ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 30 ರನ್‌ಗಳ ಜಯ; ಟಿ20 ಸರಣಿ ತನ್ನದಾಗಿಸಿಕೊಂಡ ಟೀಮ್ ಇಂಡಿಯಾ
ಅಹಮದಾಬಾದ್, ಡಿ. 19: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್‌ನಲ್ಲಿ ಶುಕ್ರವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡವು 30 ರನ್‌ಗಳಿಂದ ಜಯ ಸಾಧಿಸಿತು. ಈ ಮೂಲಕ ಭಾರತ 3–1 ಅಂಕಗಳೊಂದಿಗೆ ಸರಣಿಯನ್ನು ತನ್ನದಾಗಿಸಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 231 ರನ್ ಗಳ ದೊಡ್ಡ ಮೊತ್ತ ದಾಖಲಿಸಿತು. ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಸೋಲು ಅನುಭವಿಸಿತು.
ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ ಆಕ್ರಮಣಕಾರಿ ಆಟವಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಯತ್ನಿಸಿದರೂ, ಇತರ ಬ್ಯಾಟ್ಸ್‌ಮನ್‌ಗಳ ಸಹಕಾರ ಕೊರತೆಯಿಂದ ಆ ಪ್ರಯತ್ನ ವ್ಯರ್ಥವಾಯಿತು.
ಭಾರತದ ಬೌಲಿಂಗ್ ವಿಭಾಗದಲ್ಲಿ ವರುಣ್ ಚಕ್ರವರ್ತಿ 4 ವಿಕೆಟ್ ಪಡೆದು ಮಿಂಚಿದರು. ಜಸ್ಪ್ರೀತ್ ಬುಮ್ರಾ 2 ವಿಕೆಟ್ ಕಬಳಿಸಿದರೆ, ಅರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.
ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಸಾಧಿಸಿದ ಈ ಗೆಲುವಿನಿಂದ ಭಾರತ ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ.