ಕೂಡ್ಲೂರು ನವಗ್ರಾಮದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ

ಕುಶಾಲನಗರ: ಸದೃಢ ಮತ್ತು ಆರೋಗ್ಯವಂತ ಸಮಾಜ ಕಟ್ಟಬೇಕಾದರೆ ಗರ್ಭಿಣಿಯರು , ಬಾಣಂತಿಯರು ಪೌಷ್ಟಿಕ ಆಹಾರ ಬಳಸುವ ಮೂಲಕ ತಮ್ಮ ಮತ್ತು ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಹೇಳಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನೆಯ ವತಿಯಿಂದ ಕೂಡುಮಂಗಳೂರು ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಕೂಡ್ಲೂರು ನವಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ( ಸೆಪ್ಟೆಂಬರ್ 8 ರಂದು ) ವಿವಿಧ ಸಂಘ- ಸಂಸ್ಥೆಗಳ ಸಹಕಾರದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪೋಷಣ್ ಅಭಿಯಾನ: 2025 ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಗರ್ಭಿಣಿ, ಬಾಣಂತಿ, ಕಿಶೋರಿಯರು ಮತ್ತು 6 ವರ್ಷ ಒಳಗಿನ ಮಕ್ಕಳ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಈ ಅಭಿಯಾನವನ್ನು 2018 ರಲ್ಲಿ ಚಾಲನೆ ನೀಡಲಾಗಿದೆ ಎಂದರು. ಗ್ರಾಮೀಣ ಮಹಿಳೆಯರು ಹಾಗೂ ಮಕ್ಕಳ ಆರೋಗ್ಯ ರಕ್ಷಣೆ ಹಿನ್ನೆಲೆಯಲ್ಲಿ ಪ್ರತಿ ತಿಂಗಳ 15 ನೇ ತಾರೀಖಿನಂದುಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಟಿಕಾಂಶ ದಿನವನಯ ನಿಯಮಿತವಾಗಿ ನಡೆಸಲಾಗುತ್ತದೆ ಎಂದು ಪ್ರೇಮಕುಮಾರ್ ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಕೂಡುಮಂಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಎಚ್.ಎಸ್.ಸುಜಾತ ಮಾತನಾಡಿ, 0-6 ವರ್ಷ ವಯಸ್ಸಿನ ಮಕ್ಕಳಲ್ಲಿ ಅಪೌಷ್ಟಿಕತೆ ತಡೆಗಟ್ಟುವುದು ಮತ್ತು ಕಡಿಮೆ ಮಾಡುವುದು ಹಾಗೂ ಚಿಕ್ಕ ಮಕ್ಕಳಲ್ಲಿ ರಕ್ತಹೀನತೆಯ ಹರಡುವಿಕೆಯನ್ನು ಕಡಿಮೆ ಮಾಡಲು ಉತ್ತಮ ಹಾಗೂ ಪೌಷ್ಟಿಕಾಂಶವುಳ್ಳ ಆಹಾರ ನೀಡಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆ ಆರ್.ಎಸ್. ಕಲಾವತಿ, ಮಹಿಳೆಯರು ಮತ್ತು ತಮ್ಮ ಮಕ್ಕಳನ್ನು ಆರೋಗ್ಯವಂತರನ್ನಾಗಿಸುವ ದಿಸೆಯಲ್ಲಿ ಈ ಅಭಿಯಾನವು ಸಹಕಾರಿಯಾಗಿದೆ ಎಂದರು. ಅಪೌಷ್ಟಿಕತೆಯ ನಿವಾರಿಸುವಲ್ಲಿ ಕೇಂದ್ರ ಸರ್ಕಾರ ಆಯೋಜಿಸಿರುವ ರಾಷ್ಟ್ರೀಯ ಪೋಷಣ ಅಭಿಯಾನವು ರಾಷ್ಟ್ರೀಯ ಯೋಜನೆಯ ಕಾರ್ಯಕ್ರಮವಾಗಿದೆ ಎಂದರು.
ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯೆ ಶಿವಮಣಿ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು. ದಿಢೀರ್ ಆಹಾರ ಪದಾರ್ಥಗಳ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದ ಗ್ರಾಮದ ಹಿರಿಯ ಮಹಿಳೆ ಕಮಲಮ್ಮ, ಪ್ರತಿಯೊಬ್ಬರೂ ಫಾಸ್ಟ್ ಫುಡ್ ಬಳಕೆಯನ್ನು ತ್ಯಜಿಸುವ ಮೂಲಕ ಮನೆಯಲ್ಲೇ ತರಕಾರಿ, ಧಾನ್ಯಗಳು ಹಾಗೂ ಸೊಪ್ಪು ಬಳಕೆ ಮಾಡುವ ಮೂಲಕ ಉತ್ತಮ ಆರೋಗ್ಯ ಕಂಡುಕೊಳ್ಳಬೇಕು ಎಂದರು.
ಆಶಾ ಕಾರ್ಯಕರ್ತೆಯರಾದ ನಂದಿನಿ ನೇತ್ರಾವತಿ, ವಿದ್ಯಾ ಸ್ತ್ರೀ ಶಕ್ತಿ ಸಂಘದ ಪ್ರತಿನಿಧಿ ಯಶೋದ, ಸದಸ್ಯರಾದ ನೇತ್ರಾವತಿ, ರಾಣಿ, ಕೇಂದ್ರದ ಸಹಾಯಕಿ ಸುಶೀಲಾ ಮತ್ತಿತರರು ಇದ್ದರು.
ಸೀಮಂತ ಕಾರ್ಯಕ್ರಮ: ಗರ್ಭಿಣಿಯರಿಗೆ ಸಾಂಪ್ರಾದಾಯಿಕವಾಗಿ ಸೀಮಂತತನದ ಮೂಲಕ ಫಲ ತಾಂಬೂಲ ನೀಡಿ ಗೌರವಿಸಲಾಯಿತು. ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ಪೌಷ್ಟಿಕಾಂಶವು ಆಹಾರ ಧಾನ್ಯವನ್ನು ನೀಡಲಾಯಿತು.