ವಿರಾಜಪೇಟೆಯ ವ್ಯಕ್ತಿಯನ್ನೂ ದರೋಡೆ ಮಾಡಿದ್ದ ವಿದ್ಯಾರ್ಥಿಗಳ ಗ್ಯಾಂಗ್‌ ಬಂಧಿಸಿದ ಮಂಡ್ಯ ಪೊಲೀಸರು : ಕಾರಿನಲ್ಲಿ “ಡ್ರಾಪ್ ಕೊಡುತ್ತೇವೆ” ಎಂದು ಹತ್ತಿಸಿ ಸುಲಿಗೆ!

ವಿರಾಜಪೇಟೆಯ ವ್ಯಕ್ತಿಯನ್ನೂ ದರೋಡೆ ಮಾಡಿದ್ದ  ವಿದ್ಯಾರ್ಥಿಗಳ ಗ್ಯಾಂಗ್‌ ಬಂಧಿಸಿದ ಮಂಡ್ಯ ಪೊಲೀಸರು :  ಕಾರಿನಲ್ಲಿ “ಡ್ರಾಪ್ ಕೊಡುತ್ತೇವೆ” ಎಂದು ಹತ್ತಿಸಿ ಸುಲಿಗೆ!
Photo credit: TV09 (ಫೋಟೋ ಬಂಧಿತ ಆರೋಪಿಗಳು)

ಮಂಡ್ಯ: ಕೆಂಗೇರಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವವರನ್ನು ಟಾರ್ಗೆಟ್ ಮಾಡಿಕೊಂಡು ದರೋಡೆ ನಡೆಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳ ಗ್ಯಾಂಗ್‌ನ್ನು ಮಂಡ್ಯ ಪೊಲೀಸರು ಪತ್ತೆಹಚ್ಚಿದ್ದಾರೆ. ವಿರಾಜಪೇಟೆಯ ಅಬ್ದುಲ್ ಜಲೀಲ್ ಸೇರಿದಂತೆ ಅನೇಕರು ಈ ಗ್ಯಾಂಗ್‌ ನಿಂದ ವಂಚನೆಗೊಳಗಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕಿರಣ್, ಕುಶಾಲ್ ಬಾಬು ಮತ್ತು ಗೋಕುಲ್‌ ಎಂದು ಗುರುತಿಸಲಾಗಿದೆ. ಮೂವರೂ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು. ಕಾರಿನಲ್ಲಿ “ಡ್ರಾಪ್ ಕೊಡುತ್ತೇವೆ” ಎಂದು ಹೇಳಿ ಹತ್ತಿಸಿಕೊಂಡು, ಮಂಡ್ಯದ ನಿರ್ಜನ ಪ್ರದೇಶಕ್ಕೆ ತಲುಪುತ್ತಿದ್ದಂತೆಯೇ ಕತ್ತಿಗೆ ಹಗ್ಗ ಹಾಕಿ ಬೆದರಿಸಿ ಫೋನ್ ಮತ್ತು ನಗದು ದರೋಡೆ ಮಾಡುತ್ತಿದ್ದ ಗ್ಯಾಂಗ್‌; ಬಳಿಕ ಫೋನ್‌ ಪೇ ಮೂಲಕ ಬೆಟ್ಟಿಂಗ್ ಆ್ಯಪ್‌ಗಳಿಗೆ ಹಣ ವರ್ಗಾಯಿಸುತ್ತಿದ್ದರು ಎಂದು ಬಹಿರಂಗವಾಗಿದೆ.

ಹೆಚ್ಚುವರಿಯಾಗಿ, ಹೊರರಾಜ್ಯದ ಕಾರನ್ನು ಬಾಡಿಗೆ ಪಡೆದು ದರೋಡೆ ನಡೆಸಿದ ಮಾಹಿತಿ ಕೂಡಾ ಬೆಳಕಿಗೆ ಬಂದಿದೆ. ದರೋಡೆ ಮಾಡಿದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿಗಳು, ಪೋಷಕರಿಗೆ “ಪಿಜಿಯಲ್ಲಿ ಇರುತ್ತಿದ್ದೇವೆ” ಎಂದು ಹೇಳಿ ವಾಸ್ತವದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ.

ವಿರಾಜಪೇಟೆಯ ಅಬ್ದುಲ್ ಜಲೀಲ್ ಹಾಗೂ ಮೈಸೂರಿನ ಯತೀಂದ್ರ ಮೇಲೆ ನಡೆದ ದರೋಡೆ ಈ ಗ್ಯಾಂಗ್‌ನ ಕೆಲಸವೆಂಬುದು ದೃಢಪಟ್ಟಿದೆ. ತೂಬಿನಕೆರೆ ಮತ್ತು ಕರಿಘಟ್ಟದ ಬಳಿ ನಡೆದ ಪ್ರಕರಣಗಳಲ್ಲಿ ಸಿಕ್ಕ ತಾಂತ್ರಿಕ ಸುಳಿವುಗಳನ್ನು ಆಧರಿಸಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.