ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಆಡಿಟೋರಿಯಂ ಪುನಶ್ಚೇತನಕ್ಕೆ ಡಾ. ಮಂತರ್ ಗೌಡ ಸೂಚನೆ

ಮಡಿಕೇರಿ:ಸ್ವಾತಂತ್ರ್ಯ ಪೂರ್ವದಲ್ಲಿ ಕೊಡಗಿನ ಶಿಕ್ಷಣ ಕಾಶಿಯೆಂದೇ ಪ್ರಖ್ಯಾತ ಗಳಿಸಿದ್ದ ಮೆರ್ಕಾರ ಸೆಂಟ್ರಲ್ ಹೈ ಸ್ಕೂಲ್ ( ಸರ್ಕಾರಿ ಪದವಿಪೂರ್ವ ಕಾಲೇಜು) ನಲ್ಲಿ ಹಳೆಯ ವಿಧ್ಯಾರ್ಥಿಗಳ ಪರಿಶ್ರಮದ ಫಲವಾಗಿ ಭವ್ಯವಾಗಿ ಇಪ್ಪತೈದು ವರ್ಪಗಳ ಹಿಂದೆ ನಿರ್ಮಾಣವಾಗಿ ಈಗ ದುಸ್ಥಿತಿಯಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವಿವಿಧೋದ್ದೇಶ ಸಭಾಂಗಣಕ್ಕೆ ಹೊಸ ಕಾಯಕಲ್ಪ ನೀಡಲು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ಮುಂದಾಗಿದ್ದಾರೆ.
ಶುಕ್ರವಾರ ಅಧಿಕಾರಿಗಳು ಮತ್ತು ಮುಖಂಡರೊಂದಿಗೆ ಆಡಿಟೋರಿಯಂ ಗೆ ಭೇಟಿ ನೀಡಿದ ಮಂತರ್ ಗೌಡ ರವರು ಸಭಾಂಗಣದ ಸ್ಥಿತಿಗತಿಯನ್ನು ಪರಿಶೀಲಿಸಿದರು. ಇಪ್ಪತೈದು ವರ್ಷದ ಹಿಂದೆ ಕೊಡಗು ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷರಾದ ಜಮ್ಮಡ ಕರುಂಬಯ್ಯ ಮತ್ತು ಅವರ ಅನೇಕ ಒಡನಾಡಿಗಳು ಹಳೆಯ ವಿಧ್ಯಾರ್ಥಿಗಳನ್ನು ಒಗ್ಗೂಡಿಸಿ ಸಂಘವನ್ನು ಸ್ಥಾಪಿಸಿ ಅಂದಿನ ಕಾಲದಲ್ಲಿಯೇ 2 ಕೋಟಿ ರೂ ವೆಚ್ಚದಲ್ಲಿ ಬೃಹತ್ ಸಭಾಂಗಣವನ್ನು ನಿರ್ಮಾಣ ಮಾಡಿರುವುದು ನಮ್ಮ ಹಿರಿಯರ ಘನತೆಯನ್ನು ಎತ್ತಿಹಿಡಿದಿದೆ.ಅವರ ಅಸ್ಮಿತೆಯ ಪ್ರತೀಕವಾಗಿರುವ ಸಭಾಂಗಣ ವನ್ನು ಸುಸ್ಥಿತಿಯಲ್ಲಿಡುವುದು ತಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದ ಡಾ ಮಂತರ್ ಗೌಡರವರು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅಭಿವೃದ್ಧಿ ಪಡಿಸಲು ಅಂದಾಜು ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭಾಂಗಣದ ಶಂಕುಸ್ಥಾಪನೆ ಗೆ ಅಂದಿನ ಕರ್ನಾಟಕದ ರಾಜ್ಯಪಾಲರಾಗಿದ್ದ ಖುರ್ಷಿದ್ ಅಲಂ ಖಾನ್ ಹಾಗೂ ಸಭಾಂಗಣದ ಉದ್ಘಾಟಣೆಗೆ ಅಂದಿನ ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿದ್ದ ವಿ.ಎಸ್.ರಮಾದೇವಿ ಯವರು ಆಗಮಿಸಿದ್ದ ಬಗ್ಗೆ ಮಾಹಿತಿ ಪಡೆದ ಶಾಸಕರು ಹಳೆಯ ವಿಧ್ಯಾರ್ಥಿ ಸಂಘದ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಪಿ.ಆರ್.ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ,ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಪ್ರಭು ರೈ,ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ,ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ರವಿ ಗೌಡ,ನಗರ ಸಭಾ ಸದಸ್ಯರಾದ ಮಂಡಿರ ಸದಾ ಮುದ್ದಪ್ಪ, ಜಿ.ಸಿ.ಜಗದೀಶ್. ಪ್ರಮುಖರಾದ ವಿ.ಜಿ.ಮೋಹನ್,ಚಂದ್ರಶೇಖರ್,ಕೊತ್ತೊಳಿ ಕವನ್,ವಸಂತ್ ಭಟ್ ,ನಗರ ಸಭೆಯ ಇಂಜಿನಿಯರ್ ಗಳು ಪರಿಶೀಲನೆ ಸಂಧರ್ಭದಲ್ಲಿ ಉಪಸ್ಥಿತರಿದ್ದರು.