ಛಾಯಾಚಿತ್ರ ಎನ್ನುವುದು ಅದ್ಭುತ ಕಲೆ:ಖ್ಯಾತ ಛಾಯಾಚಿತ್ರ ಪತ್ರಕರ್ತ ರವಿ ಪೊಸವಣಿಕೆ

ಛಾಯಾಚಿತ್ರ ಎನ್ನುವುದು ಅದ್ಭುತ ಕಲೆ:ಖ್ಯಾತ ಛಾಯಾಚಿತ್ರ ಪತ್ರಕರ್ತ ರವಿ ಪೊಸವಣಿಕೆ

ಮಡಿಕೇರಿ: ಛಾಯಾಚಿತ್ರ ಎನ್ನುವುದು ಅದ್ಭುತ ಕಲೆ. ಇಂದೊಂದು ಭಾಷೆಯಾಗಿದ್ದು, ಸಾವಿರ ಪದಗಳಿಗೆ ಸಮಾನವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ದಿನ ಪತ್ರಿಕೆಯ ಮಂಗಳೂರು ಆವೃತ್ತಿಯ ಖ್ಯಾತ ಛಾಯಾಚಿತ್ರ ಪತ್ರಕರ್ತ ರವಿ ಪೊಸವಣಿಕೆ ಹೇಳಿದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಪತ್ರಿಕೋದ್ಯಮ ವಿಭಾಗ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಹಯೋಗದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವಿಚಾರ ಸಂಕಿರಣ ಕೊಠಡಿಯಲ್ಲಿ ಸೋಮವಾರ ನಡೆದ ಛಾಯಾಚಿತ್ರ ಪತ್ರಿಕೋದ್ಯಮದ ವ್ಯಾಪ್ತಿ ಮತ್ತು ಉದ್ಯೋಗಾವಕಾಶ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ, ಉಪನ್ಯಾಸ ನೀಡಿದರು.

ಒಂದು ಛಾಯಾಚಿತ್ರದ ಮೂಲಕ ಸಾವಿರ ಕಥೆಯನ್ನು ಹೇಳಬಹುದು. ಇದು ಒಂದು ಕ್ಷಣದಲ್ಲಿ ಭಾವನೆಗಳು, ನೆನಪುಗಳು ಮತ್ತು ಸಂದೇಶಗಳನ್ನು ದೃಶ್ಯ ರೂಪದಲ್ಲಿ ಸೆರೆಹಿಡಿಯುತ್ತದೆ. ಇದು ವಿಜ್ಞಾನ ಮತ್ತು ಸೃಜನಾತ್ಮಕತೆಯನ್ನು ಒಳಗೊಂಡಿದ್ದು, ಪ್ರಕೃತಿ, ಜನರು ಮತ್ತು ಘಟನೆಗಳ ಸೌಂದರ್ಯವನ್ನು ಸೆರೆಹಿಡಿದು ನೋಡುಗರ ಹೃದಯವನ್ನು ಸ್ಪರ್ಶಿಸುತ್ತದೆ ಎಂದರು.

