ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2024-25 ನೇ ಸಾಲಿನ 100 ನೇ ವಾರ್ಷಿಕ ಮಹಾಸಭೆ

ಮಡಿಕೇರಿ:-ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 2024-25 ನೇ ಸಾಲಿನ 100ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಗರದ ಕೇಂದ್ರ ಕಚೇರಿಯ “ಉನ್ನತಿ ಭವನ”ದ ದಿ:ಪಂದ್ಯಂಡ.ಐ.ಬೆಳ್ಯಪ್ಪ ಸ್ಮಾರಕ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಅವರ ಘನ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಲಾಭದಲ್ಲಿ ಮುಂದುವರೆಯುತ್ತಿರುವ ಬ್ಯಾಂಕ್: ಮಾರ್ಚ್ 31 ರ ಅಂತ್ಯಕ್ಕೆ ಬ್ಯಾಂಕು ರೂ.16.70 ಕೋಟಿ ಲಾಭ ಗಳಿಸಿರುವುದಾಗಿ ತಿಳಿಸಿದರು. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ನಿ ಮಡಿಕೇರಿ, ಇದು ಸನ್ 1921 ರ ಜೂನ್ 28 ರಂದು ರೂ.4000 ಪಾಲು ಬಂಡವಾಳ, ರೂ.10,000 ಠೇವಣಿ, 48 ಸಹಕಾರ ಸಂಘಗಳು ಮತ್ತು 16 ಬಿಡಿ ಸದಸ್ಯರಿಂದ ಸ್ಥಾಪನೆಗೊಂಡು, ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಸಾರ್ಥಕತೆಯ 104 ವರ್ಷಗಳನ್ನು ಪೂರ್ಣಗೊಳಿಸಿ, ಇದೀಗ 105ರ ಸಂವತ್ಸರದಲ್ಲಿ ಪಾರದರ್ಶಕ ಆಡಳಿತವನ್ನು ನಡೆಸುತ್ತಿದೆ.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಮಡಿಕೇರಿ,, ಆರ್.ಬಿ.ಐ. ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕಿನಿಂದ ನೀಡಲ್ಪಡುವ ಆರ್ಥಿಕ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದ್ದು, ಇಂದು ರಾಜ್ಯದಲ್ಲಿರುವ ಜಿಲ್ಲಾ ಸಹಕಾರ ಬ್ಯಾಂಕಿಗಳ ಪೈಕಿ 3ನೇ ಪ್ರಮುಖ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಎಂದು ಗುರುತಿಸಲ್ಪಟ್ಟಿರುತ್ತದೆ. 2024-25ನೇ ಸಾಲಿನ ಲೀಡ್ ಬ್ಯಾಂಕಿನ ತ್ರೈಮಾಸಿಕ ಸಭೆಯ ವರದಿಯಂತೆ ಜಿಲ್ಲೆಯಲ್ಲಿನ ವಿವಿಧ 23 ಖಾಸಗಿ ಹಾಗೂ ವಾಣಿಜ್ಯ ಬ್ಯಾಂಕುಗಳಿಗೆ ಹೋಲಿಸಿದಲ್ಲಿ ಪೈಪೋಟಿ ನಡೆಸಿ ಠೇವಣಾತಿ ಸಂಗ್ರಹಣೆಯಲ್ಲಿ ಶೇ. 27.12 ರಷ್ಟು ಪಾಲು ಪ್ರಥಮ ಸ್ಥಾನ ಹಾಗೂ ಸಾಲ ನೀಡುವಿಕೆಯಲ್ಲಿ ಶೇ. 24.62 ರಷ್ಟು ಪಾಲಿನೊಂದಿಗೆ ಬ್ಯಾಂಕು ದ್ವೀತಿಯ ಸ್ಥಾನ ಹೊಂದಿದ್ದು, ಜಿಲ್ಲೆಯ ಆದ್ಯತಾ ವಲಯದ ಸಾಲ ನೀಡುವಿಕೆಯಲ್ಲಿ ಶೇ.22.20 ರಷ್ಟು ಪಾಲು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸಾಧನೆಯಾಗಿದ್ದು, 2024-25ನೇ ಸಾಲಿನ ಲೆಕ್ಕ ಪರಿಶೋಧನೆ(ಆಡಿಟ್)ನಲ್ಲಿ ಇದೇ ಮೊದಲ ಬಾರಿಗೆ 96 ರಷ್ಟು ಅಂಕ ಪಡೆದು. ಬ್ಯಾಂಕು ಕಳೆದ ಹಲವು ವರ್ಷಗಳಿಂದ ಆಡಿಟ್‍ನಲ್ಲಿ “ಎ” ವರ್ಗೀಕರಣ ಇರುತ್ತದೆ. ಇದು ಬ್ಯಾಂಕಿನ ಆಂತರಿಕ ನಿಯಂತ್ರಣ ವ್ಯವಸ್ಥೆಗೆ ಮಾದರಿಯಾಗಿದೆ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನಿಂದ, 2023-24 ನೇ ಸಾಲಿಗೆ ಅತ್ಯುತ್ತಮ ಕಾರ್ಯ ನಿರ್ವಹಣೆಗೆ ನಮ್ಮ ಬ್ಯಾಂಕಿಗೆ ದಿ:13.08.2025 ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ತೃತೀಯ ಬಹುಮಾನ ದೊರತ್ತಿರುತ್ತದೆ.
ಮಾರ್ಚ್ 31 ರ ಅಂತ್ಯಕ್ಕೆ ಒಟ್ಟು 289 ಸಹಕಾರ ಸಂಘಗಳು ಬ್ಯಾಂಕಿನ ಸದಸ್ಯತ್ವ ಪಡೆದಿದ್ದು, ಎ, ಬಿ, ಸಿವರ್ಗದ ಸದಸ್ಯರಿಂದ ಒಟ್ಟು 35.91 ಕೋಟಿ ಷೇರು ಬಂಡವಾಳ ಸಂಗ್ರಹಿಸಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ ರೂ.4.45 ಕೋಟಿ ಪಾಲು ಬಂಡವಾಳದಲ್ಲಿ ಹೆಚ್ಚಳವಾಗಿದೆ. 2025ರ ಮಾರ್ಚ್ ಅಂತ್ಯಕ್ಕೆ ಷೇರು ಬಂಡವಾಳ, ಶಾಸನಬದ್ಧ ಮೀಸಲು ನಿಧಿಗಳು ಹಾಗೂ ಬಟವಾಡೆಯಾಗದ ಲಾಭಾಂಶದ ಮೊತ್ತವನ್ನು ಒಳಗೊಂಡಂತೆ ಒಟ್ಟು ರೂ.137.59 ಕೋಟಿ ಮೊತ್ತದ ಸ್ವಂತ ಬಂಡವಾಳವನ್ನು ಹೊಂದಿದ್ದು, ಬ್ಯಾಂಕಿನ ನೆಟ್‍ವರ್ತ್ ಪ್ರಮಾಣ ರೂ. 139.91 ಕೋಟಿ ಇದ್ದು 2024-25ನೇ ಸಾಲಿನಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರವು ರೂ.3372.12 ಕೋಟಿಯಾಗಿದ್ದು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿರುತ್ತದೆ. ಸಂಘಗಳು ಹಾಗೂ ಜಿಲ್ಲೆಯ ಗ್ರಾಹಕರದಿಂದ ವರದಿ ಸಾಲಿನಲ್ಲಿ 2025 ರ ಮಾರ್ಚ್ 31 ಕ್ಕೆ ರೂ.1771.33 ಕೋಟಿ ಸಂಗ್ರಹಿಸಲಾಗಿದೆ. ಇದಲ್ಲದೆ ಕೊಡಗು ಜಿಲ್ಲೆಯ ಸೈನಿಕರ ನಾಡಾಗಿದ್ದು ಬ್ಯಾಂಕಿನ ಎಲ್ಲಾ ಅವಧಿಯ ಠೇವಣಿಗಳಿಗೆ ಶೇ.0.25 ಹೆಚ್ಚುವರಿ ಬಡ್ಡಿದರ ನೀಡುವ ನೂತನ ಯೋಜನೆ ಅನುಷ್ಠಾನಗೊಳಿಸಲಾಗಿದ್ದು ಗೌರವಾನ್ವಿತ ಸೈನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. 2025-26ನೇ ಸಾಲಿಗೆ ರೂ.2000 ಕೋಟಿ ಠೇವಣಾತಿ ಸಂಗ್ರಹಣೆ ಗುರಿ ಹೊಂದಿದ್ದು, ಗುರಿ ಸಾಧಿಸಲು ಬ್ಯಾಂಕಿನ ಸಿಬ್ಬಂದಿಗಳಿಗೆ ಶ್ರೇಣಿವಾರು ಗುರಿನಿಗದಿಪಡಿಸಿ, ಠೇವಣಿ ಸಂಗ್ರಹಣೆ ಮಾಡಲು ಉತ್ತೇಜಿಸಲಾಗಿರುತ್ತದೆ.
ಬ್ಯಾಂಕಿನಿಂದ ವಿತರಿಸಿದ ಸಾಲಗಳು :
ಬ್ಯಾಂಕು ಕೃಷಿ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾ ಬಂದಿದ್ದು, ಸಹಕಾರಿ ಸಂಘಗಳ ಮುಖಾಂತರ ಅಲ್ಪಾವಧಿ ಬೆಳೆ ಸಾಲ, ಮಧ್ಯಮಾವಧಿ ಕೃಷಿ ಸಾಲ, ನಗದು ಸಾಲ ಮತ್ತು ಮಾರ್ಕೇಟಿಂಗ್ ಫೈನಾನ್ಸ್ ಸಾಲ ಎಂಎಸ್‍ಸಿ ಸಾಲ ನೀಡಲಾಗುತ್ತಿರುವುದಲ್ಲದೆ, ಬ್ಯಾಂಕಿನ ನಾಮ ಮಾತ್ರ ಸದಸ್ಯರಿಗೆ ನೇರವಾಗಿ ರಾಜ್ಯ ಸರ್ಕಾರದ ಶೂನ್ಯ ಬಡ್ಡಿದರದಲ್ಲಿ ವಿತರಿಸಿದ ಕೃಷಿ ಅಲ್ಪಾವಧಿ ಸಾಲ ರೂ.5 ಲಕ್ಷ ಹಾಗೂ ರಿಯಾಯಿತಿ ಯೋಜನೆಯಡಿ ಶೇ.3 ರ ಬಡ್ಡಿದರದಲ್ಲಿ ಮಧ್ಯಮಾವಧಿ ಸಾಲಕೃಷಿ ಸ್ಥಿರಾಸ್ತಿ ಆಧಾರಿತ ಎಕ್ರೆ ಒಂದಕ್ಕೆ ರೂ 1.50 ಲಕ್ಷಗಳ ವರೆಗೆಗರಿಷ್ಠ ಮಿತಿ ರೂ.15 ಲಕ್ಷಗಳ ವಿವಿಧ ಮಧ್ಯಮಾವಧಿ ಕೃಷಿ ಸಾಲಗಳಾದ ತುಂತುರು ನೀರಾವರಿ, ಕೆರೆ ನಿರ್ಮಾಣ,ಕಾಫಿ ಕಣ/ಗೋದಾಮು ನಿರ್ಮಾಣ, ಪಲ್ಪರ್ ಯೂನಿಟ್, ಸೋಲಾರ್ ಬೇಲಿ ಮತ್ತು ತಂತಿ ಬೇಲಿ ಅಳವಡಿಕೆಗೆ, ಟ್ರಾಕ್ಟರ್ ಟಿಲ್ಲರ್ ಖರೀದಿಗೆ ಮತ್ತು ವಿವಿಧ ಆಧುನಿಕ ಕೃಷಿ ಯಂತ್ರೋಪಕರಣಗಳ ಖರೀದಿಗಾಗಿ ಸಾಲ ನೀಡಲಾಗುತ್ತಿದ್ದು, ರೈತರ ಹೆಚ್ಚುವರಿ ಬೇಡಿಕೆ ಪೂರೈಕೆಗಾಗಿ ಜಾಮೀನು ಸಾಲ,ಕೃಷಿ ಸ್ಥಿರಾಸ್ತಿ ಆಧಾರಿತ ಇತರೇ ಉದ್ದೇಶಗಳ ಪೂರೈಕೆಗಾಗಿ ಗ್ರಾಮೀಣ ಮನೆ ನಿರ್ಮಿಸಲು ಸಾಲ, ವಾಹನ ಸಾಲ, ಮನೆ ನಿರ್ಮಾಣ ಸಾಲ,“ವಿದ್ಯಾ ಸಹಕಾರ ಸಾಲ, ವೇತನ ಆಧಾರಿತ ಸಾಲ, ಪಿಗ್ಮಿ ಆಧಾರಿತ ಜಾಮೀನು ಸಾಲ, ವ್ಯಾಪಾರ ಮತ್ತು ವ್ಯವಹಾರ ನಡೆಸಲು ಓವರ್‍ಡ್ರಾಪ್ಟ್ ಸೌಲಭ್ಯ. ಪಟ್ಟಣ ಪ್ರದೇಶದಲ್ಲಿನ ನಾಗರಿಕರಿಗೆ/ ವೇತನದಾರರಿಗೆ ಮನೆ/ ಕಟ್ಟಡ/ ನಿವೇಶನಗಳ ಅಡಮಾನ ಮತ್ತು ಖರೀದಿಗಾಗಿ ಸಾಲ ಹಾಗೂ ಸೋಲಾರ್ ಉಪಕರಣ ಖರೀದಿ ಸಾಲ ಹಾಗೂ ರೈತ ಗ್ರಾಹಕರಿಗೆ ಅನುಕೂಲವಾಗಲೆಂದು ರಿಯಾಯಿತಿ ಬಡ್ಡಿ ದರದಲ್ಲಿ ಆರ್.ಟಿ.ಸಿ. ಆಧಾರಿತ ಆಭರಣ ಈಡಿನ ಸಾಲ, ದೊಡ್ಡ ರೈತರಿಗೆ ಅನುಕೂಲವಾಗಲೆಂದುರೂ 5 ಲಕ್ಷದವರೆಗೆ ರಾಜ್ಯ ಸರ್ಕಾರದ ಬಡ್ಡಿ ರಿಯಾಯಿತಿಯ ಮಿತಿಗೆ ಒಳಪಟ್ಟು ಗರಿಷ್ಠ ರೂ.60 ಲಕ್ಷಗಳವರೆಗಿನ ವ್ಯಕ್ತಿಗತ ಬೆಳೆ ಸಾಲ ನೀಡಲಾಗುತ್ತಿದೆ.
ಬ್ಯಾಂಕಿನಿಂದ ಜಿಲ್ಲೆಯ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ 2023 ರಿಂದ 2026 ರ ಸಾಲಿಗೆಬೆಳೆ ಸಾಲ ಎನ್.ಸಿ.ಎಲ್ ರೂ 1064.31 ಕೋಟಿ ಮಿತಿ ಮಂಜೂರಾತಿ ನೀಡಿ 2024-25ನೇ ಸಾಲಿನಲ್ಲಿ ಸಹಕಾರ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೂ 830.32 ಕೋಟಿ ಅರ್ಹ ರೈತ ಸದಸ್ಯರಿಗೆ ಕೆ.ಸಿ.ಸಿ ಸಾಲ ವಿತರಣೆ ಮಾಡಲಾಗಿರುತ್ತದೆ.
ಸಾಲ ಯೋಜನೆಗಳು: ಜಿಲ್ಲೆಯ ಸಹಕಾರ ಸಂಘಗಳಿಗೆ ನಿವೇಶನ/ ಕಟ್ಟಡ ಖರೀದಿಗೆ ಸಾಲ ಯೋಜನೆಯನ್ನು ರೂಪಿಸಿಲಾಗಿದೆ. ಸೋಲಾರ್ ಶಕ್ತಿಯ ಹೊಸಯೋಜನೆ ಮೂಲಕ ಕೃಷಿ ಸ್ಥಿರಾಸ್ತಿಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ಸೋಲಾರ್ ಪ್ಯಾನಲ್ ಅಳವಡಿಸಿ, ಉಪಕರಣಗಳ ಖರೀದಿ ಮತ್ತು ಅಳವಡಿಕೆಗಾಗಿ ಶೇ.3ರ ಬಡ್ಡಿ ಸಹಾಯಧನದಲ್ಲಿ ಸಾಲ ನೀಡುವುದನ್ನು ಜಾರಿಗೊಳಿಸಲಾಗಿದೆ. ಕೃಷಿಕರು ತಮ್ಮ ತೋಟ ಮತ್ತು ಹೊಲಗಳಲ್ಲಿ ಗ್ರಾಮೀಣ ಮನೆ ನಿರ್ಮಿಸಲು ಅನುಕೂಲವಾಗುವಂತೆ, ವಾಣಿಜ್ಯ ಬೆಳೆ ಸ್ಥಿರಾಸ್ತಿ ಆಧಾರಿತ ಎಕ್ರೆ ಒಂದಕ್ಕೆ ರೂ.5 ಲಕ್ಷ ಮತ್ತು ಹೊಲಗಳಿಗೆ ಎಕ್ರೆ ಒಂದಕ್ಕೆ ರೂ.3 ಲಕ್ಷಗಳಷ್ಟು ಹಾಗೂ ಗ್ರಾಹಕರ ಇತರೆ ಅಗತ್ಯತೆಯನ್ನು ಪೂರೈಸುವ ಉದ್ದೇಶದಿಂದ ಸಾಮಾನ್ಯ ಉದ್ದೇಶ ಸಾಲ ಏಕ್ರೆ ಒಂದಕ್ಕೆ ರೂ.3 ಲಕ್ಷದ ಮಿತಿಯಲ್ಲಿ ವಿತರಿಸಲಾಗುತ್ತಿದೆ. ಬ್ಯಾಂಕಿನ ಗ್ರ್ರಾಹಕರ ಅವಶ್ಯಕತೆಯನ್ನು ಪೂರೈಸುವ ನಿಟ್ಟಿನಲ್ಲಿ ಗರಿಷ್ಠ ರೂ.60 ಲಕ್ಷಗಳವರೆಗಿನ ವಾಹನ ಸಾಲವನ್ನು ನೀಡಲಾಗುತ್ತಿದ್ದು, ರೂ.25 ಲಕ್ಷಗಳ ವರೆಗಿನ ವಾಹನ ಸಾಲವನ್ನು ಯಾವುದೇ ಹೆಚ್ಚುವರಿ ಭದ್ರತೆ ಇಲ್ಲದೆ ಹೈಫಾಥಿಕೇಷನ್ ಆಧಾರದಲ್ಲಿ ನೀಡಲಾಗುತ್ತಿರುತ್ತದೆ. ಬ್ಯಾಂಕಿನ ಸಿ ಎಂ ಎ ಮಾನದಂಡಗಳಿಗೆ ಒಳಪಟ್ಟು ಸಹಕಾರ ಸಂಘಗಳಿಗೆ ಮತ್ತು ಗ್ರಾಹಕರಿಗೆ ಸಿ.ಸಿ.ಟಿ.ವಿ ಮತ್ತು ಇನ್ವರ್ಟರ್ ಅಳವಡಿಕೆಗೆ ಸಾಲವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಗಡಿ ಪ್ರದೇಶದ ಸಂಪಾಜೆ ಶಾಖೆಯ ಮುಖಾಂತರ ನೆರೆಯ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕು ನಿಗಧಿಗೊಳಿಸಿರುವ ಮಾನದಂಡಕ್ಕೊಳಪಟ್ಟು ಪಿಗ್ಮಿ ಆಧಾರಿತ ಜಾಮೀನು ಸಾಲ, ದಾಸ್ತಾನು ಆಧಾರಿತ ಒ.ಡಿ ಸಾಲ, ಕೃಷಿ ಆಧಾರಿತ ಇತರೆ ಸಾಲ ಹಾಗೂ ವಾಹನ ಸಾಲವನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಆಧಾರಿತ ಇತರ ಚಟುವಟಿಕೆ ಸಾಲ ನೀಡಿಕೆಯ ವ್ಯಕ್ತಿಗತ ಗರಿಷ್ಠ ಮಿತಿಯನ್ನು ರೂ.2.00 ಲಕ್ಷಗಳವರೆಗೆ ನೀಡಲಾಗಿರುತ್ತದೆ. ಮನೆ ನಿರ್ಮಾಣ ಸಾಲಗಳ ವೈಯಕ್ತಿಕ ಗರಿಷ್ಠ ಮಿತಿ ಗರಿಷ್ಠ ರೂ.75 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೇ ಮನೆ ಸಾಲ ಪಡೆದ ಗ್ರಾಹಕರುಗಳು ಬ್ಯಾಂಕಿನಲ್ಲಿ ಲಭ್ಯವಿರುವ ಇನ್ನಿತರೇ ಸಾಲ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದ್ದಲ್ಲಿ ನಬಾರ್ಡ್ ಸಿ.