ಕೂಡ್ಲೂರು ಸರ್ಕಾರಿ ಶಾಲೆಗಳಲ್ಲಿ ಸಂಭ್ರಮದ‌ ಮಕ್ಕಳ ದಿನಾಚರಣೆ ; ಸರ್ಕಾರಿ ಶಾಲೆಗಳ ಪ್ರಗತಿಗೆ ಕೈಜೋಡಿಸಲು ಮನವಿ

ಕೂಡ್ಲೂರು ಸರ್ಕಾರಿ ಶಾಲೆಗಳಲ್ಲಿ ಸಂಭ್ರಮದ‌ ಮಕ್ಕಳ ದಿನಾಚರಣೆ ; ಸರ್ಕಾರಿ ಶಾಲೆಗಳ ಪ್ರಗತಿಗೆ ಕೈಜೋಡಿಸಲು ಮನವಿ

ಕುಶಾಲನಯ, ನ.14: ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ‌ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ವತಿಯಿಂದ ಶುಕ್ರವಾರ ಮಕ್ಕಳ ದಿನಾಚರಣೆ:2025 ಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಶಾಲೆಗಳಲ್ಲಿ ಆಯೋಜಿಸಲಾಗಿದ್ದ ಮಕ್ಕಳ ವೇಷಭೂಷಣ ಸ್ಪರ್ಧೆ,ಭಾಷಣ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ವಿವಿಧ ದಿರಿಸುಗಳನ್ನು ತೊಟ್ಟು ಗಮನ ಸೆಳೆದರು. ಮಕ್ಕಳು ಸಂಭ್ರಮದಿಂದ ಪ್ರತಿಭೆಯ ಅನಾವರಣಗೊಳಿಸಿ ಖುಷಿ ಪಟ್ಟರು. ಶೈಕ್ಷಣಿಕ ಹಾಗೂ ಇನ್ನಿತರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಮಕ್ಕಳ ಹಕ್ಕುಗಳ ಕುರಿತು ವಿಚಾರ ಮಂಡಿಸುವ ಮೂಲಕ ಗಮನ ಸೆಳೆದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳಿಗೆ ವಿವಿಧ ಉಚಿತ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಸಮುದಾಯ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

 ವಿದ್ಯಾರ್ಥಿಗಳ ಪೋಷಕರನ್ನು ತಮ್ಮ ಮಕ್ಕಳ ಶಿಕ್ಷಣ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ದಿಸೆಯಲ್ಲಿ ಈ ಸಭೆಯು ಸಹಕಾರಿಯಾಗಿದೆ ಎಂದು ತಿಳಿಸಿದರು. ಮಕ್ಕಳ ಹಕ್ಕುಗಳು, ಶಿಕ್ಷಣ ಮತ್ತು ಯೋಗಕ್ಷೇಮದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಮಕ್ಕಳ ಬಾಲ್ಯದ ಮನೋಭಾವವನ್ನು ಎತ್ತಿಹಿಡಿಯಲು ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ಪ್ರೇಮಕುಮಾರ್ ತಿಳಿಸಿದರು.

 ವಿದ್ಯಾರ್ಥಿಗಳ ಪೋಷಕರನ್ನು ತಮ್ಮ ಮಕ್ಕಳ ಶಿಕ್ಷಣ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ದಿಸೆಯಲ್ಲಿ ಈ ಸಭೆಯು ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಸ್. ಡಿ.ಎಂ.ಸಿ.ಅಧ್ಯಕ್ಷ ಕೆ.ಕೆ.ಹರೀಶ್ ಮಾತನಾಡಿ, ಪ್ರತಿಯೊಬ್ಬರೂ ಸರ್ಕಾರಿ ಶಾಲೆಗಳ ಪ್ರಗತಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಶಾಲೆಯ ಹಿರಿಯ ಶಿಕ್ಷಕ ಕೆ.ಗೋಪಾಲಕೃಷ್ಣ, ಶಾಲೆಗಳಲ್ಲಿ ಸರ್ಕಾರದ ವತಿಯಿಂದ ಮಕ್ಕಳಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್, ಶಿಕ್ಷಕರಾದ ಬಿ.ಡಿ.ರಮ್ಯ, ಬಿ.ಎನ್.ಸುಜಾತ, ಎಸ್.ಎಂ.ಗೀತಾ, ಬಿ.ಎಸ್.ಅನ್ಸಿಲಾ ರೇಖಾ, ಕೆ.ಟಿ.ಸೌಮ್ಯ, ಕಛೇರಿ ಸಿಬ್ಬಂದಿ ಎಂ.ಉಷಾ, ಶಾಲಾ ನಾಯಕರಾದ ಮಾಳವಿಕ , ಶಾಹಿರ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಇದ್ದರು. ವಿದ್ಯಾರ್ಥಿನಿ ದಿಶಾ ನಿರ್ವಹಿಸಿದರು.

ಇದಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಟಿ.ಸೌಮ್ಯ ವಿವಿಧ ಮನೋರಂಜನೆಯ ಆಟಗಳನ್ನು ಆಡಿಸಿದರು.

ಕೂಡ್ಲೂರು ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಭ್ರಮ:

 ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಎಂ. ಸಂತೋಷ್ ಅಧ್ಯಕ್ಷತೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಪೋಷಕರ- ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಎಚ್.ಎಸ್.ಸುಜಾತ ಮಾತನಾಡಿ, ಮಕ್ಕಳ ಶೈಕ್ಷಣಿಕ ‌ಪ್ರಗತಿಗೆ ಮತ್ತು ಶಾಲಾಭಿವೃದ್ಧಿಗೆ ಪೋಷಕರು ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

 ಗ್ರಾಮ ದೇವಾಲಯ ಸಮಿತಿಯ ಅಧ್ಯಕ್ಷ ಜವರೇಗೌಡ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಪವಿತ್ರ, ಸದಸ್ಯರು ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಪ್ರಮುಖರಾದ ಗಿರೀಶ್, ಗಿರಿಪ್ರಸಾದ್, ಯಮುನ, ಕೆ.ಕೆ.ಹರೀಶ್, ಅರ್ಪಿತಾ ಇತರರು ಇದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತಗೊಂಡ ಮಕ್ಕಳಿಗೆ ಶಾಲಾ ಶಿಕ್ಷಕಿ ಜಿ.ನಳಿನಿ , ವೈಯಕ್ತಿಕವಾಗಿ ಬಹುಮಾನ ವಿತರಿಸಿದರು.

 ಇದೇ ವೇಳೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಕುರಿತು ಹಾಗೂ ಸರ್ಕಾರಿ ಶಾಲೆಗಳ ಸರ್ವಾಂಗೀಣ ಪ್ರಗತಿಗೆ ಪೋಷಕರು, ದಾನಿಗಳು ಹಾಗೂ ಸಮುದಾಯದ ಸಹಭಾಗಿತ್ವವನ್ನು ಬಳಸಿಕೊಳ್ಳುವ ಮೂಲಕ ಕುರಿತು ಮಹಾಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು. ಕುಶಾಲನಗರ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ‘ಮಕ್ಕಳ ದಿನಾಚರಣೆ’ ಯನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಯಿತು.ಇದೇ ವೇಳೆಯಲ್ಲಿ ಕೂಡ್ಲೂರು ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಬೆಂಗಳೂರಿನಿಂದ ನೇರ ಪ್ರಸಾರವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕಾರ್ಯಕ್ರಮವನ್ನು ಟಿ.ವಿ.ಮೂಲಕ ಮಕ್ಕಳು ವೀಕ್ಷಿಸಿದರು.