ಕೊಡಗು ಜಿಲ್ಲೆಯಲ್ಲಿ‌ ಆಟೋಗಳಿಗೆ 55 ಕಿ.ಮೀ ಪರ್ಮಿಟ್ ನೀಡಬೇಡಿ: ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘ ಒತ್ತಾಯ

ಕೊಡಗು ಜಿಲ್ಲೆಯಲ್ಲಿ‌ ಆಟೋಗಳಿಗೆ 55 ಕಿ.ಮೀ ಪರ್ಮಿಟ್ ನೀಡಬೇಡಿ:  ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘ ಒತ್ತಾಯ

ಮಡಿಕೇರಿ: ಆಟೋಗಳಿಗೆ 55 ಕಿ.ಮೀ ಪರ್ಮಿಟ್ ನೀಡಬಾರದು ಎಂದು ಟ್ಯಾಕ್ಸಿ ಚಾಲಕರು, ಮಾಲೀಕರು ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕೊಡಗು ಜಿಲ್ಲಾ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ 55 ಕಿ.ಮೀ ವರೆಗೆ ಆಟೋ ಸಂಚರಿಸಲು ಅನುಮತಿಗೆ ಆಗ್ರಹಿಸಿ ಸಾರಿಗೆ ಸಚಿವರಿಗೆ ಮನವಿ ಮಾಡಿದ್ದಾರೆ.

ಇದನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಆಗ್ರಹಿಸಿರುವ ಚಾಲಕರು, ಸರ್ಕಾರ ಒತ್ತಾಯದಿಂದ ಅನುಮತಿ ನೀಡಿದ್ದಲ್ಲಿ ಜಿಲ್ಲೆಯಾಧ್ಯಂತ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು. ಜಿಲ್ಲೆಯಲ್ಲಿ ಈಗಾಗಲೇ ರೆಂಟಲ್ ಬೈಕ್‌ಗಳ ಹಾವಳಿಯಿಂದ ಟ್ಯಾಕ್ಸಿ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರ ಜತೆಗೆ ಆಟೋಗಳಿಗೆ 55 ಕಿ.ಮೀ ಪರ್ಮಿಟ್ ನೀಡಿದರೆ, ಜಿಲ್ಲೆಯಲ್ಲಿ ಟ್ಯಾಕ್ಸಿಗಳು ಓಡಾಡಲು ಸಾಧ್ಯವಾಗುವುದಿಲ್ಲ. ಅಲ್ಲದೇ, ಟ್ಯಾಕ್ಸಿಯನ್ನು ನಂಬಿರುವ ಕುಟುಂಬ ಬೀದಿಗೆ ಬರಲಿದೆ. ಆದ್ದರಿಂದ ಇದಕ್ಕೆ ಅವಕಾಶ ನೀಡಬಾರದು ಎಂದು ಪ್ರವಾಸಿ ವಾಹನ ಮಾಲೀಕ ಮತ್ತು ಚಾಲಕರ ಸಂಘ ಅಧ್ಯಕ್ಷ ಸಂತೋಷ್ ಕಾರ್ಯಪ್ಪ ಮನವಿ ಮಾಡಿದರು.

 ಸುದ್ದಿಗೋಷ್ಠಿಯಲ್ಲಿ ಕಾಫಿನಾಡು ಪ್ರವಾಸಿ ವಾಹನ ಚಾಲಕರ ಸಂಘ ಅಧ್ಯಕ್ಷ ಗಗನ್, ಕಾರ್ಯದರ್ಶಿ ಬ್ರಿಜೇಶ, ಚಾಲಕರಾದ ಸತೀಶ್, ಅರಸು ಮುಕ್ಕಾಟಿ, ಖಾದರ್ ಇದ್ದರು.