ಕಟ್ಟಡದ ಮೇಲಿನಿಂದ ತಳ್ಳಿ ಪತಿಯ ಕೊಲೆ: ಪತ್ನಿ–ಸೋದರ ಮಾವ ಬಂಧನ

ಕಟ್ಟಡದ ಮೇಲಿನಿಂದ ತಳ್ಳಿ ಪತಿಯ ಕೊಲೆ: ಪತ್ನಿ–ಸೋದರ ಮಾವ ಬಂಧನ
Photo credit: TV09

ಬೆಂಗಳೂರು, ನ. 17: ಅಂದ್ರಹಳ್ಳಿಯ ಮಂಜುನಾಥ ಬಡಾವಣೆಯಲ್ಲಿ ಪತ್ನಿಯೇ ಸೋದರ ಮಾವನ ಸಹಾಯದಿಂದ ಪತಿಯನ್ನು ಕಟ್ಟಡದ ಮೇಲಿನಿಂದ ತಳ್ಳಿ ಕೊಲೆ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಬ್ಯಾಡರಹಳ್ಳಿ ಪೊಲೀಸರು ಪತ್ನಿ ಪಾರ್ವತಿ ಮತ್ತು ಆಕೆಯ ಸೋದರ ಮಾವ ರಂಗಸ್ವಾಮಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮೃತ ವೆಂಕಟೇಶ್ (65) ಅವರು ಮೊದಲ ಪತ್ನಿಯಿಂದ ದಶಕದ ಹಿಂದೆ ದೂರವಾಗಿದ್ದರು. ಆರು ವರ್ಷಗಳ ಹಿಂದೆ ಪಾರ್ವತಿಯನ್ನು ಮದುವೆಯಾಗಿದ್ದ ಅವರು, ಮದುವೆಯಾದ ನಂತರದಿಂದಲೇ ಆಸ್ತಿ ಮತ್ತು ಹಣದ ವಿಷಯದಲ್ಲಿ ದಂಪತಿ ನಡುವೆ ಅಸಮಾಧಾನ ಮುಂದುವರಿಯುತ್ತಿತ್ತು. ಮನೆಯನ್ನು ತನ್ನ ಹೆಸರಿಗೆ ಬರೆದು ಕೊಡಬೇಕೆಂದು, ಇಲ್ಲವಾದಲ್ಲಿ 6 ಲಕ್ಷ ರೂ. ಕೊಡಬೇಕೆಂದು ಪಾರ್ವತಿ ಆಗಾಗ ಒತ್ತಾಯಿಸುತ್ತಿದ್ದರೆ, ವೆಂಕಟೇಶ್ 2.5 ಲಕ್ಷ ರೂ. ನೀಡಲು ಮಾತ್ರ ಸಮ್ಮತಿಸಿದ್ದರು.

ಮಂಗಳವಾರವೂ ಇದೇ ವಿಚಾರವಾಗಿ ದಂಪತಿಗಳ ನಡುವೆಯೇ ಜಗಳ ನಡೆದಿದೆ. ರಾತ್ರಿ 9 ಗಂಟೆ ವೇಳೆಗೆ ವೆಂಕಟೇಶ್, ಪಾರ್ವತಿಯನ್ನು ಮನೆಯಿಂದ ಹೊರಹಾಕಿದ್ದಾರೆ. ತಕ್ಷಣ ತನ್ನ ಸೋದರ ಮಾವ ರಂಗಸ್ವಾಮಿಗೆ ಕರೆ ಮಾಡಿದ ಪಾರ್ವತಿ, ಇಬ್ಬರೂ ಸೇರಿ ಕಟ್ಟಡದ ಮೇಲಿದ್ದ ವೆಂಕಟೇಶ್ ಅವರನ್ನು ತಳ್ಳಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಬಿದ್ದು ತಲೆಗೆ ಗಂಭೀರ ಪೆಟ್ಟಾದ ವೆಂಕಟೇಶ್ ಮೇಲೆ ಆರೋಪಿಗಳು ಇಬ್ಬರೂ ಮತ್ತೊಮ್ಮೆ ಹಲ್ಲೆ ನಡೆಸಿದ್ದಾರೆ. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಬ್ಯಾಡರಹಳ್ಳಿ ಪೊಲೀಸರು, ಆರೋಪಿ ಪತ್ನಿ ಮತ್ತು ಸೋದರ ಮಾವನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.