ಛಾಯಾಗ್ರಹಣವು ಕೇವಲ ಚಿತ್ರಗಳನ್ನು ಸೆರೆಹಿಡಿಯುವುದಲ್ಲ. ಅದು ಛಾಯಾಗ್ರಾಹಕನ ಭಾವನೆಗಳು ಮತ್ತು ಕಥೆಗಳನ್ನು ಒಳಗೊಂಡಿರುತ್ತದೆ. ವಿಜ್ಞಾನದ ತಂತ್ರಗಳನ್ನು ಮತ್ತು ಕಲಾತ್ಮಕ ಸೃಜನಶೀಲತೆಯನ್ನು ಬೆರೆಸಿ ಒಂದು ವಿಭಿನ್ನ ಕಲಾ ಪ್ರಕಾರವನ್ನು ಸೃಷ್ಟಿಸುತ್ತದೆ ಎಂದು ಹೇಳಿದರು. ಪ್ರಸ್ತುತ ದಿನಗಳಲ್ಲಿ ಛಾಯಾಚಿತ್ರ ತೆಗೆಯುವುದನ್ನು ಪ್ರತಿಯೊಬ್ಬರು ಅರಿತಿರಬೇಕು ಮತ್ತು ಪ್ರತಿಯೊಬ್ಬರು ಛಾಯಾಗ್ರಹಕರಾಗಿದ್ದಾರೆ. ಉತ್ತಮ ಛಾಯಾಗ್ರಹಕರಾಗಬೇಕಾದರೆ ವಿಭಿನ್ನವಾಗಿ ಛಾಯಾಚಿತ್ರವನ್ನು ತೆಗೆಯಬೇಕು. ಆ ಛಾಯಾಚಿತ್ರ ಮಾತನಾಡುವಂತಿರಬೇಕು. ಛಾಯಾಗ್ರಾಹಕರಿಗೆ ಅಗಾಧ ತಾಳ್ಮೆ ಹಾಗೂ ಸಮಯ ಪ್ರಜ್ಞೆಯಿರಬೇಕು ಎಂದರು. ಛಾಯಾಗ್ರಹಣವು ಒಂದು ಅದ್ಭುತ ಕಲೆಯಾಗಿದೆ ಏಕೆಂದರೆ ಛಾಯಚಿತ್ರ ಒಂದು ಸಾಕ್ಷ್ಯಚಿತ್ರವಾಗಿ ಉಳಿದುಕೊಳ್ಳುತ್ತದೆ. ಫೋಟೋ ಜರ್ನಲಿಸ್ಟ್‌ಗಳು ಇತಿಹಾಸಕಾರರು. ಫೋಟೋಗ್ರಫಿಯಲ್ಲಿ ಹಲವು ವಿಧಾನಗಳಿವೆ. ಹಿಂದಿನ ಕಾಲದಲ್ಲಿ ಕಲಾಕಾರರಿಂದ ಚಿತ್ರ ರಚನೆ ಮಾಡಿಸಲಾಗುತ್ತಿದ್ದು, ಆದರೆ, ಇಂದು ಕೆಲವೇ ಕ್ಷಣಗಳಲ್ಲಿ ನೂರು ಚಿತ್ರಗಳನ್ನು ತೆಗೆಯಬಹುದು ಮತ್ತು ಅದನ್ನು ಪ್ರಪಂಚದ ಯಾವುದೇ ಮೂಲೆಗಳಿಗೆ ಬೇಕಾದರೂ ರವಾನೆ ಮಾಡಬಹುದು ಎಂದು ಹೇಳಿದರು.

ಫೋಟೋ ಜರ್ನಲಿಸ್ಟ್‌ಗಳಿಗೆ ವಿಫುಲ ಅವಕಾಶಗಳಿದ್ದು, ಕೆಲವು ನೀತಿಗಳನ್ನು ಅನುಸರಿಸುವ ಅಗತ್ಯದೆ. ಪ್ರಪಂಚದಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಮನುಷ್ಯನನ್ನು ಬದಲಿ ಮಾಡಲು ಸಾಧ್ಯವಿಲ್ಲ ಎಂದರು. ಇದೇ ಸಂದರ್ಭ ಛಾಯಾಗ್ರಾಹಣದ ವಿವಿಧ ತಂತ್ರಗಳ ಕುರಿತು ಮಾಹಿತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ನೀಡಿದರು. ಅಲ್ಲದೇ ವಿವಿಧ ಕ್ಯಾಮರಗಳಲ್ಲಿ ತಾವು ಸೆರೆ ಹಿಡಿದ ಛಾಯಾಚಿತ್ರಗಳನ್ನು ಪ್ರದರ್ಶಿಸಿದರು.

