ಜಾರಿಯಾಗಿದೆ.
2020ರಲ್ಲಿ ಗೋಣಿಕೊಪ್ಪದ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಪ್ರಜ್ಞಾಕಾವೇರಿ ಸಂಘಟನೆ ಮೂಲಕ ಆಯೋಜಿಸಲಾಗಿದ್ದ ವಿಚಾರಗೋಷ್ಠಿಯಲ್ಲಿ ಸಂತೋಷ್ ತಮ್ಮಯ್ಯ, ಅಡ್ಡಂಡ ಕಾರ್ಯಪ್ಪ, ಸುಧಾಕರ್ ಹೊಸಳ್ಳಿ, ರಾಬಟ್ ರೊಜಾರಿಯೋ ವಿರುದ್ಧವಾಗಿ ಧರ್ಮ ನಿಂದನೆಯ ಮಾತನ್ನಾಡಿರುವುದಾಗಿ ಆರೋಪಿಸಿ ಸಿದ್ದಾಪುರದ ವ್ಯಕ್ತಿಯೋರ್ವರು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರಲ್ಲಿ ಸಂತೋಷ್ ತಮ್ಮಯ್ಯ ಪ್ರಮುಖ ಆರೋಪಿಯಾಗಿದ್ದರು.
ಇವರನ್ನು ಆಗ ಬಂಧನಕ್ಕೂ ಒಳಪಡಿಸಿದ್ದು, ಜಾಮೀನು ದೊರೆತಿತ್ತು. ನಂತರದಲ್ಲಿ ಬಿ. ರಿಪೋರ್ಟ್ ಕೂಡ ಆಗಿತ್ತೆನ್ನಲಾಗಿದೆ. ಆದರೆ ಇದೀಗ ಈ ಬಗ್ಗೆ ಸಂತೋಷ್ ತಮ್ಮಯ್ಯಗೆ ಮತ್ತೆ ಸಮನ್ಸ್ ಜಾರಿಯಾಗಿದ್ದು, ಇವರು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಸೆಕ್ಷನ್ 295 (A) ರಂತೆ ಪ್ರಕರಣ ದಾಖಲಾಗಿತ್ತು. ಇದೀಗ ಸೆಕ್ಷನ್ 152 ರಂತೆ ಸಮನ್ಸ್ ಜಾರಿಗೊಳಿಸಲಾಗಿದೆ.
