ಐಸಿಸಿ ಏಕದಿನ ರ‍್ಯಾಂಕಿಂಗ್ಸ್: ರೋಹಿತ್ ನಂ.1; ವಿರಾಟ್ ಎರಡನೇ ಸ್ಥಾನಕ್ಕೆ ಭಡ್ತಿ
ಮುಂಬೈ, ಡಿ.10: ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಇತ್ತೀಚಿನ ಏಕದಿನ ರ‍್ಯಾಂಕಿಂಗ್ಸ್‌ನಲ್ಲಿ ಭಾರತೀಯ ಬ್ಯಾಟರ್‌ಗಳು ಅಗ್ರಸ್ಥಾನಗಳನ್ನು ಮರುಸ್ಥಾಪಿಸಿದ್ದಾರೆ. ನಾಯಕ ರೋಹಿತ್ ಶರ್ಮಾ ನಂ.1 ಬ್ಯಾಟರ್ ಸ್ಥಾನವನ್ನು ಕಾಪಾಡಿಕೊಂಡರೆ, ಹಿರಿಯ ಆಟಗಾರ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನದಿಂದ ಎರಡನೇ ಸ್ಥಾನಕ್ಕೆ ಏರಿದ್ದಾರೆ.
37ರ ಹರೆಯದ ಕೊಹ್ಲಿ 2021ರ ಏಪ್ರಿಲ್ ನಂತರ ಮೊದಲ ಬಾರಿಗೆ ನಂ.1 ಸ್ಥಾನ ಮುಟ್ಟುವಷ್ಟು ಸಮೀಪಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸತತ ಎರಡು ಶತಕ ಹಾಗೂ ಒಂದು ಅರ್ಧಶತಕ ಬಾರಿಸಿದ ಅವರು ರ‍್ಯಾಂಕಿಂಗ್‌ನಲ್ಲಿ ಎರಡು ಹಂತ ಮೇಲೇರಿದ್ದಾರೆ. ಸರಣಿಯಲ್ಲಿ ಒಟ್ಟು 302 ರನ್ ಗಳಿಸಿದ ಕೊಹ್ಲಿಗೆ ‘ಸರಣಿಶ್ರೇಷ್ಠ’ ಗೌರವ ದೊರಕಿತ್ತು.
ಸರಣಿಯಲ್ಲಿ 146 ರನ್ ಬಾರಿಸಿದ ರೋಹಿತ್‌ಗಿಂತ ಕೊಹ್ಲಿ ಕೇವಲ 8 ರೇಟಿಂಗ್ ಅಂಕಗಳಿಂದ ಹಿಂದೆ ಇದ್ದರು.
ಜನವರಿ 11ರಿಂದ ನ್ಯೂಝಿಲ್ಯಾಂಡ್ ವಿರುದ್ಧ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿ, ರೋಹಿತ್–ವಿರಾಟ್‌ಗೆ ಅಗ್ರಸ್ಥಾನಗಳನ್ನು ಮತ್ತಷ್ಟು ಬಿಗಿಗೊಳಿಸಲು ನೆರವಾಗಲಿದೆ.
ಕೆ.ಎಲ್. ರಾಹುಲ್ ಎರಡು ಹಂತ ಪ್ರಗತಿ ಕಂಡು 12ನೇ ಸ್ಥಾನಕ್ಕೇರಿದ್ದಾರೆ.
ಬೌಲಿಂಗ್ ರ‍್ಯಾಂಕಿಂಗ್ಸ್‌ನಲ್ಲಿ ಕುಲದೀಪ್ ಯಾದವ್ ಮೂರು ಸ್ಥಾನ ಏರಿಕೆ ಕಂಡು ಮೂರನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್, ಏಡೆನ್ ಮರ್ಕ್ರಮ್ ಮತ್ತು ಟೆಂಬಾ ಬವುಮಾ ಸರಣಿ 1–2ರಿಂದ ಸೋತಿದ್ದರೂ ರ‍್ಯಾಂಕಿಂಗ್‌ಗಳಲ್ಲಿ ಮುನ್ನಡೆಯಿದ್ದಾರೆ.
ಟಿ-20 ರ‍್ಯಾಂಕಿಂಗ್ಸ್‌ನಲ್ಲಿ ಕಟಕ್‌ನಲ್ಲಿ ಮಂಗಳವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತ 101 ರನ್‌ಗಳಿಂದ ಗೆದ್ದ ನಂತರ ಅಕ್ಷರ್ ಪಟೇಲ್ (13ನೇ), ಅರ್ಷದೀಪ್ ಸಿಂಗ್ (20ನೇ) ಮತ್ತು ಜಸ್‌ಪ್ರಿತ್ ಬುಮ್ರಾ (25ನೇ) ಸ್ಥಾನ ಮೇಲಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾದ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ ಟಿ-20 ಟಾಪ್-10 ಬ್ಯಾಟರ್‌ಗಳ ಪಟ್ಟಿಗೆ ಸೇರಿದ್ದಾರೆ.
ಆ್ಯಶಸ್ ಸರಣಿಯ ಮೊದಲ ಎರಡು ಟೆಸ್ಟ್‌ಗಳಲ್ಲಿ 18 ವಿಕೆಟ್‌ಗಳನ್ನು ಪಡೆದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್ಸ್‌ನಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ನ್ಯೂಝಿಲ್ಯಾಂಡ್‍ನ ರಚಿನ್ ರವೀಂದ್ರ 9 ಹಂತ ಏರಿಕೆ ಕಂಡು 15ನೇ ಸ್ಥಾನಕ್ಕೆ ಬಂದಿದ್ದಾರೆ. ನ್ಯೂಝಿಲ್ಯಾಂಡ್ ನಾಯಕ ಟಾಮ್ ಲ್ಯಾಥಮ್, ವೆಸ್ಟ್‌ಇಂಡೀಸ್‌ನ ಶಾಯ್ ಹೋಪ್ ಹಾಗೂ ಜಸ್ಟಿನ್ ಗ್ರೀವ್ಸ್ ತಮ್ಮ ತಮ್ಮ ವಿಭಾಗಗಳಲ್ಲಿ ಪ್ರಗತಿಯನ್ನು ಸಾಧಿಸಿದ್ದಾರೆ.
