ನೋಯ್ಡಾ | ಹಣ ಸುಲಿಗೆ ಮಾಡುವಂತೆ ಒತ್ತಡ ಹಾಕಿದ್ದಕ್ಕೆ ಪ್ರೇಯಸಿಯ ಶಿರಚ್ಛೇದ!
ನೋಯ್ಡಾ, ನ.16: ಬಸ್ಸಿನೊಳಗೇ ಪ್ರೇಯಸಿಯ ಶಿರಚ್ಛೇದ ಮಾಡಿ, ದೇಹದ ಭಾಗಗಳನ್ನು ನೋಯ್ಡಾ–ಗಾಜಿಯಾಬಾದ್ ಪ್ರದೇಶದ ಚರಂಡಿಗಳಲ್ಲಿ ಎಸೆದಿದ್ದ ಓರ್ವ ಚಾಲಕ, ಕೊಲೆಗೆ ಕಾರಣವಾದ ನಿಜವನ್ನು ಪೊಲೀಸರಿಗೆ ಬಾಯ್ಬಿಟ್ಟಿದ್ದಾನೆ. ಹಣ ಸುಲಿಗೆ ಮಾಡಲು ತನ್ನ ಮೇಲೆ ಒತ್ತಡ ಹೇರುತ್ತಿದ್ದ ಕಾರಣವೇ ಪ್ರೇಯಸಿ ಪ್ರೀತಿ ಯಾದವ್ ಅವರನ್ನು ಹತ್ಯೆ ಮಾಡಿದುದಾಗಿ ಆರೋಪಿ ಮೋನು ಸಿಂಗ್ ಅಲಿಯಾಸ್ ಮೋನು ಸೋಲಂಕಿ ಒಪ್ಪಿಕೊಂಡಿದ್ದಾನೆ.
ವಿವಾಹಿತನಾಗಿರುವ ಸಿಂಗ್‌ಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇವುಗಳ ನಡುವೆಯೇ ಅವನು ಬರೋಲಾದಲ್ಲಿ ವಾಸಿಸುತ್ತಿದ್ದ ಯಾದವ್ ಜೊತೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ. ನವೆಂಬರ್ 6ರಂದು ಚರಂಡಿಯಲ್ಲಿ ತಲೆ ಮತ್ತು ಕೈಕಾಲುಗಳು ಪ್ರತ್ಯೇಕಗೊಂಡ ಸ್ಥಿತಿಯಲ್ಲಿದ್ದ ಮಹಿಳೆಯ ಶವ ಪತ್ತೆಯಾಗಿದ್ದ ನಂತರ ಪ್ರಕರಣಕ್ಕೆ ವೇಗ ಸಿಕ್ಕಿತ್ತು. ತನಿಖೆ ಸಿಂಗ್‌ವರೆಗೆ ತಲುಪಿ, ಶುಕ್ರವಾರ ಅವನನ್ನು ಬಂಧಿಸಲಾಯಿತು.
ಪಿಟಿಐ ಜೊತೆ ಮಾತನಾಡಿದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಯಮುನಾ ಪ್ರಸಾದ್, ವಿಚಾರಣೆಯಲ್ಲಿ ಪ್ರೀತಿ ಯಾದವ್ ಹಣಕ್ಕಾಗಿ ತನ್ನನ್ನು ಬೆದರಿಸುತ್ತಿದ್ದಳು, ಅಕ್ರಮ ಚಟುವಟಿಕೆಗಳಲ್ಲಿ ಸಿಲುಕಿಸುವುದಾಗಿ ಹೇಳುತ್ತಿದ್ದರೆಂದು ಸಿಂಗ್ ಒಪ್ಪಿಕೊಂಡಿದ್ದಾನೆ ಎಂದರು. ತನ್ನ ಹೆಣ್ಣುಮಕ್ಕಳನ್ನು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸುವ ಬೆದರಿಕೆ ಕೂಡ ಆಕೆ ಹಾಕುತ್ತಿದ್ದಳೆಂದು ಮೋನು ಸಿಂಗ್ ಆರೋಪಿಸಿದ್ದಾನೆ.
ನವೆಂಬರ್ 5ರಂದು ಪ್ರೀತಿ ಯಾದವ್ ಗೆ ತಿಳಿಯದಂತೆ ಮನೆಯಿಂದ ಹರಿತವಾದ ಆಯುಧ ತೆಗೆದುಕೊಂಡು, ಅವರನ್ನು ಬಸ್ಸಿನಲ್ಲಿ ಕರೆದುಕೊಂಡು ಹೋದ ಮೋನು ಸಿಂಗ್, ಜಗಳವಾಡಿದ್ದಾನೆ. ಬಳಿಕ ಆಕೆಯ ಮೇಲೆ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ನಂತರ ಶಿರಚ್ಛೇದ ಮಾಡಿ, ಗುರುತು ಮರೆಮಾಡಲು ಕೈಗಳನ್ನು ಕತ್ತರಿಸಿದ್ದಾನೆ ಎಂದು ಆರೋಪಿಯ ಹೇಳಿಕೆಯನ್ನು ಡಿಸಿಪಿ ಪ್ರಸಾದ್ ತಿಳಿಸಿದ್ದಾರೆ.
ಹತ್ಯೆಯ ಬಳಿಕ, ದೇಹವನ್ನು ನೋಯ್ಡಾದ ಚರಂಡಿಯಲ್ಲಿ ಎಸೆದು, ಇತರ ಅವಶೇಷಗಳು ಮತ್ತು ಆಯುಧವನ್ನು ಗಾಜಿಯಾಬಾದ್‌ನ ಸಿದ್ದಾರ್ಥ್ ವಿಹಾರ್ ಬಳಿಯ ಚರಂಡಿಯಲ್ಲಿ ಬಿಸಾಕಿರುವುದಾಗಿ ಪೊಲೀಸರು ಹೇಳಿದ್ದಾರೆ.
