ಕೊಡ್ಲಿಪೇಟೆ ಹ್ಯಾಂಡ್ ಪೋಸ್ಟ್ ನಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ ಗಮನಸೆಳೆದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ

ಕೊಡ್ಲಿಪೇಟೆ : ಸಮೀಪದ ಹ್ಯಾಂಡ್‌ಪೋಸ್ಟ್ ಮಸ್ಜಿದುನ್ನೂರ್ ಸುನ್ನಿ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ನೂರ್ ಮಹಲ್ ನಲ್ಲಿ ಹಮ್ಮಿಕೊಂಡಿದ್ದಂತಹ ಮದ್ರಸ ವಿದ್ಯಾರ್ಥಿಗಳ ಕಾರ್ಯಕ್ರಮ ಗಮನಸೆಳೆಯಿತು. ಪ್ರವಾದಿ ಮೊಹಮ್ಮದ್ ಮುಸ್ತಫ (ಸ.ಅ) ರವರ 1500 ನೇ ಜನ್ಮದಿನದ ಅಂಗವಾಗಿ ಮದ್ರಸ ವಿದ್ಯಾರ್ಥಿಗಳ ವೇದಿಕೆ ಕಾರ್ಯಕ್ರಮ ಭಾನುವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ಜರುಗಿತು. ತಜಲ್ಲಿಯಾತ್ ಮದ್ರಸ ಹ್ಯಾಂಡ್‌ಪೋಸ್ಟ್ , ಹಿದಾಯತ್ತುಸ್ವಿಭಿಯಾನ್ ಮದ್ರಸ ಬ್ಯಾಡಗೊಟ್ಟ ಮತ್ತು ಖುವ್ವತ್ತುಲ್ ಇಸ್ಲಾಂ ಮದ್ತಸ ಕಲ್ಲಾರೆ ಸೇರಿದಂತೆ ಮೂರು ಮದ್ರಸಗಳ ವಿದ್ಯಾರ್ಥಿಗಳು ಪ್ರವಾದಿಯವರ ಪ್ರಕಿರ್ತನೆಯನ್ನೊಳಗೊಂಡತಹ ವಿವಿಧ ಭಾಷೆಗಳ ಹಾಡು ,ಭಾಷಣ ,ಖವಾಲಿ ,ಬುರ್ದಾ ಹಾಗೂ ದಫ್ ಪ್ರದರ್ಶನ ನೆರೆದಿದ್ದ ಸಭಿಕರನ್ನು ಮನಸೂರೆಗಿಳಿಸಿತು.
1 ರಿಂದ 12 ತರಗತಿಯವರೆಗಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ಸಂಭ್ರಮಪಟ್ಟರು. ಮಧ್ಯಾಹ್ನ ಭಾಗವಹಿಸಿದ ಎಲ್ಲರಿಗೂ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯರಾದ ವಿವಿಧ ಧರ್ಮೀಯರು ಪಾಲ್ಗೊಂಡು ಸೌಹಾರ್ದತೆ ಮೆರೆದರು. ಸ್ಥಳೀಯ ಕ್ಯಾತೆ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲ ಗುರುಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಪಸಂಖ್ಯಾತ ಇಲಾಖೆಯ ಯೋಜನೆಗಳು ಮತ್ತು ತಮ್ಮ ವಸತಿ ಶಾಲೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಕೊಡ್ಲಿಪೇಟೆ ಹನಫಿ ಸುನ್ನಿ ಜಾಮಿಯಾ ಮಸೀದಿಯ ಧರ್ಮಗುರುಗಳು ಹಾಗೂ ಆಡಳಿತ ಸಮಿತಿಯ ಪ್ರಮುಖರು ಭಾಗವಹಿಸಿ ಶುಭ ಹಾರೈಸಿದರು.