ಎಂ.ಎ ಮಾನದಂಡಗೊಳಪಟ್ಟು ಹೆಚ್ಚುವರಿಯಾಗಿ ರೂ.60 ಲಕ್ಷಗಳವರೆಗೆ ವೈಯಕ್ತಿಕ ಗರಿಷ್ಠ ಮಿತಿಯ ಸಾಲ ಸೌಲಭ್ಯಕ್ಕಾಗಿ ಪರಿಗಣಿಸಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಒಟ್ಟು ಮನೆ ನಿರ್ಮಾಣಕ್ಕೆ ರೂ 135 ಲಕ್ಷದವರೆಗೆ ಲಭ್ಯವಿದೆ. ಆರ್.ಟಿ.ಸಿ. ಹೊಂದಿರುವ ರೈತರು ಪಡೆಯುವ ಆಭರಣ ಸಾಲಕ್ಕೆ ಸಾಮಾನ್ಯ ಬಡ್ಡಿ ದರಕ್ಕಿಂತ ಶೇ.1 ರಷ್ಟು ಕಡಿಮೆ ಬಡ್ಡಿ ವಿಧಿಸುತ್ತಿದ್ದು, ಆಭರಣ ಈಡಿನ ಸಾಲ ನೀಡಿಕೆಯ ವ್ಯೆಕ್ತಿಗತ ಗರಿಷ್ಠ ಒಟ್ಟಾರೆ ಮಿತಿಯನ್ನು ರೂ.50 ಲಕ್ಷಗಳಿಗೆ ನಿಗದಿಪಡಿಸಿದ್ದು, ಈ ಪೈಕಿ ಆರ್.ಟಿ.ಸಿ. ಆಧಾರಿತ ಮಿತಿಯನ್ನು ರೂ.20 ಲಕ್ಷಗಳಿಗೆ ನಿಗಧಿ ಪಡಿಸಲಾಗಿದೆ. ಗ್ರಾಹಕರಿಗೆ ಹೆಚ್ಚಿನ ಸಾಲ-ಸೌಲಭ್ಯದ ಅನುಕೂಲ ಕಲ್ಪಿಸುವ ಉದ್ದೇಶದಿಂದ ದಿನಾಂಕ01.08.2025 ರಿಂದ ಅನ್ವಯವಾಗುವಂತೆ ಎಲ್ಲಾ ಸಾಲಗಳ ಬಡ್ಡಿದರವನ್ನು ಶೇ.0.50 ಕಡಿತಗೊಳಿಸಿ, ರೈತರ ಬಡ್ಡಿ ಹೊರೆಯನ್ನು ಕಡಿಮೆ ಮಾಡಲಾಗಿದೆ. ಸ್ವಸಹಾಯ ಗುಂಪು ಯೋಜನೆ: ದಿನಾಂಕ 31.03.2025ರವರೆಗೆ ಜಿಲ್ಲೆಯ ಬ್ಯಾಂಕಿನ ಶಾಖೆಗಳಲ್ಲಿ ಒಟ್ಟು 2982 ಸ್ವಸಹಾಯ ಗುಂಪುಗಳಿದ್ದು ಈ ಪೈಕಿ ವರದಿ ಸಾಲಿನಲ್ಲಿ ಹೊಸದಾಗಿ 661 ಗುಂಪುಗಳನ್ನು ರಚಿಸಲಾಗಿದೆ. 659 ಸ್ವಸಹಾಯ ಗುಂಪುಗಳನ್ನು ಲಿಂಕೇಜ್ ಮಾಡಲಾಗಿದ್ದು, ವರದಿ ಸಾಲಿನಲ್ಲಿ (ಪುನರಾವರ್ತಿತ ಸಾಲಗಳು ಸೇರಿ) 659 ಸಂಘಗಳಿಗೆ ಒಟ್ಟು ರೂ.30.89 ಕೋಟಿ ಸಾಲ ವಿತರಿಸಲಾಗಿದೆ. ಕನಿಷ್ಠ ರೂ.2.00 ಲಕ್ಷದಿಂದ ರೂ.10 ಲಕ್ಷಗಳವರೆಗೆ ಸಾಲ ಪಡೆಯುವ ಅರ್ಹತೆಯಿರುತ್ತದೆ. ಸಾಲ ಮೇಳ: ದಿನಾಂಕ:25.01.2025 ಮತ್ತು ದಿನಾಂಕ:26.01.2025ರಂದು ಬ್ಯಾಂಕಿನ ಶತಮಾನೋತ್ಸವ ಕಟ್ಟಡ “ಉನ್ನತಿ” ಭವನದ ಉದ್ಘಾಟನೆಯ ಮೊದಲ ವಾರ್ಷಿಕೋತ್ಸವ ಅಂಗವಾಗಿ ಜಿಲ್ಲಾ ಮಟ್ಟದ ವಾಹನ ಹಾಗೂ ಕೃಷಿ ಯಂತ್ರೋಪಕರಣ ಸಾಲಮೇಳ ಕಾರ್ಯಕ್ರಮವನ್ನು ಸತತವಾಗಿ ಎರಡು ವರ್ಷಗಳಲ್ಲಿ ಆಯೋಜಿಸಲಾಗಿದ್ದು ಒಟ್ಟು 86 ಗ್ರಾಹಕರುಗಳಿಗೆ ರೂ.7.80 ಕೋಟಿ ಸಾಲವನ್ನು