ಕುಶಾಲನಗರ: ಎಂಪ್ರಿ ಸಂಸ್ಥೆಯ ವತಿಯಿಂದ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಘನ-ತ್ಯಾಜ್ಯ ನಿರ್ವಹಣೆ ಕುರಿತ ತರಬೇತಿ

ಕುಶಾಲನಗರ: ಎಂಪ್ರಿ ಸಂಸ್ಥೆಯ ವತಿಯಿಂದ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಘನ-ತ್ಯಾಜ್ಯ ನಿರ್ವಹಣೆ ಕುರಿತ ತರಬೇತಿ

ಕುಶಾಲನಗರ: ಬೆಂಗಳೂರಿನ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ( ಎಂಪ್ರಿ- ಎನ್ವಿರಾನ್ ಮೆಂಟಲ್ ಮೇನೇಜ್ ಮೆಂಟ್ ಅಂಡ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ ) ವತಿಯಿಂದ ಗುರುವಾರ ( ನ.13 ರಂದು ) ಕುಶಾಲನಗರ ಪುರಸಭೆಯ ಸಭಾಂಗಣದಲ್ಲಿ ಮೈಸೂರು ಹಾಗೂ ಕೊಡಗು ಜಿಲ್ಲಾ ಸ್ಥಳೀಯ ನಗರ ಸಂಸ್ಥೆಗಳ ಪರಿಸರ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರಿಗೆ ಪೌರಾಡಳಿತ ನಿರ್ದೇಶನಾಲಯದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ "ಚಕ್ರೀಯ ಆರ್ಥಿಕತೆ"* (ಸರ್ಕ್ಯುಲರ್ ಎಕಾನಮಿ") - ಘನತ್ಯಾಜ್ಯ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಕಾರ್ಯಾಗಾರಕ್ಕೆ ಚಾಲನೆ ನೀಡಿ ನಮ್ಮ ಕಸ - ನಮ್ಮ ಹೊಣೆ: ಹಾಗೂ ಸ್ವಚ್ಛ ಪರಿಸರ ನಿರ್ಮಾಣ ಕುರಿತು ಮಾತನಾಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರೂ ಆದ ಪರಿಸರ ಪ್ರಶಸ್ತಿ ಪುರಸ್ಕೃತರಾದ ಟಿ.ಜಿ.ಪ್ರೇಮಕುಮಾರ್, ಉತ್ತಮ ಪರಿಸರ ನಿರ್ಮಾಣಕ್ಕೆ ನಾವು ನಮ್ಮಿಂದ ದಿನನಿತ್ಯ ಉತ್ಪತ್ತಿಯಾಗುವ ಕಸವನ್ನು ವಿಂಗಡಿಸಿ ಸೂಕ್ತವಾಗಿ ವಿಲೇವಾರಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. *"ನಮ್ಮ ಕಸ- ನಮ್ಮ ಹೊಣೆ*" ಎಂಬ ರೀತಿಯಲ್ಲಿ ನಾವು ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡಿದರೆ ಸ್ವಚ್ಛ ಪರಿಸರ ಕಾಪಾಡಲು ಸಾಧ್ಯ ಎಂದರು.

 ಉತ್ತಮ ಪರಿಸರ ಸಂರಕ್ಷಣೆಗಾಗಿ ನಾವು ನಮ್ಮ ಸುತ್ತಲಿನ ಪರಿಸರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಗಟ್ಟಿ ಕಸದ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಾಣಕ್ಕೆ ನಾವು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. ಚಕ್ರೀಯ ಆರ್ಥಿಕತೆಯಡಿ *ಘನತ್ಯಾಜ್ಯ ನಿರ್ವಹಣೆ* ಎಂದರೆ ನಾವು ಸ್ಥಳೀಯವಾಗಿ ಉತ್ಪಾದಿಸಿ, ಬಳಸಿದ ನಂತರ ಕಸದಂತೆ ಬಿಸಾಡುವ ಬದಲು, ಅವುಗಳನ್ನು ಮರುಬಳಕೆ, ಮರು ಉತ್ಪಾದನೆ ಮತ್ತು ಮರುಪೂರಣೆ ಮಾಡುವ ಮೂಲಕ ಸಂಪನ್ಮೂಲಗಳ ಬಳಕೆಯನ್ನು ಕಡಿಮೆ ಮಾಡುವುದು. ಇದರಿಂದ ನಾವು ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡಿ ಮರು ಬಳಕೆ ಮಾಡುವ ಮೂಲಕ *ಶೂನ್ಯ ಕಸದ ಗುರಿ* ಯೊಂದಿಗೆ ಸುಸ್ಥಿರ ಪರಿಸರ ಅಭಿವೃದ್ಧಿಗೆ ಪಣ ತೊಡಬೇಕಿದೆ ಎಂದು ಪ್ರೇಮಕುಮಾರ್ ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪುರಸಭೆಯ ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್, ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಗೆ ನಾವು ಹೆಚ್ಚಿನ ಆದ್ಯತೆ ನೀಡಬೇಕಿದೆ. ಈ ತರಬೇತಿಯು ಘನತ್ಯಾಜ್ಯ ನಿರ್ವಹಣೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಸಹಕಾರಿಯಾಗಿದೆ. ಕಸ ನಿರ್ಹಣೆಗೆ ಸಮುದಾಯ ಕೈಜೋಡಿಸಿದರೆ ಉತ್ತಮ ಪರಿಸರ ನಿರ್ಮಿಸಲು ಸಾಧ್ಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪೌರಾಡಳಿತ ನಿರ್ದೇಶನಾಲಯದ ಸ್ವಚ್ಛ್ ಭಾರತ್ ಮಿಷನ್ ವಿಭಾಗದ ಸಮನ್ವಯಾಧಿಕಾರಿ ಎಚ್.ವಿಜಯಲಕ್ಷ್ಮಿ , ಎಂಪ್ರಿ ಸಂಸ್ಥೆಯ ಪರಿಸರ ಸ್ವಚ್ಛತೆ, ಘನತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಬಗ್ಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮೂಲಕ ಪರಿಸರ ಸ್ವಚ್ಛತೆ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.

