ಫುಟ್ಬಾಲ್ ದಿಗ್ಗಜ‌ ಕ್ರಿಸ್ಟಿಯಾನೊ ರೊನಾಲ್ಡೊ ಭಾರತದಲ್ಲಿ ಆಡುವ ಸಾಧ್ಯತೆ!: ಯಾವ ಲೀಗ್! ಏನ್ ವಿಷಯ ಗೊತ್ತೇ!

ಫುಟ್ಬಾಲ್ ದಿಗ್ಗಜ‌ ಕ್ರಿಸ್ಟಿಯಾನೊ ರೊನಾಲ್ಡೊ ಭಾರತದಲ್ಲಿ ಆಡುವ ಸಾಧ್ಯತೆ!: ಯಾವ ಲೀಗ್! ಏನ್ ವಿಷಯ ಗೊತ್ತೇ!
ಕ್ರಿಸ್ಟಿಯಾನೋ ರೊನಾಲ್ಡೊ

ಹೊಸದಿಲ್ಲಿ: ಎಎಫ್‌ಸಿ ಚಾಂಪಿಯನ್ಸ್ ಲೀಗ್-2ರ ಗ್ರೂಪ್ ಹಂತದ ಡ್ರಾ ಪ್ರಕ್ರಿಯೆ ಶುಕ್ರವಾರ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದಿದ್ದು, ಎಫ್‌ಸಿ ಗೋವಾ ತಂಡವು 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಮೇನಲ್ಲಿ ಸೂಪರ್ ಕಪ್ ಪ್ರಶಸ್ತಿ ಗೆದ್ದ ಹಿನ್ನೆಲೆಯಲ್ಲಿ ಗೋವಾ ತಂಡವು ಸ್ಪರ್ಧಾವಳಿಯ ಪ್ಲೇ ಆಫ್ ಸುತ್ತಿನಲ್ಲಿ ಸ್ಥಾನ ಪಡೆದಿದೆ. ಗೋವಾ ಎಫ್‌ಸಿ ಸೌದಿ ಅರೇಬಿಯದ ಅಲ್ ನಸರ್, ಇರಾಕ್ ನ ಅಲ್ ಝವ್ರಾ ಹಾಗೂ ತಜಕಿಸ್ತಾನದ ಇಸ್ಟಿಕೋಲ್ ತಂಡಗಳ ಜೊತೆಗೆ 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದೆ.

ಪೋರ್ಚುಗೀಸ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅಲ್ ನಸರ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಹೀಗಾಗಿ ರೊನಾಲ್ಡೊ ಅವರು ವೃತ್ತಿಜೀವನದಲ್ಲಿ ಮೊದಲ ಬಾರಿ ಭಾರತೀಯ ಕ್ಲಬ್ ಅನ್ನು ಎದುರಿಸುವ ಸಾಧ್ಯತೆಯಿದೆ. ಅಲ್ ನಸರ್ ಹಾಗೂ ಗೋವಾ ಒಂದೇ ಗುಂಪಿನಲ್ಲಿರುವ ಕಾರಣ ರೊನಾಲ್ಡೊ ಅವರು ಭಾರತದಲ್ಲಿ ಆಡುವ ಕುರಿತು ಅಭಿಮಾನಿಗಳಲ್ಲಿ ಭರವಸೆಯನ್ನು ಹುಟ್ಟು ಹಾಕಿದೆ. ರೊನಾಲ್ಡೊ ಭಾರತದಲ್ಲಿ ಆಡುವ ಕುರಿತು ಇನ್ನೂ ಖಚಿತವಾಗಿಲ್ಲ. ವರದಿಗಳ ಪ್ರಕಾರ ಅವರ ಒಪ್ಪಂದವು ವಿದೇಶ ಪ್ರವಾಸದ ಷರತ್ತುಗಳನ್ನು ಒಳಗೊಂಡಿದೆ.

 40ರ ವಯಸ್ಸಿನ ರೊನಾಲ್ಡೊ ಅವರು ಇತ್ತೀಚೆಗೆ ಅಲ್ ನಸರ್ ಫುಟ್ಬಾಲ್ ಕ್ಲಬ್ ನೊಂದಿಗೆ ತನ್ನ ಒಪ್ಪಂದವನ್ನು 2027ರ ತನಕ ವಿಸ್ತರಿಸಿದ್ದರು. ರೊನಾಲ್ಡೊ ಅವರು ಫಿಟ್ ಆಗಿ, ಲಭ್ಯವಿದ್ದರೆ ಗೋವಾ ಎಫ್ ಸಿ ವಿರುದ್ಧದ ಪಂದ್ಯವು ರೊನಾಲ್ಡೊ ಅವರ ಭಾರತೀಯ ತಂಡದೊಂದಿಗಿನ ಮೊದಲ ಸ್ಪರ್ಧಾತ್ಮಕ ಪಂದ್ಯವಾಗಲಿದೆ.