ಜಿಲ್ಲಾ ವೀರಶೈವ ಮಹಾಸಭಾದ ವತಿಯಿಂದ ಗೌಡಳ್ಳಿಯಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ: ಸಹಬಾಳ್ವೆ ಜೀವನಕ್ಕೆ ಕ್ರೀಡೆಗಳು ಸಹಕಾರಿ: ಅರಮೇರಿ ಸ್ವಾಮೀಜಿ

ಜಿಲ್ಲಾ ವೀರಶೈವ ಮಹಾಸಭಾದ ವತಿಯಿಂದ ಗೌಡಳ್ಳಿಯಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ:   ಸಹಬಾಳ್ವೆ ಜೀವನಕ್ಕೆ ಕ್ರೀಡೆಗಳು ಸಹಕಾರಿ:  ಅರಮೇರಿ ಸ್ವಾಮೀಜಿ

ಸೋಮವಾರಪೇಟೆ, ನ.17: ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದ ವತಿಯಿಂದ ಮಹಾಸಭಾದ ಸೋಮವಾರಪೇಟೆ ಘಟಕ ಹಾಗೂ ಜಿಲ್ಲಾ ಯುವ ಘಟಕದ ಸಹಯೋಗದೊಂದಿಗೆ ವತಿಯಿಂದ ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಬಿ.ಜಿ.ಎಸ್.ಶಾಲಾ‌ ಮೈದಾನದಲ್ಲಿ ಭಾನುವಾರ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು.

ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಸಮುದಾಯದ ಕ್ರೀಡಾಕೂಟಗಳ ಮಹತ್ವ ಕುರಿತು ಮಾತನಾಡಿದ ಅರಮೇರಿ- ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಿಸ್ತು- ಸಂಯಮ, ಉತ್ತಮ ನಾಯಕತ್ವ ಗುಣ , ಪರಸ್ಪರ ಪ್ರೀತಿ- ವಿಶ್ವಾಸ , ಉತ್ತಮ ನಾಯಕತ್ವ ಗುಣ ಬೆಳೆಸಲು ಹಾಗೂ ಸಹಬಾಳ್ವೆ ಜೀವನಕ್ಕೆ ಕ್ರೀಡೆಗಳು ತುಂಬಾ ಸಹಕಾರಿಯಾಗಿವೆ ಎಂದರು.

 ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ‌ ಪಿ.ಚಂದ್ರಶೇಖರ್ ಮಾತನಾಡಿ, ಯುವ ಜನಾಂಗ ಕ್ರೀಡಾ ಸ್ಪೂರ್ತಿ ಬೆಳೆಸಿಕೊಂಡು ಉತ್ತಮ ಜೀವನ ಕಂಡುಕೊಳ್ಳಬೇಕು. ಇಂತಹ ಕ್ರೀಡಾಕೂಟಗಳು ಪರಸ್ಪರ ಕ್ರೀಡಾ ಮನೋಭಾವ ಬೆಳೆಸಲು ಸಹಕಾರಿಯಾಗಿವೆ ಎಂದರು.

 ಕೊಡ್ಲಿಪೇಟೆ ಕಲ್ಮಠದ ಮಹಾಂತ ಸ್ವಾಮೀಜಿ ಮಾತನಾಡಿ,ಗ್ರಾಮೀಣ ಕ್ರೀಡೆಗಳನ್ನು ಉಳಿಸಲು ಮತ್ತು ಪರಸ್ಪರ ಪ್ರೀತಿ, ವಿಶ್ವಾಸ ಸಹಕಾರ ಮನೋಭಾವ ಬೆಳೆಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದರು. ಕೊಡ್ಲಿಪೇಟೆ ಕಲ್ಲುಮಠದ ಮಹಾಂತಸ್ವಾಮೀಜಿ ಮಾತನಾಡಿ, ವೀರಶೈವ ಸಮಾಜದ ಬಾಂಧವರಿಗಾಗಿ ಜಿಲ್ಲಾಮಟ್ಟದ ಗ್ರಾಮೀಣ ಕ್ರೀಡೆಯನ್ನು ಆಯೋಜಿಸಿರುವುದು ಶ್ಲಾಘನೀಯವಾದದ್ದು ಎಂದರು.

ಕ್ರೀಡಾಜ್ಯೋತಿ ಸ್ವೀಕರಿಸಿದ ತಪೋವನ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ, ಯಾವುದೇ ಸಮುದಾಯ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಆ ಸಮುದಾಯದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಬೇಕು’ ಎಂದರು.

ವೀರಶೈವ- ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ಮಾತನಾಡಿ, ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದರು. ಸಮಾಜದಲ್ಲಿ ಪ್ರತಿಯೊಬ್ಬರೂ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಮ್ಯಾರಥಾನ್ ಓಟಗಾರರಾದ ತೊರೆನೂರಿನ ಟಿ.ಎಚ್.ಗಣೇಶ್ ಕ್ರೀಡಾಜ್ಯೋತಿ ಬೆಳಗಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

 ಕಿರಿಕೊಡ್ಲಿಪೇಟೆ ಮಠದ ಸದಾಶಿವ ಸ್ವಾಮೀಜಿ, ವೀರಶೈವ- ಲಿಂಗಾಯತ ಮಹಾಸಭಾದ ರಾಜ್ಯ ಸಮಿತಿಯ ಉಪಾಧ್ಯಕ್ಷೆ ರಾಜೇಶ್ವರಿ ನಾಗರಾಜ್, ರಾಜ್ಯ ಮಾಹಿತಿ ಹಕ್ಕು ಆಯೋಗದ ಮಾಜಿ ಆಯುಕ್ತ ವಿರೂಪಾಕ್ಷಯ್ಯ, ಮಹಾಸಭಾದ ಮಾಜಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಶಾಂಭಶಿವಯ್ಯ, ಉಪಾಧ್ಯಕ್ಷೆ ಡಿ.ಜೆ.ರಶ್ಮಿ, ನಿರ್ದೇಶಕರಾದ ಎಸ್.ಆರ್.ವೀರೇಂದ್ರಕುಮಾರ್, ಎಚ್.ಎಸ್.ಯುವರಾಜ್, ಕೋಶಾಧಿಕಾರಿ ಎಚ್.ಪಿ.ಉದಯ್ ಕುಮಾರ್, ನಿರ್ದೇಶಕ ಎಂ.ಎಸ್.ಗಣೇಶ್, ಮಹಾಸಭಾದ ತಾಲ್ಲೂಕು ಅಧ್ಯಕ್ಷ ಕೆ.ಪಿ.ಆದರ್ಶ್, ಕಾರ್ಯದರ್ಶಿ ಎಂ.ಎನ್.ಚಂದ್ರಶೇಖರ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೋಕ್ಷಿತ್ ರಾಜ್, ಪದಾಧಿಕಾರಿಗಳಾದ ಶಿವಾನಂದ್, ಭರತ್, ಸ್ಥಳೀಯರಾದ ಬಾಲಶಂಕರ್, ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು. ಎನ್.ಎಂ.ಚಂದ್ರಶೇಖರ್ ನಿರ್ವಹಿಸಿದರು.

ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ವೀರಶೈವ ಬಾಂಧವರು ಕ್ರಿಕೆಟ್ ಟೂರ್ನಿ, ಓಟದ ಸ್ಪರ್ಧೆಗಳು, ಥ್ರೋಬಾಲ್, ಹಗ್ಗ ಜಗ್ಗಾಟ , ಗೋಣಿ ಚೀಲದ ಓಟ, ರಂಗೋಲಿ ಬಿಡಿಸುವುದು ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದರು.