ಅಪಘಾತದಲ್ಲಿ ಹಣಕಾಸು ಸಚಿವಾಲಯದ ಅಧಿಕಾರಿ ಮೃತ್ಯು; ಬಿಎಂಡಬ್ಲ್ಯೂ ಚಲಾಯಿಸುತ್ತಿದ್ದ ಮಹಿಳೆಯ ಬಂಧನ ಹತ್ತಿರ ಆಸ್ಪತ್ರೆ ಬಿಟ್ಟು 19 ಕಿ.ಮೀ. ದೂರದ ಆಸ್ಪತ್ರೆಗೆ ಕೊಂಡೊಯ್ದ ಚಲಾಕಿ!

ಅಪಘಾತದಲ್ಲಿ ಹಣಕಾಸು ಸಚಿವಾಲಯದ ಅಧಿಕಾರಿ ಮೃತ್ಯು; ಬಿಎಂಡಬ್ಲ್ಯೂ ಚಲಾಯಿಸುತ್ತಿದ್ದ ಮಹಿಳೆಯ ಬಂಧನ  ಹತ್ತಿರ ಆಸ್ಪತ್ರೆ ಬಿಟ್ಟು 19 ಕಿ.ಮೀ. ದೂರದ ಆಸ್ಪತ್ರೆಗೆ ಕೊಂಡೊಯ್ದ ಚಲಾಕಿ!
Photo credit: NDTV

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿ ನವಜೋತ್ ಸಿಂಗ್ (52) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರಕರಣದಲ್ಲಿ, ಬಿಎಂಡಬ್ಲ್ಯೂ ಕಾರು ಚಾಲಕಿ ಗಗನ್‌ಪ್ರೀತ್ ಕೌರ್ (38) ಅವರನ್ನು ಪೊಲೀಸರು 24 ಗಂಟೆಗಳೊಳಗೆ ಬಂಧಿಸಿದ್ದಾರೆ.

ಗಗನ್‌ಪ್ರೀತ್ ವಿರುದ್ಧ ಅಪರಾಧಿ ನರಹತ್ಯೆ, ಸಾಕ್ಷ್ಯ ನಾಶ ಮತ್ತು ನಿರ್ಲಕ್ಷ್ಯದ ಚಾಲನೆ ಪ್ರಕರಣ ದಾಖಲಾಗಿದೆ. ಬಂಧನದ ವೇಳೆ ಅವರು ಜಿಟಿಬಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

 ಅಪಘಾತ ಭಾನುವಾರ ಮಧ್ಯಾಹ್ನ ದೆಹಲಿ ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿತು. ನವಜೋತ್ ಸಿಂಗ್ ಪತ್ನಿ ಸಂದೀಪ್ ಕೌರ್ ಜೊತೆ ಗುರುದ್ವಾರದಿಂದ ಮರಳುತ್ತಿದ್ದಾಗ, ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಅವರ ಬೈಕ್‌ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು. ನವಜೋತ್ ತೀವ್ರ ಗಾಯಗೊಂಡು, ಆಸ್ಪತ್ರೆಯಲ್ಲಿ ಮೃತಪಟ್ಟರು.

 ಅಪಘಾತದ ಸಮಯದಲ್ಲಿ ಗಗನ್‌ಪ್ರೀತ್ ಅವರ ಪತಿ ಪರೀಕ್ಷಿತ್ ಮಕ್ಕಡ್ (40) ಸಹ ಕಾರಿನಲ್ಲಿದ್ದು, ಎಫ್‌ಐಆರ್‌ನಲ್ಲಿ ಅವರ ಹೆಸರೂ ಸೇರಿಸಲಾಗಿದೆ. ಗುರುಗ್ರಾಮ್‌ ನಲ್ಲಿ ವಾಸಿಸುವ ಈ ದಂಪತಿ ಐಷಾರಾಮಿ ಉತ್ಪನ್ನಗಳ ವ್ಯವಹಾರ ನಡೆಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ನವಜೋತ್ ಅವರ ಪತ್ನಿ ಸಂದೀಪ್ ಕೌರ್ ನೀಡಿದ ಮಾಹಿತಿಯ ಪ್ರಕಾರ, ಅಪಘಾತದ ಬಳಿಕ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕಾಗಿದ್ದರೂ, ಆಂಬ್ಯುಲೆನ್ಸ್ ನ ಚಾಲಕನಿಗೆ ಗಗನ್‌ಪ್ರೀತ್ 19 ಕೀ.ಮೀ. ದೂರದ ಜಿಟಿಬಿ ನಗರದ ನುಲೈಫ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಳು.

ಪೊಲೀಸ್ ಮೂಲಗಳ ಪ್ರಕಾರ, ಗಗನ್‌ಪ್ರೀತ್ ಳ ತಂದೆ ಆ ಆಸ್ಪತ್ರೆಗೆ ಸಹ-ಮಾಲೀಕರಾಗಿದ್ದು, ವೈದ್ಯಕೀಯ ದಾಖಲೆ ತಿದ್ದುಪಡಿ ಸೇರಿದಂತೆ ಸಾಕ್ಷ್ಯ ನಾಶಕ್ಕೆ ಪ್ರಯತ್ನ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಚ್ಚಿಹಾಕಲು ಒತ್ತಡ ಹೇರುವ ಯತ್ನವಾಗಿತ್ತೆ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.