ಮಡಿಕೇರಿ ನಗರದ ರಸ್ತೆ ದುರಸ್ತಿಗೆ ನಗರಸಭೆಯ ಬಿಜೆಪಿ ಸದಸ್ಯರಿಂದ ಅಡ್ಡಿಪಡಿಸುತ್ತಿರುವ ಪರಿಣಾಮ ದುರಸ್ತಿಕಾರ್ಯ ವಿಳಂಬವಾಗುತ್ತಿದೆ: ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಆರೋಪ

ಮಡಿಕೇರಿ: ಮಡಿಕೇರಿ ನಗರದ ರಸ್ತೆ ದುರಸ್ತಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂತರ್‌ಗೌಡ ಅವರು ದಸರಾ ಹಿನ್ನೆಲೆ ನೀಡಿದ ಅನುದಾನ ಬಳಕೆಗೆ ನಗರಸಭೆಯ ಬಿಜೆಪಿ ಸದಸ್ಯರಿಂದ ಅಡ್ಡಿಪಡಿಸುತ್ತಿರುವ ಪರಿಣಾಮ ದುರಸ್ತಿಕಾರ್ಯ ವಿಳಂಬವಾಗುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಆರೋಪಿಸಿದ್ದಾರೆ.
ನಗರದ ರಸ್ತೆಗಳ ಪರಿಸ್ಥಿತಿ ಇಂದು ಹದಗೆಟ್ಟಿದೆ. ದಸರಾ ಹಬ್ಬಕ್ಕೆ ದಿನಗಣನೆ ಆರಂಭವಾದ ಹಿನ್ನೆಲೆ ತಾತ್ಕಾಲಿಕ ದುರಸ್ತಿಗೆ ೪ಜಿ ವಿನಾಯಿತಿಯಲ್ಲಿ ಶಾಸಕರು ೩೮ ಲಕ್ಷ ಅನುದಾನ ನೀಡಿದ್ದಾರೆ. ಆದರೆ, ಬಿಜೆಪಿ ಸದಸ್ಯರು ಅವರ ಗುತ್ತಿಗೆದಾರರಿಗೆ ಕಾಮಗಾರಿ ನೀಡಿಲ್ಲ ಎಂದು ದುರಸ್ತಿಕಾರ್ಯಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಇದರ ಭಾಗವಾಗಿ ೧೦ ಲಕ್ಷದಲ್ಲಿ ನಗರದಲ್ಲಿ ಕೆಲವು ಗುಂಡಿಗಳನ್ನು ಮುಚ್ಚುವ ಕೆಲಸವಾಗಿದೆ.
ಆದರೆ, ಶಾಸಕರು ನೀಡಿದ ೩೮ ಲಕ್ಷ ಅನುದಾನ ಬಳಕೆಯಾಗಲು ತಡೆಯೊಡ್ಡುತ್ತಿದ್ದಾರೆ ಎಂದು ದೂರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ನಗರಸಭೆ ನಾಮನಿರ್ದೇಶಿತ ಸದಸ್ಯರಾದ ಮುದ್ದುರಾಜ್, ಸದಾ ಮುದ್ದಪ್ಪ, ನಗರಸಭೆ ಸದಸ್ಯೆ ಜುಲೇಕಾಬಿ ಉಪಸ್ಥಿತರಿದ್ದರು.