ನಾಪೋಕ್ಲು| ಚೆರಿಯಪರಂಬು ಕಲ್ಲುಮೊಟ್ಟೆ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಸೇತುವೆ ನಿರ್ಮಾಣ ಕಾಮಗಾರಿಗೆ ಕಾವೇರಿ ನದಿ ದಡದಿಂದ ಗುಂಡಿ ಅಗೆದು ಮಣ್ಣು ಬಳಕೆ: ಗ್ರಾಮಸ್ಥರ ವಿರೋಧ

ನಾಪೋಕ್ಲು| ಚೆರಿಯಪರಂಬು ಕಲ್ಲುಮೊಟ್ಟೆ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಸೇತುವೆ ನಿರ್ಮಾಣ ಕಾಮಗಾರಿಗೆ ಕಾವೇರಿ ನದಿ ದಡದಿಂದ ಗುಂಡಿ ಅಗೆದು ಮಣ್ಣು ಬಳಕೆ: ಗ್ರಾಮಸ್ಥರ ವಿರೋಧ

ವರದಿ:ಝಕರಿಯ ನಾಪೋಕ್ಲು

 ನಾಪೋಕ್ಲು :ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬು ಕಲ್ಲುಮೊಟ್ಟೆ ಗ್ರಾಮಕ್ಕೆ ತೆರಳುವ ಸಂಪರ್ಕ ರಸ್ತೆಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿಗೆ ಕಾವೇರಿ ನದಿ ದಡದಲ್ಲೇ ಗುಂಡಿ ಅಗೆದು ಮಣ್ಣುಬಳಸಲು ಮುಂದಾಗಿದ್ದಾರೆ ಎಂದು ಗ್ರಾಮದ ನಿವಾಸಿಗಳು ಆರೋಪಿಸಿದ್ದಾರೆ.

ಚೆರಿಯಪರಂಬು ಕಲ್ಲುಮೊಟ್ಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಾವೇರಿ ನದಿ ಪ್ರವಾಹಬಂದು ಗ್ರಾಮಸ್ಥರ ಸಂಚಾರಕ್ಕೆ ಹಲವಾರು ವರ್ಷಗಳಿಂದ ಅಡಚಣೆ ಉಂಟಾಗುತ್ತಿತ್ತು. ಇದಕ್ಕೆ ಹಲವು ಬಾರಿ ಗ್ರಾಮಸ್ಥರು ಪ್ರತಿಭಟನೆಮಾಡಿ ಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಹಾಗೂ ಶಾಸಕ ಪೊನ್ನಣ್ಣ ಅವರಲ್ಲಿ ಮನವಿ ಮಾಡಿದ್ದರು.

ಇದಕ್ಕೆ ಸ್ಪಂದಿಸಿದ ಶಾಸಕ ಪೊನ್ನಣ್ಣ ಅವರು ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪ್ರಗತಿಯಲ್ಲಿದ್ದು ಇದೀಗ ಕಾಮಗಾರಿಯ ಗುತ್ತಿಗೆದಾರರು ಸೇತುವೆಯಿಂದ 20 ಮೀಟರ್ ದೂರದಲ್ಲಿ ಗುಂಡಿತೆಗೆದು ಸೇತುವೆ ಕಾಮಗಾರಿಗೆ ಮಣ್ಣು ಬಳಸಲು ಮುಂದಾದಾಗ ಗ್ರಾಮದ ಪೈಸಾರಿ ನಿವಾಸಿಗಳು ಕಾವೇರಿ ನದಿದಡದ ಎತ್ತರವಾಗಿರುವ ಈ ಸ್ಥಳದಿಂದ ಮಣ್ಣು ತೆಗೆದರೆ ಮಳೆಗಾಲದ ಸಂದರ್ಭ ಪ್ರವಾಹದ ನೀರು ನಮ್ಮ ಮನೆಗಳಿಗೆ ಪ್ರವೇಶಿಸುತ್ತವೆ ಎಂದು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ. ಸ್ಥಳೀಯ ಗ್ರಾಮಸ್ಥರಾದ ದಿಲೀಶ್ ಹಾಗೂ ಪೀರು ಸಾಹೇಬ್ ಮಾತನಾಡಿ ಸೇತುವೆ ನಿರ್ಮಾಣದ ಸ್ಥಳದಿಂದ ಕೇವಲ 20 ಮೀಟರ್ ದೂರದಲ್ಲಿರುವ ಕಾವೇರಿ ನದಿದಡದ ಸ್ಥಳದಿಂದ ಸೇತುವೆ ಕಾಮಗಾರಿಗೆ ಗುಂಡಿ ತೆಗೆದು ಮಣ್ಣನ್ನುಬಳಸಲು ಮುಂದಾಗಿದ್ದಾರೆ.

