ಮೂರ್ನಾಡು; ಶ್ರೀ ಗಜೇಂದ್ರ ಯುವಶಕ್ತಿ ಸಂಘದಿಂದ ಪೌರಕಾರ್ಮಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ಮೂರ್ನಾಡಿನ ಶ್ರೀ ಗಜೇಂದ್ರ ಯುವಶಕ್ತಿ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾದ ಗೌರಿ ಗಣೇಶೋತ್ಸವ ಮೂರ್ತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಯ ಪೌರಕಾರ್ಮಿಕರಿಗೆ, ಘನತ್ಯಾಜ್ಯ ಕಸ ವಿಲೇವಾರಿ ಸಿಬ್ಬಂದಿಗಳಿಗೆ ಹಾಗೂ ಕಳೆದ ಶೈಕ್ಷಣಿಕ ವರ್ಷda ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಪಟ್ಟಣದ ಹನುಮಾನ್ ಟ್ರೇಡರ್ಸ್ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯನ್ನು ಏಳು ದಿನಗಳ ಕಾಲ ಪೂಜಿಸಲಾಯಿತು. ಸಂಜೆ ಏರ್ಪಡಿಸಲಾದ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾಂತೂರು ಮುರ್ನಾಡು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕುಸನ್ ರೈ ಪಾಲ್ಗೊಂಡು ಮಾತನಾಡಿ ಇಂತಹ ಸಂಘ ಸಂಸ್ಥೆಗಳು ರೂಪಿಸಿಕೊಳ್ಳುವ ಸಮಾಜಮುಖಿ ಕೆಲಸ ಕಾರ್ಯಗಳು ಇನ್ನಿತರರಿಗೆ ಪ್ರೇರಣೆಯಾಗಿದೆ. ಸಮಾಜಮುಖಿ ಕೆಲಸಗಳು ಯುವ ಪೀಳಿಗೆಯಿಂದ ಸಮಾಜಕ್ಕೆ ಒದಗಿ ಬರಬೇಕು ಎಂದು ತಿಳಿಸಿದರು. ಸಮಾರಂಭದಲ್ಲಿ ದಾನಿಗಳಾದ ಬಚ್ಚೆಟ್ಟಿರ ಕಮಲು ಮುದ್ದಯ್ಯ, ಬಾಡಗ ಗ್ರಾಮದ ಕಾಫಿ ಬೆಳೆಗಾರ ಕಂಬೀರಂಡ ಗೌತಮ್,ರಾಮಚಂದ್ರ ಆಗ್ರೋ ವರ್ಕ್ಸ್ ಮಾಲಿಕ ಕಿರಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಪೌರಕಾರ್ಮಿಕರಾದ ದೊರೆ, ರಾಜಮ್ಮ,ಮಂಜುಳ,ಗಣೇಶ,ಮಾದೇವ,ಹಾಗೂ ಘನತ್ಯಾಜ್ಯ ಕಸ ವಿಲೇವಾರಿ ಸಿಬ್ಬಂದಿಗಳಾದ ಟಿ.ಡಿ ಲೀಲಾ,ಬಿ ಎಲ್ ಭಾರತಿ, ಆಶಾದೇವಮ್ಮ,ಶೋಭಾ,ಮತ್ತು ಸ್ವಪ್ನ ಚಂದ್ರಶೇಖರ್ ಅವರನ್ನು ಫಲ ತಾಂಬೂಲ ನೀಡಿ ಸನ್ಮಾನಿಸಿ ಗೃಹಬಳಕೆ ವಿತರಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದ ಎಸ್. ಎಸ್ ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಮೂರ್ನಾಡಿನ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಎಸ್.ಎಸ್ ರವಿ,ಪಿ.ಆರ್ ತನಶೀರ್, ಎಂ. ಎಂ.ಹೇಮಂತ್ ಹಾಗೂ ಮೂರ್ನಾಡು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಬಿ.ಸಿ.ಲತಾಕ್ಷ ರೈ, ಕೆ. ಎಂ ತಶ್ಮಿಕಾ, ಟಿ ಐ ಅಲಿಮಾ ಇಶ್ರ ಇವರಿಗೆ ಫಲ ತಾಂಬೂಲ ನೀಡಿ ಸನ್ಮಾನಿಸಿ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು. ಈ ಸಂದರ್ಭ ಕಳೆದ ಎಸ್.ಎಸ್ ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಜಿಲ್ಲೆಗೆ ಎರಡನೇ ಸ್ಥಾನ ಮಡಿಕೇರಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿ ಶೈಕ್ಷಣಿಕ ಸಾಧನೆ ಪಡೆದು ಗ್ರಾಮಕ್ಕೆ ಕೀರ್ತಿಹೆಚ್ಚಿಸಿದ ಮೂರ್ನಾಡಿನ ಜ್ಞಾನಜ್ಯೋತಿ ವಿದ್ಯಾ ಸಂಸ್ಥೆಯ ಸಿ.ಎಂ.ಮಹಮದ್ ಶಾಹಿಲ್ ಅವರನ್ನು ಶಾಲು ಹೊದಿಸಿ ಫಲ ತಾಂಬೂಲ ನೀಡಿ ಸನ್ಮಾನಿಸಿ ಪ್ರೋತ್ಸಾಹ ಧನನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗಜೇಂದ್ರ ಯುವಶಕ್ತಿ ಸಂಘದ ಅಧ್ಯಕ್ಷರಾದ ಎಂ.ಕೆ.ಸತೀಶ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಂಜಿತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ನೆರೆದ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಿತು. ಬಳಿಕ ಮೂರ್ನಾಡಿನ ಟೀಮ್ ಇನೋಟಿವ್ ಬಾಯ್ಸ್ ವತಿಯಿಂದ ಕಲ ಕೃತಿಗಳನ್ನು ಒಳಗೊಂಡ ಅಲಂಕೃತ ಮಂಟಪದಲ್ಲಿ ಪಾರ್ವತಿ ತನಯನಿಗೆ ಗಜವದನ ಪೌರಾಣಿಕ ಕಥ ಸಾರಾಂಶದ ಚಲನವಲನ ನೆರೆದವರ ಗಮನ ಸೆಳೆಯಿತು. ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಸಾಗಿ ಬಲಮುರಿಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.