ಕೌಟುಂಬಿಕ ಕಲಹ: ಪತಿಯ ಕೊಡಲಿ ದಾಳಿಗೆ ಪತ್ನಿ ಬಲಿ

ಕೌಟುಂಬಿಕ ಕಲಹ: ಪತಿಯ ಕೊಡಲಿ ದಾಳಿಗೆ ಪತ್ನಿ ಬಲಿ
ಸಾಂದರ್ಭಿಕ ಚಿತ್ರ

ವಿಜಯನಗರ, ಜ. 1: ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೇ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ 76 ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ. ಝಾನ್ಸಿ (32) ಮೃತ ಮಹಿಳೆ. ಆರೋಪಿಯಾದ ಪತಿ ಸೆಲ್ವಕುಮಾರ್‌ನ್ನು ಪೊಲೀಸರು ಬಂಧಿಸಿದ್ದಾರೆ.

ಸೆಲ್ವಕುಮಾರ್ ಹಾಗೂ ಝಾನ್ಸಿಯ ಮದುವೆ 13 ವರ್ಷಗಳ ಹಿಂದೆ ಕುಟುಂಬಸ್ಥರ ಒಪ್ಪಿಗೆಯೊಂದಿಗೆ ನಡೆದಿತ್ತು. ಆರಂಭಿಕ ವರ್ಷಗಳಲ್ಲಿ ದಾಂಪತ್ಯ ಜೀವನ ಸುಗಮವಾಗಿದ್ದರೂ, ಮಕ್ಕಳಾಗದ ಕೊರಗು ಕ್ರಮೇಣ ದಂಪತಿಗಳ ನಡುವಿನ ಕಲಹಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವೆ ಪದೇಪದೆ ಜಗಳ ನಡೆಯುತ್ತಿತ್ತು. ಈ ನಡುವೆ ಪತ್ನಿಯ ಮೇಲೆ ಪತಿಗೆ ಅನುಮಾನವೂ ಮೂಡಿತ್ತು ಎನ್ನಲಾಗಿದೆ.

ಇತ್ತೀಚೆಗೆ ಪತಿಯೊಂದಿಗೆ ಗಲಾಟೆ ಮಾಡಿಕೊಂಡು ಝಾನ್ಸಿ ತವರುಮನೆ ವೆಂಕಟಾಪುರಕ್ಕೆ ಬಂದು ವಾಸವಾಗಿದ್ದಳು. ಮೂರು ದಿನಗಳ ಹಿಂದೆ ಸೆಲ್ವಕುಮಾರ್ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಬಂದಿದ್ದಾಗ, ಆಕೆ ನಿರಾಕರಿಸಿದ್ದಳು. ಈ ವೇಳೆ ಉಂಟಾದ ಜಗಳವನ್ನು ಕುಟುಂಬಸ್ಥರ ಮಧ್ಯಪ್ರವೇಶದಿಂದ ತಾತ್ಕಾಲಿಕವಾಗಿ ಶಮನಗೊಳಿಸಲಾಗಿತ್ತು.

ಆದರೆ ನಂತರ ಮತ್ತೆ ಪತ್ನಿಯನ್ನು ಕರೆದುಕೊಂಡು ಹೋಗಲು ಬಂದ ಸೆಲ್ವಕುಮಾರ್, ಆಕೆಯ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ವಾಗ್ವಾದಕ್ಕೆ ಇಳಿದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ, ಕೈಯಲ್ಲಿದ್ದ ಕೊಡಲಿಯಿಂದ ಝಾನ್ಸಿ ಮೇಲೆ ದಾಳಿ ನಡೆಸಿದ್ದಾನೆ. ಕುತ್ತಿಗೆ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರ ಗಾಯಗೊಂಡ ಝಾನ್ಸಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಘಟನೆಯ ಬಳಿಕ ಪರಾರಿಯಾಗಿದ್ದ ಸೆಲ್ವಕುಮಾರ್‌ನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮಗಳ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಝಾನ್ಸಿ ಕುಟುಂಬಸ್ಥರು ಆಗ್ರಹಿಸಿದ್ದಾರೆ.