ನಾಪೋಕ್ಲು: ಪ್ರಮುಖ ರಸ್ತೆಗಳು ಗುಂಡಿಮಯ!

(ವಿಶೇಷ ವರದಿ:ಝಕರಿಯಾ ನಾಪೋಕ್ಲು)
ನಾಪೋಕ್ಲು: ನಾಪೋಕ್ಲು ಭಾಗದ ಪ್ರಮುಖ ರಸ್ತೆಗಳು ಗುಂಡಿಗಳಿಂದ ಕೂಡಿದ್ದು ವಾಹನ ಸವಾರರು ಸಂಚರಿಸಲು ನರಕಯಾತನೆ ಅನುಭವಿಸುವಂತಾಗಿದೆ. ಹದಗೆಟ್ಟ ರಸ್ತೆಯನ್ನು ದುರಸ್ತಿ ಪಡಿಸುವಂತೆ ಸಾರ್ವಜನಿಕರು ಹಾಗೂ ವಾಹನ ಚಾಲಕರು ಒತ್ತಾಯಿಸಿದ್ದಾರೆ.ಕಿತ್ತುಹೋದ ಡಾಂಬರು ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗಿದ್ದು,ರಸ್ತೆ ಮದ್ಯದಲ್ಲೇ ಮಣ್ಣು ಶೇಖರಣೆಗೊಂಡು ಸುತ್ತಲೂ ಜೆಲ್ಲಿಕಲ್ಲುಗಳು ಹರಡಿ ನಿಂತಿವೆ.ಇವುಗಳ ನಡುವೆ ಜೀವ ಕೈಯಲ್ಲಿಡಿದು ಚಾಲನೆ ಮಾಡುವ ಪರಿಸ್ಥಿತಿ ಎದುರಾಗಿದೆ.ಗುಂಡಿಗಳೇ ತುಂಬಿರುವ ಈ ರಸ್ತೆಯಲ್ಲಿ ಪಾದಾಚಾರಿಗಳು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಹೆಜ್ಜೆಹಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಾಪೋಕ್ಲು ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗೆ ಸೇರುವ ಕೋಟೇರಿ, ಹಳೇ ತಾಲೂಕು, ಚೋನಾಕೆರೆ, ನೆಲೆಜಿ ,ಬಲ್ಲಮಾವಟಿ ಮಾರ್ಗವಾಗಿ ಪುಣ್ಯಕ್ಷೇತ್ರ ಭಾಗಮಂಡಲಕ್ಕೆ ತೆರಳುವ ರಸ್ತೆಯ ಪಾಡಾಗಿದೆ. ಗ್ರಾಮೀಣ ವಿಭಾಗದಲ್ಲಿರುವ ಗ್ರಾಮಗಳ ಹಲವೆಡೆ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದರೆ. ದಿನನಿತ್ಯ ನೂರಾರು ವಾಹನಗಳು ಸಂಚರಿಸುವ ಪ್ರಮುಖ ರಸ್ತೆಗಳನ್ನು ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಕಡೆಗಣಿಸಿದ್ದು ಇದರಿಂದ ರಸ್ತೆ ಯುದ್ಧಕ್ಕೂ ಗುಂಡಿಗಳೇ ಗೋಚರಿಸಿ ವಾಹನ ಸವಾರರು ಹೈರಾಣಾಗುವಂತಾಗಿದೆ ಎಂದು ನಾಗರಿಕರು ದೂರಿದ್ದಾರೆ.
ಈ ರಸ್ತೆಗಳಲ್ಲಿ ಪ್ರತಿನಿತ್ಯ ಸಾಕಷ್ಟು ವಾಹನಗಳು ಸಂಚರಿಸುತ್ತಿದ್ದು. ರಸ್ತೆಯಲ್ಲಿ ಸಂಚರಿಸುವಾಗ ಹಲವಾರು ದ್ವಿಚಕ್ರ ವಾಹನ ಸವಾರರು ಬಿದ್ದು ಆಸ್ಪತ್ರೆ ಸೇರಿರುವ ಘಟನೆ ಕೂಡ ಹಲವು ಭಾರಿ ನಡೆದಿದೆ.ಆಟೋರಿಕ್ಷಾ ಗಳು,ಖಾಸಗಿ ವಾಹನ ಹಾಗೂ ಶಾಲಾ ಮಕ್ಕಳನ್ನು ಕರೆತರುವ ಶಾಲಾ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಇದರಿಂದ ರಸ್ತೆಯಲ್ಲಿ ವಿದ್ಯಾರ್ಥಿಗಳನ್ನು ಹೊತ್ತು ಭಯದಿಂದ ಸಂಚರಿಸುವ ಪರಿಸ್ಥಿತಿ ಉದ್ಭವವಾಗಿದೆ. ಮಳೆಗಾಲಕ್ಕೂ ಮುನ್ನ ಈ ರಸ್ತೆಯಲ್ಲಿ ತಾತ್ಕಾಲಿಕ ಗುಂಡಿ ಮುಚ್ಚುವ ಪ್ರಯತ್ನ ನಡೆದಿದೆ. ಆದರೆ ಕೊಡಗಿನ ಮಳೆಗೆ ತಾತ್ಕಾಲಿಕ ದುರಸ್ತಿ ತಡೆಯುತ್ತಿಲ್ಲ.ಸರ್ವಕಾಲಿಕ ರಸ್ತೆಯನ್ನು ನಿರ್ಮಾಣ ಮಾಡಬೇಕೆಂದು ಈ ಹಿಂದೆ ಸಾರ್ವಜನಿಕರು ಮಾಧ್ಯಮಗಳ ಮೂಲಕ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ನಾಪೋಕ್ಲು ಪಟ್ಟಣದಿಂದ ಕೈಕಾಡು ಪಾರಾಣೆ ಹಾಗೂ ಕೊಟ್ಟಮುಡಿ, ಬೆಟ್ಟಗೇರಿ ಮಾರ್ಗವಾಗಿ ಮಡಿಕೇರಿ ಕಡೆಗೆ ತೆರಳುವ ರಸ್ತೆಯ ಹಣೆ ಬರಹ ಕೂಡ ಹೇಳ ತೀರದು ಅಂದಿದ್ದಾರೆ ಸಾರ್ವಜನಿಕರು. ಇನ್ನಾದರೂ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಹಾಗೂ ವಾಹನ ಚಾಲಕರು ಆಗ್ರಹಿಸಿದ್ದಾರೆ.