ಸಂಜೆ ನಡೆದಂತಹ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಮಸ್ಜಿದುನ್ನೂರ್ ಧರ್ಮಗುರುಗಳಾದ ಶಾಫಿ ಫೈಝಿ ರವರು ಪ್ರವಾದಿಯವರ ಪ್ರಕೀರ್ತನೆಗಳನ್ನು ಪ್ರಸ್ತುತ ಪಡಿಸುವುದು ಅವರ ಹೆಸರಿನಲ್ಲಿ ಅನ್ನದಾನ ಸೇರಿದಂತೆ ದಾನ ಧರ್ಮ ಗಳು ಪ್ರತಿಫಲಾರ್ಹವಾಗಿದೆ ಎಂದು ಅವರ ಜೀವನ ಚರಿತ್ರೆ ನಮಗೆಲ್ಲರಿಗೂ ಮಾದರಿಯಾಗಿದೆ ಎಂದರು. ಮಸ್ಜಿದುನ್ನೂರ್ ಅಧ್ಯಕ್ಷ ಜಿ.ಎಂ.ಅಬೂಬಕ್ಕರ್ ಸಿದ್ದೀಕ್ ಹಾಜಿ ಅಧ್ಯಕ್ಷತೆ ವಹಿಸಿದರು.
ಮದ್ರಸದ ಮುಖ್ಯೋಪಾಧ್ಯಾಯ ರಝಾಕ್ ಫೈಝಿ ಉದ್ಬಾಟಿಸಿದರು. ಮದ್ರಸ ಅಧ್ಯಾಪಕರುಗಳಾದ ಸಮದ್ ಫೈಝಿ ಕಲ್ಲಾರೆ, ಸಮೀರ್ ಸಖಾಫಿ ಬ್ಯಾಡಗೊಟ್ಟ ಮೌಲಿದ್ ಮಜ್ಲಿಸ್ ಗೆ ನೇತ್ರತ್ವ ವಹಿಸಿದ್ದರು. ಝಹೀರ್ ನಿಝಾಮಿ ಕಾರ್ಯಕ್ರಮ ನಿರ್ವಹಿಸಿದರು. ಸ್ವಾಲಿಹ್ ರಹ್ಮಾನಿ ಮತ್ತು ಹಾರಿಸ್ ಜೌಹರಿ ಮಾತನಾಡಿದರು. ಮುಸ್ತಫ ಮುಸ್ಲಿಯಾರ್ ಧಫ್ ಪ್ರದರ್ಶನಕ್ಕೆ ನೇತೃತ್ವ ವಹಿಸಿದ್ದರು. ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಹನೀಫ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರೆ ,ಕಾರ್ಯದರ್ಶಿ ಮುನೀರ್ ವಂದಿಸಿದರು. ಅತೀ ಹೆಚ್ಚು ಅಂಕ ಮತ್ತು ಹಾಜರಾತಿಯಲ್ಲಿ ಅಗ್ರ ಸ್ಥಾನಗಳಿಸಿದವರಿಗೆ ಮತ್ತು ಧಫ್ ಮತ್ತು ಫ್ಲವರ್ ಶೋ ಪ್ರದರ್ಶನ ನೀಡಿದ ಹಾಗೂ ವೇದಿಕೆ ಕಾರ್ಯಕ್ರಮ ನೀಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಆಕರ್ಷಕವಾದ ಬಹುಮಾನಗಳನ್ನು ನೀಡಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಸುಲೈಮಾನ್ ಮತ್ತು ಪದಾಧಿಕಾರಿಗಳು ,ಸಲಹಾ ಸಮಿತಿ ಸದಸ್ಯರುಗಳು ,ನೂರ್ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು. ಮಡಿಕೇರಿ ರೇಂಜ್ ನಲ್ಲಿ 12 ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ಸಮ್ರೀನಾ ಎಂಬ ವಿದ್ಯಾರ್ಥಿನಿಗೆ ಪ್ರಶಸ್ತಿ ಫಲಕ ಮತ್ತು ನಗದು ಬಹುಮಾನ ನೀಡಲಾಯಿತು.