ಕಕ್ಕಬ್ಬೆ ಪಾಡಿಶ್ರೀ ಇಗುತ್ತಪ್ಪ ದೇವಾಲಯದ ಆವರಣದಲ್ಲಿ ಒಂಟಿ ಸಲಗನ ಸವಾರಿ: ಗ್ರಾಮಸ್ಥರಲ್ಲಿ ಆತಂಕ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ಬಳಿಯ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಡಿಶ್ರೀ ಇಗ್ಗುತ್ತಪ್ಪ ದೇವಾಲಯದ ಆವರಣದಲ್ಲಿ ಒಂಟಿ ಸಲಗವೊಂದು ಸವಾರಿ ನಡೆಸುವ ದೃಶ್ಯ ದೇವಾಲಯದ ಸಿಸಿಟಿವಿಯಲ್ಲಿ ಸರಿಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ಕೆಲವು ದಿನಗಳಿಂದ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಬೆಳೆಗಾರರ ತೋಟಗಳಿಗೆ ಕಾಡಾನೆಗಳು ಲಗ್ಗೆ ಇಟ್ಟು ಅಪಾರ ಪ್ರಮಾಣದಲ್ಲಿ ಕೃಷಿ ಗಿಡಗಳನ್ನು ತುಳಿದು ನಾಶಪಡಿಸಿ ನಷ್ಟ ಉಂಟುಮಾಡಿದೆ.
ಬುಧವಾರ ಮಧ್ಯರಾತ್ರಿ ಕಕ್ಕಬ್ಬೆ ಪಾಡಿಶ್ರೀ ಇಗ್ಗುತ್ತಪ್ಪ ದೇವಾಲಯದ ಆವರಣಕ್ಕೆ ಲಗ್ಗೆ ಇಟ್ಟ ಒಂಟಿ ಸಲಗ ದೇವಾಲಯದ ಪ್ರವೇಶ ದ್ವಾರದ ಬಳಿಯ ದೇವರಕಟ್ಟೆಯ ಹಲಸಿನ ಮರದಲ್ಲಿರುವ ಹಲಸಿನ ಹಣ್ಣುಗಳನ್ನು ತಿಂದು ತೆರಳುವ ದೃಶ್ಯ ದೇವಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಅಲ್ಲದೆ ಅದರ ಹಿಂದಿನ ದಿನಕೂಡ ಇದೇ ಸಲಗ ದೇವಾಲಯದ ರಸ್ತೆಯಲ್ಲಿ ಸಂಚರಿಸುವ ದೃಶ್ಯ ಕೂಡ ಸರಿಯಾಗಿದ್ದು ಇದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಕಕ್ಕಬ್ಬೆ ಯುವಕಪಾಡಿ ಗ್ರಾಮದ ಕುಡಿಯರ ಕಾಲೋನಿ ನಿವಾಸಿ ಕುಡಿಯರ ಬಿದ್ದಪ್ಪ ಎಂಬುವವರ ಮನೆಯ ಅಂಗಳದಲ್ಲಿ ದಾಂಧಲೆ ನಡೆಸಿದ ಕಾಡಾನೆಗಳು ಮನೆ ಅಂಗಳದಲ್ಲಿದ್ದ ತೆಂಗಿನ ಮರವನ್ನು ಬಿದ್ದಪ್ಪ ಅವರ ಮನೆಯ ಮೇಲೆ ಉರುಳಿಸಿ ಇದರಿಂದ ಮನೆ ದ್ವಂಸಗೊಂಡು ಅಪಾರ ಪ್ರಮಾಣದಲ್ಲಿ ಹಾನಿ ಉಂಟುಮಾಡಿದ ಘಟನೆ ಕೂಡ ನಡೆದಿತ್ತು. ಇದರ ಬೆನ್ನಲ್ಲೆ ಪಾಡಿಶ್ರೀ ಇಗ್ಗುತ್ತಪ್ಪ ದವಾಲಯದ ಆವರಣಕ್ಕೆ ಕಾಡಾನೆ ಲಗ್ಗೆ ಇಟ್ಟು ಜನರಲ್ಲಿ ಆತಂಕ ಸೃಷ್ಟಿಸಿದೆ. ಅಲ್ಲದೆ ವರ್ಷಗಳ ಹಿಂದೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಅಮೃತಪಟ್ಟು, ಇನ್ನೊಬ್ಬರು ಗಂಭೀರ ಗಾಯಗೊಂಡ ಘಟನೆ ಕೂಡ ನಡೆದಿದೆ.ಗ್ರಾಮದಲ್ಲಿ ಕಾಡಾನೆಗಳ ಉಪಟಳ ನಿರಂತರವಾಗಿದ್ದು ಇದರಿಂದ ಗ್ರಾಮಸ್ಥರು ನಡೆದಾಡಲು ಭಯಪಡುವ ಪರಿಸ್ಥಿತಿ ಉದ್ದವಾಗಿದೆ. ಸಂಬಂಧಪಟ್ಟ ಅರಣ್ಯ ಇಲಾಖೆ ಕೂಡಲೇ ಗ್ರಾಮದಲ್ಲಿರುವ ಕಾಡಾನೆಗಳನ್ನು ಕಾಡಿಗಟ್ಟಲು ಅಥವಾ ಹಿಡಿದು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.