ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ: ಶಾಲಾ ಹಂತದಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು ಅತ್ಯಗತ್ಯ : ಕೂಡಿಗೆ ಡಯಟ್ ಪ್ರಾಂಶುಪಾಲರಾದ ಡಿ.ಉದಯ ಅಭಿಪ್ರಾಯ

ಮಡಿಕೇರಿ :-ಶಾಲಾ ಹಂತದಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು ಅತ್ಯಗತ್ಯ ಎಂದು ಕೂಡಿಗೆ ಡಯಟ್ ಪ್ರಾಂಶುಪಾಲರಾದ ಡಿ.ಉದಯ ಕುಮಾರ್ ಅವರು ಹೇಳಿದರು. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಲೋಕ ಶಿಕ್ಷಣ), ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಇವರ ವತಿಯಿಂದ ನಗರದ ಜೂನಿಯರ್ ಕಾಲೇಜು ಆವರಣದ ಸಭಾಭವನದಲ್ಲಿ ಗುರುವಾರ ನಡೆದ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಮತ್ತು ಸಾಕ್ಷರತಾ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ನಾಗರಿಕ ಪ್ರಪಂಚಗಳ ಮೂಲಕ ಸಾಕ್ಷರತೆ ಬೆಳವಣಿಗೆ ಆಗಿದೆ. ಶಿಕ್ಷಣ ಎಂಬುದು ಮನುಷ್ಯರ ಒಂದು ಅಕ್ಷರ ಜ್ಞಾನ, ಸಾಕ್ಷರತೆಯನ್ನು ವಸ್ತುನಿಷ್ಠೆಯಿಂದ ನೋಡಬೇಕು ಎಂದು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರಾದ ವಿಜಯ್ ಅವರು ಮಾತನಾಡಿ ಅನಕ್ಷರಸ್ಥರಿಗೆ ಅಕ್ಷರ ಕಲಿಸುವುದು ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬ ನಾಗರಿಕರಿಗೆ ಓದಲು ಮತ್ತು ಬರೆಯಲು ಕಲಿಸುವುದು ಪುಣ್ಯಕಾರ್ಯ. ಸಾಕ್ಷರತೆ ಮನುಷ್ಯನಿಗೆ ಆತ್ಮವಿಶ್ವಾಸ ಧೈರ್ಯ ತಂದುಕೊಡುತ್ತದೆ ಎಂದು ಹೇಳಿದರು.
ಶಿಕ್ಷಣಾಧಿಕಾರಿ ಮಹೇಶ್ ಅವರು ಮಾತನಾಡಿ ಯಾವುದೇ ಒಂದು ದೇಶ ಅಭಿವೃದ್ಧಿ ಹೊಂದಿದೆ ಎಂದರೆ ಅದು ಸಾಕ್ಷರತೆ ಇದ್ದರೆ ಮಾತ್ರ ಎಂದು ಹೇಳಿದರು. ಕೂಡಿಗೆ ಡಯಟ್ ಪ್ರಾಂಶುಪಾಲರಾದ ಡಿ.ಉದಯಕುಮಾರ್ ಸಾಕ್ಷರತಾ ಧ್ವಜಾರೋಹಣ ನೆರವೇರಿಸಿದರು. ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಕೃಷ್ಣಪ್ಪ ಅವರು ಮಾತನಾಡಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆರ್ ಹೇಮಂತ ರಾಜ್ ಸ್ವಾಗತಿಸಿದರು. ಯಮುನಾ ನಿರೂಪಿಸಿ, ವಂದಿಸಿದರು. ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಪ್ರೌಢಶಾಲಾ ವಿಭಾಗದಿಂದ ನಾಟಕ ಪ್ರದರ್ಶನ ಜರುಗಿತು. ಶಿಕ್ಷಣಾಧಿಕಾರಿ ಮಹೇಶ್, ಹಿರಿಯ ಉಪನ್ಯಾಸಕರಾದ ಸತೀಶ್, ಉಪನ್ಯಾಸಕರಾದ ಗೀತಾ, ಮಲ್ಲೇಶ್, ಸೌಮ್ಯ, ಡಯಟ್ ನೋಡೆಲ್ ಅಧಿಕಾರಿಗಳು, ಹಿರಿಯ ಉಪನ್ಯಾಸಕರು ಮತ್ತು ಸಿಬ್ಬಂದಿಯವರು ಇದ್ದರು.