ವಿತರಿಸಲಾಗಿದೆ. ವರದಿ ಸಾಲಿನಲ್ಲಿ ರೂ.1306.39 ಕೋಟಿ ಸಾಲ ವಿತರಣೆ ಮಾಡಲಾಗಿದ್ದು, ಈ ಪೈಕಿ ಕೃಷಿ ಸಾಲ ರೂ.730.04 ಕೋಟಿ ಹಾಗೂ ಕೃಷಿಯೇತರ ಸಾಲ ರೂ.576.35 ಕೋಟಿ ವಿತರಣೆಗಳಾಗಿರುತ್ತದೆ. ದಿನಾಂಕ 31.03.2025ರ ಅಂತ್ಯಕ್ಕೆ ಹೊರಬಾಕಿ ನಿಂತ ಸಾಲ ರೂ.1600.79 ಕೋಟಿ ಆಗಿರುತ್ತದೆ., ಕೃಷಿ ಸಾಲ ವಸೂಲಾತಿ ಶೇ.99.85, ಕೃಷಿಯೇತರ ಸಾಲ ವಸೂಲಾತಿ ಶೇ.92.10ರಷ್ಟಿದ್ದು ಬ್ಯಾಂಕಿನ ಒಟ್ಟಾರೆ ಸಾಲ ವಸೂಲಾತಿಯು ಶೇ.97.35 ರಷ್ಟಿರುತ್ತದೆ.2025-26ನೇ ಸಾಲಿಗೆ ಒಟ್ಟು ರೂ.1600 ಕೋಟಿ ಸಾಲ ವಿತರಣೆಗೆ ಗುರಿ ನಿಗದಿಪಡಿಸಲಾಗಿದೆ. ಎಲ್ಲಾ ಶಾಖೆಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿದ್ದು ಆರ್‍ಟಿಜಿಎಸ್, ನೀಟ್, ಐಎಂಪಿಎಸ್, ಡಿಬಿಟಿ, ಪಿಒಎಸ್, ಮೈಕ್ರೋ ಎಟಿಎಂ, ಮೊಬೈಲ್ ಬ್ಯಾಂಕಿಂಗ್, ಯೂನಿಪೈಟ್ ಪೇಮೆಂಟ್ ಇಂಟರ್‍ಫೇಸ್(ಯುಪಿಐ) ಸೇವೆಯೊಂದಿಗೆ, ಎ.ಟಿ.ಎಂ. ಕಾರ್ಡ್‍ದಾರರ ಅನುಕೂಲಕ್ಕಾಗಿ ಎ.ಟಿ.ಎಂ ಪಿನ್ ಸಂಬಂಧ ಎ ಟಿ ಎಂ ಗ್ರೀನ್ ಪಿನ್ ಯೋಜನೆ ಜಾರಿಯಲ್ಲಿದೆ. ಬ್ಯಾಂಕಿನ ಶಾಖೆಗಳ ವ್ಯಾಪ್ತಿಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ 17 ಶಾಖೆಗಳಲ್ಲಿ ಎ.ಟಿ.ಎಂ.ಸೌಲಭ್ಯವನ್ನು ಕಲ್ಪಿಸಲಾಗಿರುತ್ತದೆ. ಬ್ಯಾಂಕಿಂಗ್ ಆಪ್ ಮೂಲಕ ಬಿಲ್ಲುಗಳ ಪಾವತಿಗೆ ‘ಭಾರತ್ ಬಿಲ್ಲು ಪೇಮೆಂಟ್ ಸ್ಕೀಮ್’ ಬಿಬಿಪಿಎಸ್ ಯೋಜನೆ, ಕೆ ಸಿ ಸಿ ಕಾರ್ಡ್‍ದಾರರ ಅನುಕೂಲಕ್ಕಾಗಿ ಸಹಕಾರ ಸಂಘಗಳಲ್ಲಿ ಮತ್ತು ಬ್ಯಾಂಕಿನ ಶಾಖೆಗಳು ಸೇರಿ ಒಟ್ಟು 48 ಮೈಕ್ರೋ ಎ ಟಿ ಎಂ, ಗಳನ್ನು ಅನುಷ್ಠಾನಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಬ್ಯಾಂಕು ವ್ಯಕ್ತಿಗಳಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ಕ್ಯೂಆರ್ ಕೋಡ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಬ್ಯಾಂಕಿನ ಕೇಂದ್ರ ಕಚೇರಿ ಮತ್ತು 24 ಶಾಖೆಗಳಲ್ಲಿ ಸಿಸಿಟಿವಿ ಅಳವಡಿಸಿ ಎಲ್ಲಾ 24 ಶಾಖೆಗಳ ವ್ಯವಹಾರವನ್ನು ಕೇಂದ್ರ ಕಚೇರಿಯಲ್ಲಿ ಕೇಂದ್ರೀಕೃತಗೊಳಿಸಿ ಪರಿಶೀಲನೆ ನಡೆಸಲಾಗುತ್ತಿರುತ್ತದೆ. ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಪರ್ಸನಲೈಸ್‍ಡ್ ಸಿಟಿಎಸ್ ಚೆಕ್ಕು ಪುಸ್ತಕ ಮುದ್ರಿಸಲು ಕ್ರಮ ಕೈಗೊಳ್ಳಲಾಗಿದೆ. ಬ್ಯಾಂಕಿನ ವ್ಯವಹಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ಹಾಗೂ ಬ್ಯಾಂಕಿಂಗ್ ಸೇವೆಯನ್ನು ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಒದಗಿಸುವ ಉದ್ದೇಶದಿಂದ ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು, ಪೊನ್ನಂಪೇಟೆ ತಾಲೂಕಿನ ತಿತಿಮತಿ ಹಾಗೂ ಮಡಿಕೇರಿ ತಾಲೂಕಿನ ಕಕ್ಕಬ್ಬೆಯಲ್ಲಿ ಹೊಸ ಶಾಖೆಯನ್ನು ತೆರೆಯುವ ಸಲುವಾಗಿ ಆರ್.ಬಿ.ಐ ಸಂಸ್ಥೆಯವರಿಂದ ದಿನಾಂಕ 14.07.2025 ರಂದು 3 ಹೊಸ ಶಾಖೆಗಳ ಪರವಾನಿಗೆ ಪಡೆಯಲಾಗಿದ್ದು, ಸದರಿ ಶಾಖೆಗಳನ್ನು ಶೀಘ್ರದಲ್ಲಿ ತೆರೆಯಲಾಗುವುದು. ಸಹಕಾರ ಸಂಘಗಳ ಅಭಿವೃದ್ಧಿಯಲ್ಲಿ ಬ್ಯಾಂಕಿನ ಪಾತ್ರ: ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕಿನ ಸಹಕಾರ ಸಂಘಗಳ ಪ್ರೋತ್ಸಾಹ ನಿಧಿಯಿಂದ ಬ್ಯಾಂಕಿನ ಸದಸ್ಯ ಸಹಕಾರ ಸಂಘಗಳ ಮೂಲಭೂತ ಅಭಿವೃದಿಗಾಗಿ 8 ಸಂಘಗಳಿಗೆ ಒಟ್ಟು ರೂ.4.50 ಲಕ್ಷ ಸಹಾಯಧನ ನೀಡಿ ಸಹಕಾರ ಸಂಘಗಳ ಅಭಿವೃದಿಗೆ ಸಹಕರಿಸಲಾಗಿದೆ. ಸಾಮುದಾಯಿಕ ಪ್ರಾಯೋಜನಾ ನಿಧಿಯಿಂದ ಒಟ್ಟು 50 ಸಂಸ್ಥೆಗಳಿಗೆ ರೂ.4.73 ಲಕ್ಷವನ್ನು ಅನುದಾನವನ್ನು ನೀಡಲಾಗಿದೆ. ಅಪೆಕ್ಸ್ ಬ್ಯಾಂಕಿನಿಂದ ಸಹಕಾರ ಸಂಘಗಳ ಅಭಿವೃಧ್ಧಿಗೆ ಸಂಬಂಧಿಸಿದಂತೆ ಬ್ಯಾಂಕಿನ ಮಾನ್ಯ ಅಧ್ಯಕ್ಷರ ಶಿಫಾರಸ್ಸಿನಲ್ಲಿ ವರದಿ ಸಾಲಿನಲ್ಲಿ ಒಟ್ಟು 32 ಸದಸ್ಯ ಸಹಕಾರ ಸಂಘಗಳಿಗೆ ಒಟ್ಟು ರೂ.45.50 ಲಕ್ಷಗಳ ಅನುದಾನವನ್ನು ನೀಡುವ ಮೂಲಕ ಜಿಲ್ಲೆಯ ಸದಸ್ಯ ಸಹಕಾರ ಸಂಘಗಳ ಅಭಿವೃದಿಗೆ ಕೈಜೋಡಿಸಲಾಗಿದೆ.ಅಲ್ಲದೆ ಸದಸ್ಯ ಸಹಕಾರ ಸಂಘಗಳ ಅಧ್ಯಯನ ಪ್ರವಾಸಕ್ಕಾಗಿ 7 ಸಹಕಾರ ಸಂಘಗಳಿಗೆ ರೂ.10.50 ಲಕ್ಷ ಸಹಾಯಧನ ನೀಡಲಾಗಿದೆ. ಹೆಚ್ಚು ಲಾಭ ಗಳಿಸುವುದರೊಂದಿಗೆ ಸಹಕಾರ ಸಂಘಗಳಿಗೆ ಶೇ.13 ಡಿವಿಡೆಂಡ್ ಘೋಷಿಸಿದ್ದು ರಾಜ್ಯದಲ್ಲೇ ಅತೀ ಹೆಚ್ಚು ಡಿವಿಡೆಂಡ್ ನೀಡುತ್ತಿರುವ ಬ್ಯಾಂಕು ಆಗಿರುತ್ತದೆ. ವಾರ್ಷಿಕ ಮಹಾಸಭೆಯಲ್ಲಿ 2024-25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಹಕಾರ ಸಂಘಗಳಿಗೆ ಬಹುಮಾನ ನೀಡಿ ಪ್ರಶಂಸಿಸಲಾಯಿತು.
