ಲವ್––ದೋಖಾ: ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ಲವ್––ದೋಖಾ: ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ರಾಮನಗರ, ಡಿ.08: ಪ್ರೀತಿ ಹೆಸರಿನಲ್ಲಿ ನಂಬಿಸಿ ವಂಚನೆ, ಲೈಂಗಿಕ ಶೋಷಣೆ ಮಾಡಿದ ಯುವಕನ ಬಗ್ಗೆ ಎಂ.ಎಸ್‌ಸಿ ವಿದ್ಯಾರ್ಥಿನಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

 ಮೃತ ವಿದ್ಯಾರ್ಥಿನಿಯನ್ನು ವರ್ಷಿಣಿ (22) ಎಂದು ಗುರುತಿಸಲಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಅಭಿ ಎಂಬಾತನ ವಿರುದ್ಧ ಆರೋಪಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮೈಸೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವರ್ಷಿಣಿ, ಮನೆಯಲ್ಲಿರುವ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಸಿಕ್ಕಿದ್ದ ಡೆತ್‌ ನೋಟ್‌ನಲ್ಲಿ, ಪ್ರೀತಿ ಎಂಬ ನೆಪದಲ್ಲಿ ವರ್ಷಗಳಿಂದ ತನ್ನ ಮೇಲೆ ಮಾನಸಿಕ ಹಾಗೂ ಲೈಂಗಿಕ ದೌರ್ಜನ್ಯ ನಡೆಸಿ, ಖಾಸಗಿ ಫೋಟೋಗಳನ್ನು ಬ್ಲ್ಯಾಕ್‌ಮೇಲ್‌ಗೆ ಬಳಸುತ್ತಿದ್ದನೆಂದು ಅಭಿಯ ವಿರುದ್ಧ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

“ನನ್ನ ಸಾವಿಗೆ ಅಭಿಯೇ ಕಾರಣ. ಅಮ್ಮ, ನನ್ನ ತಪ್ಪನ್ನು ಕ್ಷಮಿಸು. ಪ್ರೀತಿಯ ಹೆಸರಿನಲ್ಲಿ ಆತ ನನ್ನನ್ನು ನಂಬಿಸಿ, ಉಂಗುರ, ಹಣ ಎಲ್ಲವನ್ನೂ ಪಡೆದುಕೊಂಡ. ಫೋಟೋಗಳನ್ನು ಅಳಿಸುತ್ತೇನೆಂದು ಹೇಳಿ ಲೈಂಗಿಕವಾಗಿ ಸಹಕರಿಸುವಂತೆ ಒತ್ತಡ ಹಾಕುತ್ತಿದ್ದ. ನಾನು ಗರ್ಭಿಣಿಯಾದ ಬಳಿಕ ಗರ್ಭಪಾತಕ್ಕೂ ಆತನೇ ಒತ್ತಾಯಿಸಿದ್ದ” ಎಂದು ವರ್ಷಿಣಿ ಬರೆದಿದ್ದಾರೆ. 

“ನಾನು ನಿನ್ನ ನಂಬಿಕೆಗೆ ತಕ್ಕಂತೆ ವರ್ತಿಸಿಲ್ಲ ಅಮ್ಮ… ಸಾಯೋಕೆ ಕೂಡ ನನಗೆ ಭಯ. ಆದರೆ ದಾರಿ ಉಳಿದಿಲ್ಲ. ಇಂತಹವರನ್ನು ನಂಬಿ ಯಾರೂ ತಮ್ಮ ಜೀವನ ಹಾಳುಮಾಡಿಕೊಳ್ಳಬೇಡಿ” ಎಂದು ಮನವಿಯೂ ಮಾಡಿದ್ದಾರೆ. ಶಿಕ್ಷಕರಿಗೂ ಕ್ಷಮೆಯಾಚಿಸಿರುವ ಅವರು, ತಾನೇ ತಪ್ಪು ವ್ಯಕ್ತಿಯನ್ನು ನಂಬಿದ ಪರಿಣಾಮ ದುರಂತ ಅಂತ್ಯ ಕಂಡಿದ್ದೇನೆ ಎಂದು ತಿಳಿಸಿದ್ದಾರೆ.