 ಇಲ್ಲಿ 150ಕ್ಕೂ ಹೆಚ್ಚು ಕುಟುಂಬಗಳು ಕಳೆದ ಹಲವು ವರ್ಷಗಳಿಂದ ವಾಸಿಸುತ್ತಿದ್ದೇವೆ. ಅಲ್ಲದೆ ಈ ಸ್ಥಳದಲ್ಲಿ ಪಂಚಾಯಿತಿಯವರು ತ್ಯಾಜ್ಯಗಳನ್ನು ಹಾಕಿ ಮುಚ್ಚಲಾದ ಗುಂಡಿಗಳಿವೆ. ಪುನಃ ಗುಂಡಿ ತೋಡಿ ಇಲ್ಲಿಂದ ಮಣ್ಣುತೆಗೆದರೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ಮಾನ್ಯ ಶಾಸಕರು ನಮಗೆ ಎಲ್ಲಾ ರೀತಿಯ ಸ್ಪಂದನೆ ನೀಡಿದ್ದು ಇದೀಗ ಅನ್ಯಾಯದ ರೀತಿಯಲ್ಲಿ ಮಣ್ಣು ತೆಗೆಯುವ ಕೆಲಸ ನಡೆಯುತ್ತಿದ್ದು ಇದನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದಲ್ಲದೆ ಶಾಸಕರ ಹಾಗೂ ಪಂಚಾಯಿತಿಯ ಆದೇಶದಂತೆ ಸರಕಾರಿ ಸ್ಥಳದಿಂದ ಮಣ್ಣು ತೆಗೆಯಲು ಅನುಮತಿ ನೀಡಿದ ಮೇರೆಗೆ ನಾವು ಮಣ್ಣು ತೆಗೆಯಲು ಪ್ರಾರಂಭಿಸಿದ್ದೇವೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ.

 ಇದರ ಬಗ್ಗೆ ಪಂಚಾಯಿತಿ ಆಡಳಿತವೇ ಉತ್ತರಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸೇತುವೆ ಕಾಮಗಾರಿಯ ಗುತ್ತಿಗೆದಾರರು ಇಲ್ಲಿ ಗುಂಡಿ ತೆಗೆಯುವ ಕೆಲಸ ನಡೆಯುತ್ತಿಲ್ಲ. ಎತ್ತರದಲ್ಲಿರುವ ಸ್ಥಳವನ್ನು ಸಮತಟ್ಟು ಮಾಡಿ ಅದರಿಂದ ಸಿಗುವ ಮಣ್ಣನ್ನು ಬಳಸುತ್ತೇವೆ ಎಂದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ಇದು ಪ್ರವಾಹ ಬರುವ ಸ್ಥಳವಾದ್ದರಿಂದ ಬೇರೆ ಕಡೆಯಿಂದ ಮಣ್ಣನ್ನು ತಂದು ಈ ಹಿಂದೆ ಇಲ್ಲಿ ಹಾಕಿದ್ದಾರೆ. ಇದನ್ನು ಸಮತಟ್ಟು ಮಾಡಿ ಮಣ್ಣು ತೆಗಿಯಲು ನಾವು ಬಿಡೋದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಇದರ ಬಗ್ಗೆ ಸ್ಥಳೀಯ ಪಂಚಾಯಿತಿ ಅಧ್ಯಕ್ಷರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಚೆರಿಯಪರಂಬು ಗ್ರಾಮದ ಸೇತುವೆ ಕಾಮಗಾರಿಗೆ ಸೇತುವೆ ಬಳಿಯ ಸ್ಥಳದಿಂದ ಗುಂಡಿ ತೆಗೆದು ಮಣ್ಣನ್ನು ಬಳಸಲು ಯಾರೂ ಸಹ ನಮ್ಮಿಂದ ಅನುಮತಿ ತೆಗೆದುಕೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ನಾಪೋಕ್ಲು ಪೊಲೀಸರು ಮಣ್ಣು ತೆಗೆಯುವ ಕಾಮಗಾರಿಯನ್ನು ಸ್ಥಗಿತ ಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿ ಗ್ರಾಮಸ್ಥರನ್ನು ಸಮಾಧಾನಪಡಿಸಿದರು. ಈ ಸಂದರ್ಭ ಗ್ರಾಮದ ನಿವಾಸಿಗಳಾದ ಪೀರುಸಾಹೇಬ್,ಗಣೇಶ್,ಫಯಾಜ್, ಯೂಸುಫ್,ಶಂಕರ್, ರಶೀದ್, ಸಾದಿಕ್, ಇಕ್ಬಾಲ್ ಮತ್ತಿತರರು ಹಾಜರಿದ್ದರು.