ಕೊಡಗು | ಸರ್ಕಾರಿ ಕಚೇರಿಗಳಲ್ಲಿ ನೌಕರರರಿಲ್ಲ! ಶೇ.80ರಷ್ಟು ಹುದ್ದೆಗಳು ಖಾಲಿ, ಸಾರ್ವಜನಿಕ ಸೇವೆಯಲ್ಲಿ ಕುಂಠಿತ

ಕೊಡಗು | ಸರ್ಕಾರಿ ಕಚೇರಿಗಳಲ್ಲಿ ನೌಕರರರಿಲ್ಲ! ಶೇ.80ರಷ್ಟು ಹುದ್ದೆಗಳು ಖಾಲಿ, ಸಾರ್ವಜನಿಕ ಸೇವೆಯಲ್ಲಿ ಕುಂಠಿತ
ಜಿಲ್ಲಾ ಪಂಚಾಯತ್

ಮಡಿಕೇರಿ ಡಿ. 9: ಕೊಡಗು ಜಿಲ್ಲೆಯ ಹಲವು ಸರ್ಕಾರಿ ಕಚೇರಿಗಳು ನೌಕರರ ಕೊರತೆಯಿಂದ ಭಣಗುಟ್ಟುತ್ತಿವೆ. ಕೆಲವು ಇಲಾಖೆಗಳಲ್ಲಂತೂ ಶೇಕಡಾ 80ರಷ್ಟು ಹುದ್ದೆಗಳು ಖಾಲಿಯಾಗಿರುವ ಪರಿಣಾಮ, ಸಾರ್ವಜನಿಕ ಸೇವೆಗಳು ನಿಧಾನಗೊಂಡಿದ್ದು, ಜನಸಾಮಾನ್ಯರು ಕಾರ್ಯನಿರ್ವಹಣೆಯ ವಿಳಂಬದಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಜಿಲ್ಲೆಯ ಐದು ತಾಲ್ಲೂಕುಗಳಿಗೆ ಸೇರಿ ಹಿಂದುಳಿದ ವರ್ಗಗಳ ಇಲಾಖೆಗೆ ಒಟ್ಟು 259 ನೌಕರರ ಅಗತ್ಯವಿದ್ದರೂ, ಪ್ರಸ್ತುತ ಲಭ್ಯವಿರುವುದು ಕೇವಲ 72 ಮಂದಿ. ಉಳಿದ 187 ಹುದ್ದೆಗಳು ದೀರ್ಘಕಾಲದಿಂದ ಭರ್ತಿಯಾಗದೇ ಖಾಲಿ ಬಿದ್ದಿವೆ. ಜಿಲ್ಲೆಯಲ್ಲಿ 42 ವಿದ್ಯಾರ್ಥಿ ಹಾಸ್ಟೆಲ್ಗಳಿದ್ದು, ಇವುಗಳಿಗೆ 42 ವಾರ್ಡನ್ ಗಳ ಅಗತ್ಯವಿದೆ. ಆದರೆ ಸೇವೆಯಲ್ಲಿ ಇರುವವರು ಎಂಟು ವಾರ್ಡನ್ಗಳು ಮಾತ್ರ. ಪರಿಣಾಮವಾಗಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಎಫ್ಡಿಸಿ, ಎಸ್ಡಿಸಿ ಸಿಬ್ಬಂದಿಗೆ ಹಾಸ್ಟೆಲ್ಗಳ ಜವಾಬ್ದಾರಿ ಹೆಚ್ಚುವರಿಯಾಗಿ ಹಂಚಿಕೊಂಡಿರುವುದು ಖಾತರಿಯಾಗಿದೆ.

ಹಗಲಿನಲ್ಲಿ ಕಚೇರಿ ಕೆಲಸ ಹಾಗೂ ಸಂಜೆ ಬಳಿಕ ಹಲವು ಹಾಸ್ಟೆಲ್ಗಳಲ್ಲಿ ಕರ್ತವ್ಯ ನಿರ್ವಹಿಸುವ ದುಪ್ಪಟ್ಟು ಹೊಣೆಗಾರಿಕೆ ನೌಕರರನ್ನು ಮಾನಸಿಕ ಒತ್ತಡಕ್ಕೆ ತಳ್ಳಿದೆ. ಮನೆ ಹಾಗೂ ಕೆಲಸ ಎರಡನ್ನೂ ಸಮತೋಲನಗೊಳಿಸುವುದು ಅಸಾಧ್ಯವಾಗುತ್ತಿರುವುದರಿಂದ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಮಸ್ಯೆ ಕೇವಲ ಒಂದು ಇಲಾಖೆಗೆ ಸೀಮಿತವಾಗಿಲ್ಲ. ಮಡಿಕೇರಿ ನಗರಸಭೆ, ಜಿಲ್ಲಾ ಪಂಚಾಯತ್, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಅನೇಕ ಇಲಾಖೆಗಳಲ್ಲೂ ಹುದ್ದೆಗಳು ಖಾಲಿ ಬಿದ್ದಿದ್ದು, ಕಾರ್ಯನಿರ್ವಹಣೆ ಮೇಲೆ ನೇರ ಪರಿಣಾಮ ಬೀರುತ್ತಿದೆ. ಖಾಲಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಇರುವ ನಿಯಮಾತ್ಮಕ ಅಡಚಣೆಗಳಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. 

ಸಾರ್ವಜನಿಕ ಸೇವೆಗಳು ನಿಗದಿತ ಅವಧಿಯಲ್ಲಿ ಲಭ್ಯವಾಗದಿರುವುದು ಜನರಲ್ಲಿ ಅಸಮಾಧಾನ ಉಂಟುಮಾಡಿದೆ. ಕೊಡಗು ಜಿಲ್ಲೆಯ ಆಡಳಿತ ವ್ಯವಸ್ಥೆ ಸರಾಗವಾಗಿ ಕಾರ್ಯನಿರ್ವಹಿಸಲು, ರಾಜ್ಯ ಸರ್ಕಾರ ತಕ್ಷಣವೇ ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.