ಮಾನವನ ಜೀವನದ,ವೈಯುಕ್ತಿಕ ಯಶಸ್ಸಿಗೆ ಶಿಕ್ಷಣವೇ ಮೂಲ ಕಾರಣ: ಅಮೇರಿಕಾ ನಿವಾಸಿ ಡಾ.ಚಂದ್ರಮೌಳಿ

ಮಾನವನ ಜೀವನದ,ವೈಯುಕ್ತಿಕ ಯಶಸ್ಸಿಗೆ ಶಿಕ್ಷಣವೇ ಮೂಲ ಕಾರಣ:  ಅಮೇರಿಕಾ ನಿವಾಸಿ ಡಾ.ಚಂದ್ರಮೌಳಿ

ಸೋಮವಾರಪೇಟೆ:ಶಿಕ್ಷಣ ಎಂಬುದು ಮಾನವನ ಜೀವನದ ಮೂಲಧಾರವಾಗಿದ್ದು, ವೈಯುಕ್ತಿಕ ಯಶಸ್ಸಿಗೂ ಶಿಕ್ಷಣವೇ ಮೂಲ ಕಾರಣವಾಗಿದೆ ಎಂದು ದಾನಿಗಳಾದ ಅಮೇರಿಕಾ ನಿವಾಸಿ ಡಾ.ಚಂದ್ರಮೌಳಿ ಅಭಿಪ್ರಾಯಿಸಿದರು. ಕೊಡಗು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಳೆ ವಿದ್ಯಾರ್ಥಿಗಳ ಸಂಘ, ಶತಮಾನೋತ್ಸವ ಆಚರಣಾ ಸಮಿತಿ ವತಿಯಿಂದ, ಶಾಲಾ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್‌ದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಯೋರ್ವ ಶಾಲಾ ಹಂತದಲ್ಲಿಯೇ ಉತ್ತಮ ಶಿಕ್ಷಣ ಪಡೆದರೆ ಭವಿಷ್ಯದಲ್ಲಿ ಉತ್ತಮ ನಾಗರಿಕನಾಗಿ ಬದುಕಬಹುದು. ವಿದ್ಯಾರ್ಥಿಗಳ ಕೌಶಲ್ಯ, ಜ್ಞಾನವನ್ನು ಹೊರ ತೆಗೆಯಲು ಪ್ರೋತ್ಸಾಹ ಆಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಿಗೆ ಸೌಲಭ್ಯಗಳನ್ನು ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ತಾನು ಓದಿದ ಶಾಲೆಗೆ ಸಹಾಯ ಸಹಕಾರ ಮಾಡುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ ಎಂದು ಹೇಳಿದರು.

ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಶಿಕ್ಷಣದ ಪ್ರಭಾವದಿಂದ ಅಜ್ಞಾನ, ಆಂಧಶ್ರದ್ಧೆ, ಅಸಮಾನತೆ ಮುಂತಾದ ದುರುಳತೆಗಳನ್ನು ನಿವಾರಿಸಬಹುದು. ಪ್ರತಿಯೊಬ್ಬ ಪೋಷಕರು ಶಿಕ್ಷಣದ ಮಹತ್ವವನ್ನು ಅರಿತು ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ಜವಾಬ್ದಾರಿ ಹೊರಬೇಕು. ನಾವು ಸಂಪಾದಿಸಿದ ಹಣದಲ್ಲಿ ಶೇ.10ರಷ್ಟನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಬೇಕು. ಅನೇಕ ಸರ್ಕಾರಿ ಶಾಲೆಗಳು ದಾನಿಗಳ ಸಹಕಾರದಿಂದ ಅಭಿವೃದ್ದಿ ಹೊಂದುತ್ತಿವೆ. ಬೇಳೂರು ಶಾಲೆಯಲ್ಲಿ ಓದಿದ ಬಹುತೇಕ ಮಂದಿ ದೊಡ್ಡ ಹುದ್ದೆಯಲ್ಲಿದ್ದಾರೆ. ಎಲ್ಲರ ಸಹಕಾರ ಶಾಲೆಗಿರಲಿ ಎಂದು ಆಶಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಮಾತನಾಡಿ, ವಿದ್ಯೆ ನೀಡಿದ ಶಾಲೆ ಸ್ವರ್ಗಕ್ಕೆ ಸಮ ಎಂಬುದು ನಮ್ಮೇಲ್ಲರ ನಂಬಿಕೆಯಾಗಿದೆ. ಸರ್ಕಾರಿ ಶಾಲೆಗಳ ನಮ್ಮೆಲ್ಲರ ಕಣ್ಣುಗಳಿದ್ದಂತೆ, ಅವುಗಳನ್ನು ಮುಚ್ಚುವುದಕ್ಕೆ ಅವಕಾಶ ಮಾಡಿಕೊಡಬಾರದು. ಸರ್ಕಾರಿ ಶಾಲೆಗಳಲ್ಲಿ ಓದಿದವರೆ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ, ಖಾಸಗಿ ಹುದ್ದೆಯಲ್ಲಿದ್ದಾರೆ. ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಉಚಿತ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಖಾಸಗಿ ಶಾಲೆಯ ವ್ಯಾಮೋಹ ಕಡಿಮೆಯಾಗಬೇಕು ಈಗಂತೂ ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಇಂಗ್ಲೀಷ್ ಮಾಧ್ಯಮದಲ್ಲೂ ಪಾಠ, ಪ್ರವಚನ ನಡೆಯುತ್ತಿದೆ. ಇಂಗ್ಲೀಷ್ ಕಲಿಕೆಗೆ ಯಾವುದೆ ನಿರ್ಭಂದವಿಲ್ಲ ಎಂದು ಹೇಳಿದರು. ಬೆಳಿಗ್ಗೆ 7 ಗಂಟೆಗೆ ಶಾಲೆಯಲ್ಲಿ ಹೋಮ ಹವನಗಳು ನಡೆದವು. 8.30ಕ್ಕೆ ವಿದ್ಯಾರ್ಥಿಗಳ ವಾದ್ಯಗೋಷ್ಠಿಯೊಂದಿಗೆ ಮಹಿಳೆಯ ಪೂರ್ಣಕುಂಭ ಮೆರವಣಿಗೆ ನಡೆಯಿತು.

ಹಳೆ ವಿದ್ಯಾರ್ಥಿ ಕೆ.ಎ.ಭಾರತೀ ಜಯಕುಮಾರ್ ನಿರ್ಮಿಸಿಕೊಟ್ಟಿರುವ ಪ್ರವೇಶ ದ್ವಾರ ಉದ್ಘಾಟಿಸಲಾಯಿತು. ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಬೆಂಗಳೂರಿನ ಆರ್‌ವಿ ಆಸ್ಪತ್ರೆಯ ವೈದ್ಯರು ಮಕ್ಕಳು ಮತ್ತು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದರು. ಸಭಾ ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಪ್ರಸಾದ್, ಶತಮನೋತ್ಸವ ಸಮಿತಿ ಅಧ್ಯಕ್ಷ ಜಿ.ಎಸ್.ಪ್ರಭುದೇವ್, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಪಿ.ಉಲ್ಲಾಸ್, ಬೇಳೂರು ಗ್ರಾಮಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಉಪಾಧ್ಯಕ್ಷ ಸುದರ್ಶನ್, ಕುಸುಬೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಜೆ.ಗಿರೀಶ್, ಇನ್ನರ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ತನ್ಮಯಿ ಪ್ರವೀಣ್, ಗಣ್ಯರಾದ ಡಾ.ವೇಣುಗೋಪಾಲ್, ಮೋಹನ್, ಹೇಮಂತ್, ಬಸವರಾಜು, ಕೆ.ಜಿ.ಸುರೇಶ್, ಕೆ.ಎನ್.ನಿರ್ಮಲ ಇದ್ದರು.