ಮಗಳಿಗೆ ಹಿಂಸೆ ನೀಡುತ್ತಿದ್ದ ಅಳಿಯನ ಹತ್ಯೆ ಮಾಡಿದ ಮಾವ; ರಾಡ್‌ನಿಂದ ಹೊಡೆದು ಕೊಲೆ 

ಮಗಳಿಗೆ ಹಿಂಸೆ ನೀಡುತ್ತಿದ್ದ ಅಳಿಯನ ಹತ್ಯೆ ಮಾಡಿದ ಮಾವ; ರಾಡ್‌ನಿಂದ ಹೊಡೆದು ಕೊಲೆ 
Photo credit: TV09 (ಕೊಲೆಯಾದ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ‌ ಪೊಲೀಸರು)

ಶಿವಮೊಗ್ಗ, ಜ. 2: ಮಗಳಿಗೆ ಪದೇಪದೆ ದೌರ್ಜನ್ಯ ನಡೆಸುತ್ತಿದ್ದ ಅಳಿಯನನ್ನು ಮಾವ ಹಾಗೂ ಪತ್ನಿಯ ಸೋದರ ಮಾವ ಸೇರಿ ರಾಡ್‌ನಿಂದ ಹೊಡೆದು ಕೊಂದ ಘಟನೆ ನಗರದಲ್ಲಿ ನಡೆದಿದೆ. ವಿನೋಬನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಸಮೀಪದ ಶ್ರೀನಿಧಿ ವೈನ್ ಶಾಪ್ ಎದುರು ಈ ಕೊಲೆ ನಡೆದಿದೆ.

ಅರುಣ ಎಂಬ ವ್ಯಕ್ತಿ ವೈನ್ ಶಾಪ್ ಮುಂದೆ ನಿಂತಿದ್ದ ವೇಳೆ, ಅಲ್ಲಿಗೆ ಬಂದ ಇಬ್ಬರು ವ್ಯಕ್ತಿಗಳು ರಾಡ್‌ನಿಂದ ತಲೆಗೆ ಹೊಡೆದಿದ್ದಾರೆ. ಗಂಭೀರ ಗಾಯಗೊಂಡ ಅರುಣ ಸ್ಥಳದಲ್ಲೇ ಮೃತಪಟ್ಟಿದ್ದರು. ಹತ್ಯೆ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಹತ್ಯೆ ನಡೆಸಿದವರು ಅರುಣನ ಮಾವ ತಿಪ್ಪೇಶ್ ಹಾಗೂ ಪತ್ನಿಯ ಸೋದರ ಮಾವ ಲೋಕೇಶ್ ಎಂದು ತಿಳಿದುಬಂದಿದೆ. ಅರುಣ ಮತ್ತು ಯಶಸ್ವಿನಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಮದುವೆಗೆ ಎರಡು ವರ್ಷಗಳಾಗಿದ್ದವು. ದಂಪತಿಗೆ ಒಂದು ಮಗು ಇದೆ.

ಅರುಣ ಕೂಲಿ ಕಾರ್ಮಿಕನಾಗಿದ್ದು, ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯ ಚಟ ಹೊಂದಿದ್ದರು ಎನ್ನಲಾಗಿದೆ. ಮದ್ಯಪಾನದ ನಶೆಯಲ್ಲಿ ಪತ್ನಿಗೆ ಪದೇಪದೆ ಹಿಂಸೆ ನೀಡುತ್ತಿದ್ದ ಕಾರಣ, ಕೆಲವು ತಿಂಗಳಿನಿಂದ ಯಶಸ್ವಿನಿ ತವರು ಮನೆಯಲ್ಲಿ ವಾಸವಾಗಿದ್ದರು. ಈ ನಡುವೆ, ಪತ್ನಿಯ ಕುಟುಂಬದ ಸದಸ್ಯರಿಗೆ ಬೆದರಿಕೆ ಹಾಕುತ್ತಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಮಗಳಿಗೆ ಆಗುತ್ತಿದ್ದ ದೌರ್ಜನ್ಯವನ್ನು ಸಹಿಸಲಾಗದೆ, ಮಾವ ಹಾಗೂ ಸಂಬಂಧಿ ಸೇರಿ ಅಳಿಯನನ್ನು ಹತ್ಯೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.