ಕಡಮಕಲ್ ಅಭಿವೃದ್ಧಿಯತ್ತ ಶಾಸಕ ಮಂತರ್ ಚಿತ್ತ: ವರದಿ ಒಪ್ಪಿಸಲು ಅಧಿಕಾರಿಗಳಿಗೆ ವಾರದ ಗಡುವು
ಮಡಿಕೇರಿ : ವಿಧಾನ ಸಭಾ ಕ್ಷೇತ್ರದ ಕಟ್ಟಕಡೆಯ ಗ್ರಾಮವಾದ ಗಾಳಿಬೀಡು ಪಂಚಾಯತ್ ವ್ಯಾಪ್ತಿಯ ಕಡಮಕಲ್ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಮದ ಸಂಕ್ಷಿಪ್ತ ವರದಿಯನ್ನು ವಾರದ ಒಳಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಶುಕ್ರವಾರ ಕಂದಾಯ ಇಲಾಖೆ,ಗ್ರಾಮೀಣಾಭಿವೃದ್ಧಿ ಇಲಾಖೆ,ಚೆಸ್ಕಾಂ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸೇರಿ ಕಡಮಕಲ್ ನಿವಾಸಿಗಳೊಂದಿಗೆ ಕುಂದು ಕೊರತೆ ಸಭೆ ನಡೆಸಿ ಜನರಿಂದ ಮಾಹಿತಿ ಪಡೆದ ಶಾಸಕರು ಮನೆ ಮತ್ತು ಜಮೀನಿನ ದಾಖಲೆಗಳು,ಕುಡಿಯುವ ನೀರು ಸರಬರಾಜು,ಟ್ಯಾಂಕ್ ನಿರ್ಮಾಣ,ವಿದ್ಯುತ್ ವ್ಯವಸ್ಥೆ ಉನ್ನತೀಕರಣ, ರಸ್ತೆ ನಿರ್ಮಾಣ,ಅರಣ್ಯ ಇಲಾಖೆ ಮತ್ತು ಗ್ರಾಮದ ಗಡಿ ಗೊಂದಲಗಳ ನಿವಾರಣೆ ಹಾಗೂ ಪಡಿತರ ವಿತರಣೆಯ ಬಗ್ಗೆ ಚರ್ಚೆ ಮಾಡಿ ನಿಯಮಾನುಸಾರ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಪ್ರಪ್ರಥಮ ಬಾರಿಗೆ ಶಾಸಕರೊಬ್ಬರು ತಮ್ಮ ಬಳಿ ಅಧಿಕಾರಿಗಳೊಂದಿಗೆ ಬಂದು ಕುಂದು ಕೊರತೆ ನಿವಾರಣೆ ಸಭೆ ನಡೆಸಿದ ಹಿನ್ನಲೆಯಲ್ಲಿ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಅಹವಾಲುಗಳನ್ನು ಡಾ ಮಂತರ್ ಗೌಡ ರವರ ಮುಂದೆ ಸಲ್ಲಿಸಿದರು.200 ರಷ್ಟು ಜನಸಂಖ್ಯೆ ಇರುವ ಕಡಮಕಲ್ ಗ್ರಾಮದಲ್ಲಿ ಬಹುತೇಕ ಕೂಲಿ ಕಾರ್ಮಿಕರೆ ಇದ್ದು ಸುಳ್ಯ ಮೂಲಕ 80 ಕಿ.ಮೀ ಕ್ರಮಿಸಿ ಜಿಲ್ಲಾ ಕೇಂದ್ರ ಮಡಿಕೇರಿಗೆ ಬಂದು ಕೆಲಸ ಮಾಡಿಕೊಂಡು ಹೋಗುವುದು ಅಸಾಧ್ಯದ ಕೆಲಸವಾಗಿರುವುದರಿಂದ ಇಲ್ಲಿಯ ವರೆಗೆ ಯಾವುದೇ ಮೂಲಭೂತ ವ್ಯವಸ್ಥೆ ಸಮರ್ಪಕವಾಗಿರುವುದಿಲ್ಲ.
ಸರ್ಕಾರದ ಸೌಲಭ್ಯ ಪಡೆಯುವುದು ಪ್ರತಿಯೊಬ್ಬ ನಾಗರೀಕನ ಮೂಲಭೂತ ಹಕ್ಕಾಗಿದ್ದು ಅದನ್ನು ಒಬ್ಬ ಜನಪ್ರತಿನಿಧಿಯಾಗಿ ತಾವು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ,ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ,ವಲಯ ಅಧ್ಯಕ್ಷರಾದ ಸುಭಾಷ್ ಆಳ್ವ,ಪ್ರಮುಖರಾದ ಪುಷ್ಪ ಪೂಣಚ್ಚ, ವಿ.ಜಿ.ಮೋಹನ್, ಕೋಚನ ಹರಿಪ್ರಸಾದ್, ಹಂಚೆಟ್ಟಿರ ಮನು ಮುದ್ದಪ್ಪ,ಅಪ್ರು ರವೀಂದ್ರ, ಕಿರಣ್, ರೋಷನ್ ಗಣಪತಿ,ಪ್ರಭುರೈ,ರವಿಗೌಡ,ಸೇರಿದಂತೆ ಅಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
