ಕಟ್ಟೆಹಾಡಿ : 10 ಕುಟುಂಬಗಳಿಗೆ ದೆಹಲಿಯ ಭವಾನಿಪುರ್ ಬಾಬಾ ಬದ್ರುದ್ದೀನ್ ಶಾ ವೆಲ್ವೇರ್ ಸೊಸೈಟಿ ವತಿಯಿಂದ ಉಚಿತ ಮನೆ ನಿರ್ಮಾಣ: ತಲಾ ರೂ.5 ಲಕ್ಷದ ಚೆಕ್ ವಿತರಿಸಿದ ಎನ್.ಜಿ.ಒ ರಾಷ್ಟ್ರೀಯ ಅಧ್ಯಕ್ಷ ಶಶಿಕುಮಾರ್
ಕುಶಾಲನಗರ : ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟೆಹಾಡಿಯ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಹೊದಿಕೆಯೊಂದಿಗೆ ಗುಡಿಸಲಿನಲ್ಲಿ ಶೋಚನೀಯ ಜೀವನ ನಡೆಸುತ್ತಿರುವ ಸುಮಾರು 10 ಆದಿವಾಸಿ ಕುಟುಂಬಗಳಿಗೆ ದೆಹಲಿಯ ಭವಾನಿಪುರ್ ಬಾಬಾ ಬದ್ರುದ್ದೀನ್ ಶಾ ವೆಲ್ವೇರ್ ಸೊಸೈಟಿ ವತಿಯಿಂದ ಉಚಿತವಾಗಿ ನೂತನ ಮನೆ ನಿರ್ಮಿಸಿಕೊಡಲು ಉದ್ದೇಶಿಸಿದ್ದು, ತಲಾ ರೂ.5 ಲಕ್ಷ ದ ಚೆಕ್ ಅನ್ನು ಭವಾನಿಪುರ್ ಬಾಬಾ ಬದ್ರುದ್ದೀನ್ ಶಾ ವೆಲ್ವೇರ್ ಸೊಸೈಟಿಯ (ಎನ್.ಜಿ.ಒ) ರಾಷ್ಟ್ರೀಯ ಅಧ್ಯಕ್ಷ ಶಶಿಕುಮಾರ್ ವಿತರಣೆ ಮಾಡಿದರು.
ಕಟ್ಟೆಹಾಡಿಯ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚೆಕ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆದಿವಾಸಿಗಳು ವಾಸಿಸುತ್ತಿರುವ ಗುಡಿಸಲುಗಳಿಗೆ ಭೇಟಿ ನೀಡಿ ನೂತನ ಮನೆ ನಿರ್ಮಿಸಲು ಚೆಕ್ ಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭ ಮಾತನಾಡಿದ, ಎನ್.ಜಿ.ಒ.ರಾಷ್ಟ್ರೀಯ ಅಧ್ಯಕ್ಷ ವೈ.ಕೆ.ಶಶಿಕುಮಾರ್ , ಬಡತನ ಮುಕ್ತ ಭಾರತ ಮಾಡಬೇಕು ಎಂಬ ಉದ್ದೇಶವನ್ನು ನಮ್ಮ ಸಂಸ್ಥೆ ಹೊಂದಿದೆ. ಪ್ರತಿ ಮನೆಗೆ ಆರೋಗ್ಯ ಹಾಗೂ ಆರ್ಥಿಕ ನೆರವಿನಿಂದ ಬಡತನ ನಿರ್ಮೂಲನೆ ಗುರಿ ಹೊಂದಲಾಗಿದೆ. ಪ್ರತಿಯೊಂದು ಕುಟುಂಬಕ್ಕೆ ಆತ್ಮಶಕ್ತಿ, ಮನೆಯಿಲ್ಲದ ಬಡ ಕುಟುಂಬಕ್ಕೆ ಮನೆ ನಿರ್ಮಾಣ ನಮ್ಮ ಆದ್ಯ ಗುರಿ. ನಮ್ಮ ಎನ್.ಜಿ.ಒ ವತಿಯಿಂದ ಸದಸ್ಯತ್ವ ಅಭಿಯಾನ ಕೈಗೊಳ್ಳಲಾಗಿದ್ದು,ಸದಸ್ಯರಾದವರಿಗೆ ಜೀವವಿಮೆ ಸೌಲಭ್ಯ, ಹೆಣ್ಣು ಮಕ್ಕಳ ಮದುವೆಗೆ ಸಹಾಯಧನ, ಅಂಗವಿಕಲರಿಗೆ, ವೃದ್ಧರಿಗೆ ಸಹಾಯಧನ ಹಾಗೂ ಶವಸಂಸ್ಕಾರಕ್ಕೆ ನೆರವು ಸೇರಿದಂತೆ ಸ್ವಯಂ ಉದ್ಯೋಗ ಕೈಗೊಂಡು ಸಬಲೀಕರಣ ಹೊಂದಲು ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
ಎನ್.ಜಿ.ಒ.ಸಂಸ್ಥೆಯ ಸಂಚಾಲಕಿ ಫ್ರಾನ್ಸಿನ ಮೇರಿ ಮಾತನಾಡಿ, ನಮ್ಮ ನಡೆ ಬಡತನ ನಿರ್ಮೂಲನೆ ಕಡೆಗೆ ಎಂಬುವುದು ನಮ್ಮ ಸಂಸ್ಥೆಯ ಧ್ಯೇಯವಾಗಿದೆ.ಎಂಟು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಸಂಸ್ಥೆ ಸರ್ವೇ ಮಾಡಿ ಸರ್ಕಾರದ ಸೌಲಭ್ಯಗಳಿಂದ ವಂಚಿತ ಕುಟುಂಬಗಳನ್ನು ಗುರುತಿಸಿ ಅಗತ್ಯ ನೆರವು ನೀಡಲಾಗುತ್ತದೆ ಎಂದರು.
ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಸದಸ್ಯರು ಆದ ಭವಾನಿಪುರ್ ಬಾಬಾ ಬದ್ರುದ್ದೀನ್ ಶಾ ವೆಲ್ವೇರ್ ಸೊಸೈಟಿ ಕೊಡಗು ಘಟಕದ ಜಿಲ್ಲಾಧ್ಯಕ್ಷ ಆರ್.ಕೆ.ಚಂದ್ರು ಮಾತನಾಡಿ, ಆದಿವಾಸಿಗಳ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದರು.ಅವು ಅರ್ಹ ಗಿರಿಜನ ಕುಟುಂಬಗಳಿಗೆ ತಲುಪುತ್ತಿಲ್ಲ. ಬಹುತೇಕ ಯೋಜನೆಗಳು ಗಿರಿಜನರ ಹೆಸರಿನಲ್ಲಿ ಉಳ್ಳವರ ಪಲಾಗುತ್ತಿವೆ. ಸರ್ಕಾರದ ಯೋಜನೆಗಳಿಂದ ನೂರಾರು ಗಿರಿಜನರು,ಆದಿವಾಸಿ ಜೇನುಕುರುಬ ಕುಟುಂಬಗಳು ವಂಚಿತಗೊಂಡಿವೆ.ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಇಂತಹ ಬಡ ಕುಟುಂಬಗಳನ್ನು ಗುರುತಿಸಿ ಭವಾನಿಪುರ್ ಬಾಬಾ ಬದ್ರುದ್ದೀನ್ ಶಾ ವೆಲ್ವೇರ್ ಸೊಸೈಟಿ ವತಿಯಿಂದ ಉಚಿತವಾಗಿ ಮನೆ ನಿರ್ಮಿಸಿಕೊಡಲು ಮುಂದಾಗಿರುವ ಕ್ರಮ ಸ್ವಾಗತಾರ್ಹವಾಗಿದೆ. ಎನ್.ಜಿ.ಒ.ಸೇವೆ ಇದೇ ರೀತಿ ಮುಂದುವರೆಯಲಿ ಇದರಿಂದ ಅನೇಕ ಆದಿವಾಸಿ ಕುಟುಂಬಗಳಿಗೆ ನೆರವು ಸಿಗಲಿ ಎಂದು ಹೇಳಿ ಸಂಸ್ಥೆಯ ಅಧ್ಯಕ್ಷ ಶಶಿಕುಮಾರ್ ಅವರ ಸೇವೆಯನ್ನು ಶ್ಲಾಘಿಸಿದರು.
ಈ ಸಂದರ್ಭ ಭವಾನಿಪುರ್ ಬಾಬಾ ಬದ್ರುದ್ದೀನ್ ಶಾ ವೆಲ್ವೇರ್ ಸೊಸೈಟಿ ಪದಾಧಿಕಾರಿಗಳಾದ ಬಿಂದು ಸತೀಶ್ ಹಾಗೂ ಫಲಾನುಭವಿಗಳಾದ ಲಕ್ಷ್ಮಿ, ಗೌರಿ,ಸುಮಿತ್ರ,ರಾಧ,ಗೀತಾ,ಸಣ್ಣಮ್ಮ,ಮುತ್ತಮ್ಮ,ಶಿವಣ್ಣ ಹಾಗೂ ಹಾಡಿ ಮುಖಂಡರು ಪಾಲ್ಗೊಂಡಿದ್ದರು.