 ಸಂಪನ್ಮೂಲ ವ್ಯಕ್ತಿ , ವಿಷಯ ತಜ್ಞರಾದ ಅನಿರುದ್ಧ್ ದತ್ತ ಅವರು ಘನತ್ಯಾಜ್ಯ ನಿರ್ವಹಣೆಕುರಿತು ಹಾಗೂ ಸಂಪನ್ಮೂಲ ವ್ಯಕ್ತಿ ವಾಸುಕೀ " ಹಸಿ ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಕುರಿತು ಸ್ಲೈಡ್ಸ್ ಮತ್ತು ಪಿ.ಪಿ.ಟಿ.ಪ್ರಾತ್ಯಕ್ಷಿಕೆ ಮೂಲಕ ವಿವರ ಮಾಹಿತಿ ನೀಡಿದರು.

 ಜಿಲ್ಲಾ ಘನತ್ಯಾಜ್ಯ ನಿರ್ವಹಣೆಯ ಪ್ರವರ್ತಕ ಎಂ.ಕೀರ್ತಿಪ್ರಸಾದ್, ಎಂಪ್ರಿ ಸಂಸ್ಥೆಯ ತರಬೇತುದಾರರಾದ ಎನ್. ರಾಘವೇಂದ್ರ, ಎ.ಎಂ.ರುಚಿತಾ ಶ್ರೀ ಪುರಸಭೆಯ ಹಿರಿಯ ಆರೋಗ್ಯಾಧಿಕಾರಿ ಎಂ.ಸಿ.ಉದಯ್ ಕುಮಾರ್, ಇತರೆ ಅಧಿಕಾರಿಗಳು ಇದ್ದರು. ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.‌ *ಪ್ರತಿಜ್ಞಾ ವಿಧಿ*: ಇದೇ ವೇಳೆಯಲ್ಲಿ ಸ್ವಚ್ಛ ಪರಿಸರ ಹಾಗೂ ಸೂಕ್ತ ಕಸ ನಿರ್ವಹಣೆ ಕುರಿತು ಟಿ.ಜಿ.ಪ್ರೇಮಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ಪ್ರತಿನಿತ್ಯ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣ ಮಾಡುವ ಕುರಿತು ಚರ್ಚೆ- ಸಂವಾದ ನಡೆಸಲಾಯಿತು.

ತರಬೇತಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ಸೇರಿದಂತೆ ಮೈಸೂರು ಹಾಗೂ ಕೊಡಗು ಜಿಲ್ಲೆಯ ನಗರ ಮತ್ತು ಪಟ್ಟಣದ ಸ್ಥಳೀಯ ನಗರ ಸಂಸ್ಥೆಗಳ ಪರಿಸರ ಅಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಕರು ಪಾಲ್ಗೊಂಡಿದ್ದರು. ಜಿಲ್ಲೆಯ ಮಡಿಕೇರಿ ನಗರಸಭೆ ಸೇರಿದಂತೆ ಕುಶಾಲನಗರ ಪುರಸಭೆ, ಸೋಮವಾರಪೇಟೆ, ವಿರಾಜಪೇಟೆ ಪಟ್ಟಣ ಪಂಚಾಯ್ತಿಯ ಅಧಿಕಾರಿಗಳು ಇದ್ದರು.