2024-25 ನೇ ಸಾಲಿಗೆ ಉತ್ತಮ ಕಾರ್ಯನಿರ್ವಹಣೆ ಮಾಡಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ ಮಡಿಕೇರಿ ತಾಲ್ಲೂಕಿನ ಪೆರಾಜೆ(ಪ್ರಥಮ), ನಾಪೋಕ್ಲು(ದ್ವಿತೀಯ ಮತ್ತು ಪಯಶ್ವಿನಿ(ತೃತೀಯ), ವಿರಾಜಪೇಟೆ ತಾಲ್ಲೂಕಿನ ಹಾತೂರು(ಪ್ರಥಮ), ನಾಲ್ಕೇರಿ(ದ್ವಿತೀಯ) ಮತ್ತು ಟಿ.ಶೆಟ್ಟಿಗೇರಿ(ತೃತೀಯ), ಸೋಮವಾರಪೇಟೆ ತಾಲ್ಲೂಕಿನ ಐಗೂರು(ಪ್ರಥಮ), ರಾಮೇಶ್ವರ ಕೂಡುಮಂಗಳೂರು(ದ್ವಿತೀಯ) ಮತ್ತು ಗೌಡಳ್ಳಿ (ತೃತೀಯ) ಸ್ಥಾನ ಪಡೆದಿದೆ. ಇತರೆ ಸದಸ್ಯ ಸಹಕಾರ ಸಂಘಗಳು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಪೊನ್ನಂಪಟೆ ಎಪಿಸಿಎಂಎಸ್(ಪ್ರಥಮ), ಮೂರ್ನಾಡು ಎಪಿಸಿಎಂಎಸ್ (ದ್ವಿತೀಯ) ಮತ್ತು ಕುಶಾಲನಗರದ ಎಪಿಸಿಎಂಎಸ್ (ತೃತೀಯ), ಸಹಕಾರ ದವಸ ಭಂಡಾರಗಳು ಬಲಮುರಿ ವಿವಿದೋದ್ದೇಶ ಸಹಕಾರ ದವಸ ಭಂಡಾರ(ಪ್ರಥಮ), ಈಚೂರು ಕುಂದ ಸಹಕಾರ ದವಸ ಭಂಡಾರ(ದ್ವಿತೀಯ) ಹಾಗೂ ವಾಲ್ನೂರು ತ್ಯಾಗತ್ತೂರು ವಿವಿದೋದ್ದೇಶ ಸಹಕಾರ ದವಸ ಭಂಡಾರ(ತೃತೀಯ). ಕೃಷಿಯೇತರ ಪತ್ತಿನ ಸಹಕಾರ ಸಂಗಳು ಕೊಡಗು ಬಿಎಸ್‍ಎನ್‍ಎಲ್ ಉದ್ಯೋಗಸ್ಥರ ಹಾಗೂ ನಿವೃತ್ತ ಉದ್ಯೋಗಸ್ಥರ ಪತ್ತಿನ ಸಹಕಾರ ಸಂಘ(ಪ್ರಥಮ), ಸೋಮವಾರಪೇಟೆ ವಿವಿದೋದ್ದೇಶ ಸಹಕಾರ ಸಂಘ ನಿ. ಸೋಮವಾರಪೇಟೆ(ದ್ವಿತೀಯ) ಮತ್ತು ಕೊಡಗು ಸಹಕಾರ ಉದ್ಯೋಗಸ್ಥರ ಸಹಕಾರ ಸಂಘ(ತೃತೀಯ) ಸ್ಥಾನ ಪಡೆದಿದೆ. ಪಟ್ಟಣ / ಮಹಿಳಾ ಸಹಕಾರ ಬ್ಯಾಂಕು ವಿರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕು(ಪ್ರಥಮ) ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕು ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕು ವಿರಾಜಪೇಟೆ (ಪ್ರಥಮ) ಸ್ಥಾನ ಪಡೆದಿದೆ ಎಂದು ಪ್ರಕಟಣೆ ತಿಳಿಸಿದೆ.