ಲ್ಯಾಂಡ್ ಕ್ರೂಸರ್ ಅಪಘಾತ; ಪರಿಹಾರಕ್ಕಾಗಿ ಲಾರಿ ಕಂಡಕ್ಟರ್ ಅಪಹರಣ ಮಾಡಿದ ಪೂಜಾ ಖೇಡ್ಕರ್ ಪೋಷಕರು!

ಮುಂಬೈ: ವಜಾಗೊಳಿಸಲಾದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಕುಟುಂಬ ಮತ್ತೊಮ್ಮೆ ವಿವಾದದ ಕೇಂದ್ರವಾಗಿದ್ದು, ಅವರ ತಂದೆ ದಿಲೀಪ್ ಖೇಡ್ಕರ್ ಹಾಗೂ ತಾಯಿ ಮನೋರಮಾ ಖೇಡ್ಕರ್ ವಿರುದ್ಧ ಗಂಭೀರ ಅಪರಾಧ ಪ್ರಕರಣ ದಾಖಲಾಗಿದೆ. ಟ್ರಕ್ ಕಂಡಕ್ಟರ್ ಅಪಹರಿಸಿ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ದಂಪತಿ ಪ್ರಸ್ತುತ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನವಿ ಮುಂಬೈನ ಐರೋಲಿಯಲ್ಲಿ ಶನಿವಾರ ರಾತ್ರಿ ದಿಲೀಪ್ ಖೇಡ್ಕರ್ ಹಾಗೂ ಅವರ ಅಂಗರಕ್ಷಕ ಪ್ರಫುಲ್ ಸಾಲುಂಕೆ ಪ್ರಯಾಣಿಸುತ್ತಿದ್ದ 2 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಟೊಯೋಟಾ ಲ್ಯಾಂಡ್ ಕ್ರೂಸರ್ ಗೆ ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದಿತ್ತು. ಈ ಹಿನ್ನೆಲೆಯಲ್ಲಿ, ಟ್ರಕ್ ಸಹಾಯಕ ಪ್ರಹ್ಲಾದ್ ಕುಮಾರ್ (22) ಅವರನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಪುಣೆಯ ಚತುರ್ಶೃಂಗಿಯಲ್ಲಿರುವ ಖೇಡ್ಕರ್ ಅವರ ಮನೆಗೆ ಕರೆದುಕೊಂಡು ಹೋಗಿ ಒತ್ತೆಯಾಳಾಗಿ ಇರಿಸಿ ಥಳಿಸಲಾಗಿದೆ ಎನ್ನಲಾಗಿದೆ.
“ಅಪಘಾತದಿಂದ ವಾಹನಕ್ಕೆ ಉಂಟಾದ ಹಾನಿಗೆ ಪರಿಹಾರ ಪಡೆಯುವ ಉದ್ದೇಶದಿಂದ ದಿಲೀಪ್ ಖೇಡ್ಕರ್ ಹಾಗೂ ಅವರ ಅಂಗರಕ್ಷಕ ಲಾರಿ ಕಂಡಕ್ಟರ್ ರನ್ನು ಅಪಹರಿಸಿದ್ದಾರೆ,” ಎಂದು ಉಪ ಪೊಲೀಸ್ ಆಯುಕ್ತ ಪಂಕಜ್ ದಹನೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಖೇಡ್ಕರ್ ಅವರ ಮನೆಗೆ ತಲುಪಿದಾಗ, ಮನೋರಮಾ ಖೇಡ್ಕರ್ ತಂಡದ ಮೇಲೆ ನಾಯಿಗಳನ್ನು ದಾಳಿ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಮನೆಯಲ್ಲಿ ಅಂಟಿಸಲಾಗಿದ್ದ ನೋಟಿಸ್ ಹರಿದುಹಾಕಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಕಂಡಕ್ಟರ್ ಪ್ರಹ್ಲಾದ್ ಕುಮಾರ್ ಅವರನ್ನು ಸುರಕ್ಷಿತವಾಗಿ ರಕ್ಷಿಸಿದರೂ, ದಿಲೀಪ್ ಮತ್ತು ಮನೋರಮಾ ಖೇಡ್ಕರ್ ಠಾಣೆಗೆ ಹಾಜರಾಗುವುದಾಗಿ ಹೇಳಿ ನಾಪತ್ತೆಯಾಗಿದ್ದಾರೆ. ಇದರೊಂದಿಗೆ, ಅಪಘಾತಕ್ಕೊಳಗಾದ ಲ್ಯಾಂಡ್ ಕ್ರೂಸರ್ ಕಾರೂ ಪತ್ತೆಯಾಗಿಲ್ಲ. ಮನೋರಮಾ ಖೇಡ್ಕರ್ ವಿರುದ್ಧ ಸರ್ಕಾರಿ ಕಾರ್ಯಕ್ಕೆ ಅಡ್ಡಿಪಡಿಸುವುದು, ಪುರಾವೆ ನಾಶಪಡಿಸುವುದು ಮತ್ತು ತಪ್ಪು ಮಾಹಿತಿ ನೀಡುವಂತಹ ಆರೋಪಗಳಡಿ ಪ್ರಕರಣ ದಾಖಲಾಗಿದೆ.
ಪೂಜಾ ಖೇಡ್ಕರ್ ಅವರು ಕಳೆದ ವರ್ಷ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ನೇಮಕಗೊಂಡಾಗ ಹಲವು ವಿಶೇಷ ಸೌಲಭ್ಯಗಳನ್ನು ಕೇಳಿ ಸುದ್ದಿಯಾಗಿದ್ದರು. ಬಳಿಕ ಅವರು ಸುಳ್ಳು ದಾಖಲೆಗಳ ಆಧಾರದ ಮೇಲೆ ಹಿಂದುಳಿದ ವರ್ಗ ಪ್ರಮಾಣಪತ್ರ ಪಡೆದು ನಾಗರಿಕ ಸೇವೆಗಳಿಗೆ ಸೇರಿದ್ದರೆಂಬುದು ಬಹಿರಂಗವಾದ ನಂತರ ಅವರನ್ನು ವಜಾಗೊಳಿಸಲಾಯಿತು. ಅಲ್ಲದೆ, ಮರುಪರೀಕ್ಷೆಗೆ ಅವಕಾಶವನ್ನೂ ನಿಷೇಧಿಸಲಾಯಿತು.
ಮನೋರಮಾ ಖೇಡ್ಕರ್ ಕೂಡಾ ಈ ಹಿಂದೆ ಭೂ ವಿವಾದದ ವೇಳೆ ರೈತರಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪ ಎದುರಿಸಿದ್ದರು.