ನವಗ್ರಾಮ: ಚರಂಡಿ ಸಮಸ್ಯೆ ಪರಿಹಾರಕ್ಕೆ ಕ್ರಮ
ಕುಶಾಲನಗರ,ಡಿ6: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಕೂಡ್ಲೂರು ನವಗ್ರಾಮದಲ್ಲಿ ಚರಂಡಿ ಸಮಸ್ಯೆ ಹಿನ್ನಲೆ ವಾರ್ಡ್ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಹಾಗೂ ಪಿಡಿಓ ಸಂತೋಷ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚರಂಡಿ ಸಮಸ್ಯೆಗೆ ಪಂಚಾಯಿತಿ ವತಿಯಿಂದ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ನವಗ್ರಾಮದಲ್ಲಿ ಕೆಲವು ಮನೆಗಳಿಂದ ಕೊಳಚೆ ನೀರನ್ನು ರಸ್ತೆಗೆ ಬಿಡುತ್ತಿರುವ ಕಾರಣ ಕೊಳಚೆ ನೀರು ರಸ್ತೆಯಲ್ಲಿ ನಿಲ್ಲುವಂತ ಸ್ಥಿತಿ ನಿರ್ಮಾಣವಾದ ಹಿನ್ನಲೆ ಸ್ಥಳೀಯ ವಾರ್ಡ್ ಸದಸ್ಯ ಹಾಗೂ ಪಿಡಿಓ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ನಂತರ ಸಮಸ್ಯೆ ನಿವಾರಣೆಗೆ ತಾತ್ಕಾಲಿಕವಾಗಿ ಕ್ರಮಕ್ಕೆ ಮುಂದಾಗಿದ್ದಾರೆ. ಅಲ್ಲದೇ ಕೊಳಚೆ ನೀರು ರಸ್ತೆಗೆ ಬಿಡದಂತೆ ಮನೆಯ ಮಾಲೀಕರಿಗೆ ಸೂಚಿನೆ ನೀಡಲಾಗಿದೆ.
ಈ ಸಂದರ್ಭ ಮಾತನಾಡಿದ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್, ನವಗ್ರಾಮದಲ್ಲಿ ರಸ್ತೆಯಲ್ಲಿ ನೀರು ನಿಲ್ಲುತ್ತಿರುವ ಸಮಸ್ಯೆಗೆ ತಾತ್ಕಾಲಿಕವಾಗಿ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು.
ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಗ್ರಾಮಸ್ಥರ ಮನವಿಯ ಮೇರೆಗೆ ಶಾಸಕರು ನವಗ್ರಾಮದ ರಸ್ತೆಗೆ ೨೫ ಲಕ್ಷ ರೂಗಳು ಅನುದಾನ ನೀಡಿದ್ದು, ಆದಷ್ಟು ಬೇಗನೇ ರಸ್ತೆ ಕಾಮಗಾರಿಯ ಗುದ್ದಲಿಪೂಜೆಯನ್ನು ನೆರವೇರಿಸಲಿದ್ದಾರೆ. ವಾರ್ಡ್ ಅಭಿವೃದ್ಧಿಗೆ ಇನ್ನಷ್ಟು ಅನುದಾನ ನೀಡುವ ಬಗ್ಗೆ ಮನವಿ ಮಾಡಲಾಗುವುದು ಎಂದರು. ಈ ಸಂದರ್ಭ ಸ್ಥಳೀಯ ಗ್ರಾಮಸ್ಥರಾದ ಮೋಹನ್, ಶಶಿ, ಸತೀಶ್, ರಾಜಣ್ಣ ಹಾಗೂ ಇನ್ನಿತರರು ಇದ್ದರು.
