ದೆಹಲಿಯ ಕೆಂಪುಕೋಟೆಯ ಬಳಿ ಕಾರು ಸ್ಪೋಟ ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ

ದೆಹಲಿಯ ಕೆಂಪುಕೋಟೆಯ ಬಳಿ ಕಾರು ಸ್ಪೋಟ ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ

ಮಡಿಕೇರಿ: ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಶನಿವಾರ ಜಮಾಯಿಸಿದ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ದೆಹಲಿಯ ಕೆಂಪುಕೋಟೆಯ ಬಳಿ ಭಯೋತ್ಪಾಧಕ ಬಾಂಬ್ ಸ್ಪೋಟ ಖಂಡಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಸಂದರ್ಭ ಪೊಲೀಸರು ಮತ್ತು ಪ್ರತಿಭಟನಾ ನಿರತರ ನಡುವೆ ಮಾತಿನ ಚಕಮಕಿ ನಡೆಯಿತು.

 ಜನರಲ್ ತಿಮ್ಮಯ್ಯ ವೃತ್ತದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ಇಲ್ಲಿ ಪ್ರತಿಭಟನೆ ಮಾಡಬಾರದು ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂದರ್ಭ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನಚಕಮಕಿ ನಡೆಯಿತು.

 ನಂತರ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ದೇಶದ್ರೋಹಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಹಿಂದು ಜಾಗರಣ ವೇದಿಕೆ ಪ್ರಮುಖರಾದ ಕುಕ್ಕೇರ ಅಜಿತ್ ಮಾತನಾಡಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದೂ ಸಮಾಜವನ್ನು ಬಲಿಕೊಡುವ ಹುನ್ನಾರ ನಡೆಯುತ್ತಿದೆ. ಹಿಂದೂಗಳು ಜಾಗೃತರಾಗಬೇಕು ಎಂದ ಅವರು, ದೇಶದ್ರೋಹದ ವಿರುದ್ಧ ಪ್ರತಿಭಟನೆ ಮಾಡಲು ಮುಂದಾದರೇ ಪೊಲೀಸರು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಇಂದಿನ ಆಡಳಿತ ವ್ಯವಸ್ಥೆ ಯಾರಪರವಿದೆ ಎಂಬುದನ್ನು ಪ್ರತಿಯೊಬ್ಬ ಹಿಂದೂ ಮನಗಾಣಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿಕಾಳಪ್ಪ, ನಗರಸಭೆ ಅಧ್ಯಕ್ಷೆ ಕಲಾವತಿ ಸೇರಿದಂತೆ ಹಿಂದು ಕಾರ್ಯಕರ್ತರು, ನಗರಸಭೆ ಬಿಜೆಪಿ ಸದಸ್ಯರು, ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.