ಮಡಿಕೇರಿ: ನಕಲಿ ಆಯುರ್ವೇದ ಔಷಧಿ ನೀಡಿ 8 ಲಕ್ಷರೂ ವಂಚಿಸಿದ ಪ್ರಕರಣ:ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

ಮಡಿಕೇರಿ:ನಕಲಿ ಆಯುರ್ವೇದ ಔಷಧಿ ನೀಡಿ 8 ಲಕ್ಷರೂ ವಂಚಿಸಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದೆ.
ಪ್ರಕರಣದ ಸಾರಾಂಶ ಇಲ್ಲಿದೆ ನೋಡಿ:
ದೇಚೂರಿನಲ್ಲಿ ಸಿ.ಡಿ.ಸರೋಜ ಹಾಗೂ ಕಾಳಪ್ಪ ಸಿ.ಡಿ.ರವರು ಮನೆಯಲ್ಲಿರುವಾಗ 1ನೇ ಆರೋಪಿ ರಮೇಶ ಗೋವಿಂದಪ್ಪ ಗೊಲ್ಲರ್ ಈತನು ಮಾನಸಿಕ ಖಾಯಿಲೆ ಹಾಗೂ ಶರೀರದ ನಡುಕ ಖಾಯಿಲೆಯಿಂದ ಬಳಲುತ್ತಿರುವ ಸರೋಜರವರ ಗಂಡನನ್ನು ನೋಡಿ, ತನ್ನ ತಾಯಿಯವರಿಗೂ ಸಹ ಇದೇ ರೀತಿಯ ಖಾಯಿಲೆ ಇದ್ದು ಆಯುರ್ವೇದ ಔಷಧಿ ನೀಡಿದ ನಂತರ ಗುಣಮುಖರಾಗಿರುವುದಾಗಿಯೂ, ಸದರಿ ಔಷಧಿಯು ಕುಶಾಲನಗರದ ಆಯುರ್ವೇದಿಕ್ ಅಂಗಡಿಯಲ್ಲಿ ಮಾತ್ರ ದೊರೆಯುವುದಾಗಿ ನಂಬಿಸಿ, ಶ್ರೀಮತಿ ಸಿ.ಡಿ.ಸರೋಜ ಮತ್ತು ಶ್ರೀ ಕಾಳಪ್ಪ ಸಿ.ಡಿ.ರವರನ್ನು ಕುಶಾಲನಗರದ ಆಯುರ್ವೇದಿಕ್ ಔಷಧಿ ಅಂಗಡಿಗೆ ಕರೆದುಕೊಂಡು ಹೋಗಿ 2ನೇ ಆರೋಪಿ ಭರತ್ ದುರ್ಗಪ್ಪ, ದುರ್ಗ ಈತನನ್ನು ಭೇಟಿ ಮಾಡಿಸಿ ಸದರಿ ಔಷಧಿಗೆ ಒಟ್ಟು 8,76,000/- ರೂ.ಗಳಾಗುವುದೆಂದು ಹೇಳಿ, ಸಿ.ಡಿ.ಸರೋಜರವರ ಬ್ಯಾಂಕ್ ಖಾತೆಗಳಿಂದ 3ನೇ ಆರೋಪಿ ರವಿ ಓಣಿಕೇರಿ ಎಂಬ ವ್ಯಕ್ತಿಯ ಹೆಸರಿಗೆ ಒಟ್ಟು 8.76,000- ರೂ.ಗಳನ್ನು 2 ಚೆಕ್‌ಗಳ ಮೂಲಕ ನೀಡಿದ್ದು, 1ನೇ ಆರೋಪಿ ರಮೇಶ ಗೋವಿಂದಪ್ಪ ಗೊಲ್ಲರ್ ಹಾಗೂ 2ನೇ ಆರೋಪಿ ಭರತ್ ದುರ್ಗಪ್ಪ ದುರ್ಗ ಇವರುಗಳು ಫಿರ್ಯಾದಿಯವರಿಗೆ ನಕಲಿ ಔಷಧಿಯನ್ನು ನೀಡಿ ಒಟ್ಟು 8.76,000/- ರೂ.ಗಳನ್ನು ಡ್ರಾ ಮಾಡಿಕೊಂಡು ವಂಚಿಸಿರುವುದಾಅಗಿ ಮಡಿಕೇರಿ ನಗರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಕೊಂಡು ಅಂದಿನ ಪೊಲೀಸ್ ಉಪ ನಿರೀಕ್ಷಕರಾದ ಅಂತಿಮ ಎಂ.ಟಿ. ಇವರು ತನಿಖೆ ನಡೆಸಿ ಆರೋಪಿತರ ವಿರುದ್ಧ ಮೋಸ ವಂಚನೆಯ ಅಪರಾಧಕ್ಕಾಗಿ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆಯು ಮಾನ್ಯ ಸಿ.ಜೆ.ಎಂ. ನ್ಯಾಯಾಲಯ, ಮಡಿಕೇರಿಯಲ್ಲಿ ನಡೆದಿದ್ದು ಆರೋಪಿತರು ಮೋಸದಿಂದ ಫಿರ್ಯಾದಿ ಶ್ರೀಮತಿ ಸಿ.ಡಿ.ಸರೋಜರವರಿಗೆ ವಂಚಿಸಿ ಒಟ್ಟು 8,76,000/-ರೂ.ಗಳನ್ನು ಲಪಟಾಯಿಸಿರುವುದು ನಿಸ್ಸಂಶಯವಾಗಿ ಸಾಬೀತಾಗಿದೆ ಎಂದು ಮಾನ್ಯ ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಸಿ.ವೀರಭದ್ರಯ್ಯ ಇವರು, 3ನೇ ಆರೋಪಿತರಿಗೆ ಕಲಂ:417 ಭಾ.ದಂ.ಸಂ. ರ ಅಪರಾಧಕ್ಕಾಗಿ ಒಟ್ಟು 01 ವರ್ಷ ಸಜೆಯನ್ನು ಹಾಗೂ ರೂ.10,000/- ದಂಡವನ್ನು, ಕಲಂ:420 ಭಾ.ದಂ.ಸಂ.ರ ಅಪರಾಧಕ್ಕಾಗಿ 2 ವರ್ಷಗಳ ಸಜೆಯನ್ನು ಹಾಗೂ ರೂ.10,000/- ದಂಡವನ್ನು ಹಾಗೂ ಕಲಂ:19 ಕರ್ನಾಟಕ. ಪ್ರೈವೇಟ್ ಮೆಡಿಕಲ್ ಎಷ್ಟಾಬ್ಲಿಷ್ ಮೆಂಟ್ ಆಕ್ಟ್ ರ ಅಪರಾಧಕ್ಕಾಗಿ 2 ವರ್ಷಗಳ ಸಜೆಯನ್ನು ಮತ್ತು ಹಾಗೂ ರೂ.10,000/- ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತಾರೆ. ಮೇಲ್ಕಂಡ ಪ್ರಕರಣದಲ್ಲಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ ಬಿ.ಎಸ್.ಸಂತೋಷ್ ರವರು ಸಾಕ್ಷಿದಾರರ ವಿಚಾರಣೆಯನ್ನು ನಡೆಸಿ ವಾದ ಮಂಡಿಸಿರುತ್ತಾರೆ.