ರಾಜ್ಯ ಹೆದ್ದಾರಿಗೆ ಒಳಪಡುವ ನಾಪೋಕ್ಲು ಹಳೇ ತಾಲೂಕು,ಕೋಟೇರಿ, ನೆಲಜಿ, ಬಲ್ಲಮಾವಟಿ ಮಾರ್ಗವಾಗಿ ಪುಣ್ಯ ಕ್ಷೇತ್ರ ಭಾಗಮಂಡಲಕ್ಕೆ ತೆರಳುವ ರಸ್ತೆ ಹದಗೆಟ್ಟು ವಾಹನ ಸವಾರರು ಸಂಚರಿಸಲು ಭವಣೆ ಪಡುವಂತಾಗಿದೆ. ಗ್ರಾಮೀಣಭಾಗದ ಗ್ರಾಮಕ್ಕೆ ತೆರಳುವ ರಸ್ತೆಗಳು ಅಭಿವೃದ್ಧಿಯಾಗುತ್ತಿದೆ. ಆದರೆ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿರುವ ಈ ರಸ್ತೆಯನ್ನು ದುರಸ್ತಿಪಡಿಸದೆ ಇರುವುದು ವಿಪರ್ಯಾಸ. ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಂಡು ದುರಸ್ತಿಪಡಿಸಬೇಕು.
ಕೊಂಬಂಡ ಸಂಜಯ್ ಬೆಳೆಗರಾರು ಚೋನಾಕೆರೆ ನಾಪೋಕ್ಲು
------------------------------------------
ನಾಪೋಕ್ಲು ವಿಭಾಗದ ಪ್ರಮುಖರಸ್ತೆಗಳು ಹದಗೆಟ್ಟು ವಾಹನ ಸಂಚಾರಕ್ಕೆ ಸವಾರರು ಹೈರಾಣಾಗುತ್ತಿದ್ದಾರೆ. ನಾವು ಪ್ರತಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಮಕ್ಕಳನ್ನು ಈ ರಸ್ತೆಯ ಮೂಲಕ ಶಾಲೆಗೆ ಕರೆದೊಯ್ಯುತ್ತಿದ್ದು, ರಸ್ತೆ ಹದಗೆಟ್ಟಿದ್ದರಿಂದ ವಾಹನ ಚಾಲನೆಗೆ ಕಷ್ಟಕರವಾಗಿದೆ. ಇದರಿಂದ ಮಕ್ಕಳನ್ನು ಶಾಲೆಗೆ ತಡವಾಗಿ ತಲುಪಿಸುವಂತಹ ಪರಿಸ್ಥಿತಿ ಉದ್ಭವವಾಗಿದೆ. ಸಂಬಂಧಪಟ್ಟವರು ರಸ್ತೆ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು.
ಸಿ.ಎಂ. ಮಜೀದ್ ವಾಹನ ಚಾಲಕ ಚೋನಾಕೆರೆ ನಾಪೋಕ್ಲು.
---------------------------------------------
ಪಟ್ಟಣದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳು ತೀರಾ ಹದಗೆಟ್ಟಿದ್ದು ಪ್ರತಿನಿತ್ಯ ಆಟೋರಿಕ್ಷಾ ಚಲಾಯಿಸುತ್ತಿರುವ ನಾವುಗಳು ಈ ಗುಂಡಿ ಬಿದ್ದ ರಸ್ತೆಯಲ್ಲಿ ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ.ಅಲ್ಲದೆ ಈ ಗುಂಡಿಬಿದ್ದ ರಸ್ತೆಯಿಂದ ಆಟೋ ರಿಪೇರಿಯಾಗಿ ದಿನದಲ್ಲಿ ದುಡಿದ ಹಣವನ್ನು ಗ್ಯಾರೇಜಿಗೆ ಕೊಡಬೇಕಾದ ಪರಿಸ್ಥಿತಿ ಇದೆ. ಇದರಿಂದ ವರಮಾನ ಕೂಡ ಕಡಿಮೆಯಾಗಿದ್ದು ಜೀವನ ಕಷ್ಟಕರವಾಗಿದೆ. ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಶೀಘ್ರದಲ್ಲಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
ಟಿ. ಪಿ.ಸುಕುಮಾರ್, ನಾಲ್ಕುನಾಡು ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ನಾಪೋಕ್ಲು.
What's Your Reaction?






