ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20: ಕಟಕ್‌ನಲ್ಲಿ ಭಾರತಕ್ಕೆ 101 ರನ್‌ಗಳ ಭರ್ಜರಿ ಜಯ

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20: ಕಟಕ್‌ನಲ್ಲಿ ಭಾರತಕ್ಕೆ 101 ರನ್‌ಗಳ ಭರ್ಜರಿ ಜಯ

ಕಟಕ್: ಬಾರಾಬತಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಶಕ್ತಿಶಾಲಿ ಪ್ರದರ್ಶನ ನೀಡಿ ದಕ್ಷಿಣ ಆಫ್ರಿಕಾವನ್ನು 101 ರನ್ ಗಳ ಅಂತರದಲ್ಲಿ ಮಣಿಸಿದೆ.

176 ರನ್‌ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಆರಂಭದಿಂದಲೇ ಒತ್ತಡಕ್ಕೆ ಸಿಲುಕಿದ್ದು, ಭಾರತೀಯ ಬೌಲರ್‌ಗಳ ನಿಯಂತ್ರಿತ ಬೌಲಿಂಗ್ ಎದುರಿಸಲು ವಿಫಲವಾಯಿತು. ಕೇವಲ 12.3 ಓವರ್‌ಗಳಲ್ಲಿ 74 ರನ್‌ಗಳಿಗೆ ಆಲೌಟ್ ಆದ ಅತಿಥಿ ತಂಡದಲ್ಲಿ ಡೆವಾಲ್ಡ್ ಬ್ರೆವಿಸ್ (22) ಮಾತ್ರ ಸ್ವಲ್ಪ ಪ್ರತಿರೋಧ ತೋರಿದರೆ, ಇತರರಿಂದ ನಿರೀಕ್ಷಿತ ಪ್ರದರ್ಶನ ಸಿಗಲಿಲ್ಲ.

ಭಾರತದ ಬೌಲಿಂಗ್ ದಾಳಿಯಲ್ಲಿ ಅರ್ಶದೀಪ್ ಸಿಂಗ್, ಜಸ್ಪೃತ್ ಬುಮ್ರಾ, ವರುಣ್ ಚಕ್ರವರ್ತಿ ಮತ್ತು ಅಕ್ಸರ್ ಪಟೇಲ್ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿ ದಕ್ಷಿಣ ಆಫ್ರಿಕಾದ ವಿಕೆಟ್ ಮುರಿದರು. ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮುಂಚೆ, ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ನಿರ್ಧಾರ ಭಾರತಕ್ಕೆ ಲಾಭಕಾರಿಯಾಯಿತು. ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಭಾರತ 175 ರನ್‌ಗಳನ್ನು ಪೇರಿಸಿತು. ಮಧ್ಯಮ ಕ್ರಮಾಂಕದಲ್ಲಿ ಆಡಾದ ಹಾರ್ದಿಕ್ ಪಾಂಡ್ಯ 28 ಎಸೆತಗಳಲ್ಲಿ 59 ರನ್ ಬಾರಿಸಿ ರನ್ ಗಳಿಕೆಗೆ ಏರು ಗತಿ ನೀಡಿದರು. ಅವರ ಇನ್ನಿಂಗ್ಸ್‌ ನಲ್ಲಿ 4 ಸಿಕ್ಸರ್‌ಗಳು, 6 ಬೌಂಡರಿಗಳು ಸೇರಿದ್ದವು. ತಿಲಕ್ ವರ್ಮಾ (26), ಅಕ್ಸರ್ ಪಟೇಲ್ (23) ಮತ್ತು ಸೂರ್ಯಕುಮಾರ್ ಯಾದವ್ (12) ಉಪಯುಕ್ತ ಕೊಡುಗೆ ನೀಡಿದರು.