ನಾಪೋಕ್ಲು: ಗೌರಿ-ಗಣೇಶೋತ್ಸವ ಆಚರಣೆ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡಿ : ಪಿಎಸ್ಐ ರಾಘವೇಂದ್ರ ಕರೆ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು : ನಾಪೋಕ್ಲು ವಿಭಾಗದಲ್ಲಿ ಗೌರಿ-ಗಣೇಶೋತ್ಸವ ಆಚರಣೆ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ವ್ಯವಸ್ಥಿತವಾಗಿ ಹಬ್ಬವನ್ನು ಆಚರಣೆ ಮಾಡಬೇಕೆಂದು ನಾಪೋಕ್ಲು ಠಾಣಾಧಿಕಾರಿ ಪಿ.ಜಿ.ರಾಘವೇಂದ್ರ ಅವರು ಕರೆನೀಡಿದರು. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ನಾಪೋಕ್ಲು ವ್ಯಾಪ್ತಿಯ ಗೌರಿ ಗಣೇಶೋತ್ಸವ ಸಮಿತಿಯವರಿಗೆ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳನ್ನು ಇಡುವ ಸ್ಥಳಗಳಲ್ಲಿ ಹಾಯಾ ಗಣೇಶೋತ್ಸವ ಸಮಿತಿಯವರು ಸಿಸಿ ಕ್ಯಾಮೆರಾವನ್ನು ಅಳವಡಿಸಬೇಕು.ಅದರಂತೆ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಸ್ಥಳದಲ್ಲಿ ಹಗಲು, ರಾತ್ರಿ ಕಾವಲುಗಾರನಾಗಿ ಒಬ್ಬರನ್ನು ನೇಮಿಸಬೇಕು. ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆದಿರಬೇಕು.
ಗಣೇಶ ಮೂರ್ತಿ ವಿಸರ್ಜನೆಯ ಸಂದರ್ಭ ಅತಿಯಾದ ಧ್ವನಿವರ್ಧಕ ಬಳಸಿ ಸಾರ್ವಜನಿಕರಿಗೆ ಶಬ್ದ ಮಾಲಿನ್ಯ ಉಂಟು ಮಾಡದಂತೆ ಕ್ರಮ ವಹಿಸಿ ಇಲಾಖೆಯ ಆದೇಶವನ್ನು ಎಲ್ಲರೂ ಪಾಲಿಸತಕ್ಕದು. ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯವಸ್ಥಿತವಾಗಿ ಗೌರಿ ಗಣೇಶ ಮೂರ್ತಿಯನ್ನು ರಾತ್ರಿ 10 ಗಂಟೆಯ ಒಳಗಡೆ ವಿಸರ್ಜನೆ ಮಾಡಬೇಕೆಂದು ಗಣೇಶೋತ್ಸವ ಸಮಿತಿ ಪದಾಧಿಕಾರಿಗಳಿಗೆ ಸೂಚಿಸಿದ ಠಾಣಾಧಿಕಾರಿ ರಾಘವೇಂದ್ರ ಗಣೇಶ ಮೂರ್ತಿಯ ವಿಸರ್ಜನೆಯ ಸಂದರ್ಭ ಸಂಬಂಧಪಟ್ಟ ಸಮಿತಿಯವರು ನುರಿತ ಈಜುಗಾರರನ್ನು ಸ್ಥಳದಲ್ಲಿ ನೇಮಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ನಿರ್ವಹಿಸುವಂತೆ ತಿಳಿಸಿದರು. ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಸಂದರ್ಭ ಕಾನೂನು ಸವ್ಯವಸ್ಥೆಗೆ ಧಕ್ಕೆ ಉಂಟು ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಠಾಣಾಧಿಕಾರಿ ರಾಘವೇಂದ್ರ ಖಡಕ್ ಎಚ್ಚರಿಕೆ ನೀಡಿದರು. ಈ ಸಂದರ್ಭ ಸಭೆಯಲ್ಲಿ ನಾಪೋಕ್ಲು ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗ ಹಾಗೂ ನಾಪೋಕ್ಲು ವಿಭಾಗದ ವಿವಿಧ ಗೌರಿ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.