ಐಪಿಎಲ್‌–2026 ಮಿನಿ ಹರಾಜು | 25.20 ಕೋಟಿ ರೂ.ಗೆ ಕೆಕೆಆರ್‌ ಪಾಲಾದ ಕ್ಯಾಮರೂನ್ ಗ್ರೀನ್

ಐಪಿಎಲ್‌–2026 ಮಿನಿ ಹರಾಜು | 25.20 ಕೋಟಿ ರೂ.ಗೆ ಕೆಕೆಆರ್‌ ಪಾಲಾದ ಕ್ಯಾಮರೂನ್ ಗ್ರೀನ್

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) 2026ರ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅತಿ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್‌ (ಕೆಕೆಆರ್‌) ತಂಡವು ಅವರನ್ನು 25.20 ಕೋಟಿ ರೂ.ಗೆ ಅವರನ್ನು ಖರೀದಿಸಿದೆ.

ಈ ಬಾರಿ ಹರಾಜಿನಲ್ಲಿ ಹತ್ತು ಫ್ರಾಂಚೈಸಿಗಳಲ್ಲಿ ಒಟ್ಟು 77 ಸ್ಥಾನಗಳು ಮಾತ್ರ ಖಾಲಿ ಉಳಿದಿವೆ. ಈ ಸ್ಥಾನಗಳನ್ನು ಭರ್ತಿ ಮಾಡಲು ತಂಡಗಳಿಗೆ ಒಟ್ಟಾರೆ 237.55 ಕೋಟಿ ರೂ.ವರೆಗೆ ವೆಚ್ಚ ಮಾಡುವ ಅವಕಾಶವಿದೆ. ಹರಾಜಿನ ಬಳಿಕ ತಂಡಗಳು ಕನಿಷ್ಠ 18 ಹಾಗೂ ಗರಿಷ್ಠ 25 ಆಟಗಾರರನ್ನು ಹೊಂದಿರಬಹುದು.

ಹರಾಜಿನ ಮೊದಲ ಆಟಗಾರರಾಗಿ ಆಸ್ಟ್ರೇಲಿಯಾದ ಜೇಕ್ ಫ್ರೇಸರ್–ಮ್ಯಾಕ್‌ಗರ್ಕ್ ಹೆಸರು ಕೂಗಿದರೂ ಯಾವುದೇ ತಂಡದಿಂದ ಬಿಡ್ಡಿಂಗ್ ನಡೆಯಲಿಲ್ಲ. ಬಳಿಕ ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್‌ಗೆ ಮೊದಲ ಬೇಡಿಕೆ ಕಂಡುಬಂದಿದ್ದು, ಅವರು ತಮ್ಮ ಮೂಲಬೆಲೆ 2 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾದರು.

ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದ ಕ್ಯಾಮರೂನ್ ಗ್ರೀನ್‌ಗಾಗಿ ಆರಂಭದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಪೈಪೋಟಿಗೆ ಇಳಿದವು. ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ಸ್ಪರ್ಧೆಗೆ ಪ್ರವೇಶಿಸಿತು. 13.60 ಕೋಟಿ ರೂ. ಹಂತದಲ್ಲಿ ರಾಜಸ್ಥಾನ ತಂಡ ಹಿಂದೆ ಸರಿದರೆ, ಚೆನ್ನೈ ಸೂಪರ್ ಕಿಂಗ್ಸ್ ಬಿಡ್ಡಿಂಗ್‌ಗೆ ಕಾಲಿಟ್ಟಿತು. ಕೆಕೆಆರ್ ಮತ್ತು ಸಿಎಸ್‌ಕೆ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ ಕೊನೆಗೆ ಗ್ರೀನ್ 25.20 ಕೋಟಿ ರೂ.ಗೆ ಕೆಕೆಆರ್ ತಂಡದ ಪಾಲಾದರು.

ಇನ್ನೊಂದೆಡೆ, ಭಾರತದ ಬ್ಯಾಟರ್‌ಗಳಾದ ಪೃಥ್ವಿ ಶಾ ಹಾಗೂ ಸರ್ಫರಾಜ್ ಖಾನ್ ಸೇರಿದಂತೆ ಕೆಲ ಪ್ರಮುಖ ಆಟಗಾರರಿಗೆ ಯಾವುದೇ ತಂಡದಿಂದ ಬಿಡ್ಡರ್‌ ಸಿಗದಿರುವುದು ಹರಾಜಿನ ಅಚ್ಚರಿ ಬೆಳವಣಿಗೆಯಾಗಿ ಗಮನ ಸೆಳೆದಿದೆ. ನ್ಯೂಜಿಲೆಂಡ್‌ನ ಡೆವೋನ್ ಕಾನ್ವೆಗೂ ಈ ಬಾರಿ ಆಸಕ್ತಿ ವ್ಯಕ್ತವಾಗಲಿಲ್ಲ.  

ಇದೇ ವೇಳೆ, ಭಾರತದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 7 ಕೋಟಿ ರೂ.ಗೆ ಖರೀದಿಸಿದೆ.