ಕೊಡಗು ಪ್ರೆಸ್‌ಕ್ಲಬ್ ಮತ್ತು ಎಫ್.ಎಂ.ಕೆ.ಎಂ.ಸಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಹಳೇ ವಿದ್ಯಾರ್ಥಿ ಸಂಘದಿಂದ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಕಾಲೇಜಿನಲ್ಲಿ ಪತ್ರಿಕೋದ್ಯವ ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಸಲುವಾಗಿ ಪ್ರತಿ ವರ್ಷ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರಲಾಗಿದೆ. ಅಲ್ಲದೇ ಟಿವಿ ಮಾಧ್ಯಮ, ಪತ್ರಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರತ್ಯಕ್ಷಿಕೆಯ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು. ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಯಿಂದ ಎಐ ಉದ್ಯೋಗವಕಾಶವನ್ನು ಕಡಿಮೆ ಮಾಡುತ್ತಿದೆ. ಪತ್ರಿಕೋದ್ಯಮದಲ್ಲಿ ವಿಫುಲ ಅವಕಾಶಗಳಿದ್ದು, ವಿದ್ಯಾರ್ಥಿಗಳು ಅದನ್ನು ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಪತ್ರಿಕೋದ್ಯಮ ವಿಭಾಗದ ಸಂಯೋಜಕರಾದ ಪ್ರೊ.ನಯನ ಕಶ್ಯಪ್ ಮಾತನಾಡಿ, ಮನುಷ್ಯನ ಜೀವನದಲ್ಲಿ ನೇತ್ರಗಳೇ ನಿಜವಾದ ಕ್ಯಾಮರವಾಗಿದೆ. ನೇತ್ರಗಳಲ್ಲಿ ಕಾಣುವ ಚಿತ್ರಗಳನ್ನು ಮತ್ತೊಬ್ಬರಿಗೆ ಹೇಳಲು ಸಾಧ್ಯವಾಗದಿದ್ದಾಗ ಅದನ್ನು ಕಲಾತ್ಮವಾಗಿ ಅಥವಾ ಬರವಣಿಗೆಯ ಮೂಲಕ ವ್ಯಕ್ತಪಡಿಸಬೇಕು. ಆದ್ದರಿಂದ ನಮ್ಮ ಕಾಣಿಕೆಯನ್ನು ಇತರರಿಗೆ ತೋರಿಸಬೇಕಾದರೆ ಅದಕ್ಕೆ ಮಾಧ್ಯಮದ ಅಗತ್ಯವಿದೆ ಎಂದರು. ಛಾಯಚಿತ್ರ ಎನ್ನುವುದು ಒಂದು ಕಲೆಯಾಗಿದೆ. ಅದು ಇತಿಹಾಸವನ್ನು ಮರು ಕಟ್ಟಿಕೊಡಲು ಸಹಾಯಮಾಡುತ್ತದೆ. ಇದರಿಂದ ಅನೇಕ ಪ್ರಯೋಜನವಾಗಿದ್ದು, ನೋಡುವ ಕಣ್ಣು, ಅರ್ಥೈಸುವ ರೀತಿ ಬೇರೆ ಇದ್ದು, ಛಾಯಾಚಿತ್ರ ದ್ಯೋತಕವಾಗಿ ಕಾಣುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ರಾಘವ, ಕಾರ್ಯಕ್ರಮ ಅತ್ಯತ್ತಮವಾಗಿ ನಡೆದಿದ್ದು, ಛಾಯಾಚಿತ್ರವಿದ್ದಲ್ಲಿ ವರದಿ ಅರ್ಥಪೂರ್ಣ ಎನಿಸಿಕೊಳ್ಳುತ್ತದೆ. ಇತಿಹಾಸ ಪುನರ್ ರಚನೆ ಮಾಡಬೇಕಾದರೆ ಛಾಯಾಚಿತ್ರದ ಅಗತ್ಯವಿದೆ. ಇದು ಜನರಿಗೆ ಜಾಗೃತಿಯನ್ನು ಮೂಡಿಸುತ್ತದೆ ಮತ್ತು ಮಾನವನನ್ನು ಸುಸಂಸ್ಕೃತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸ್ತುತ ದಿನಗಳಲ್ಲಿ ಛಾಯಾಚಿತ್ರವಿಲ್ಲದ ಜೀವನ ಸಾರ್ಧಕತೆ ಇಲ್ಲ ಎಂಬಂತಾಗಿದೆ ಎಂದರು.

 ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಉಪನ್ಯಾಸಕಿ ಎ.ಎನ್.ಮೋನಿಕ, ರವಿ ಪೊಸವಣಿಕೆ ಅವರ ಪತ್ನಿ ಶಂಕರಿ ಆರ್ ಪೊಸವಣಿಕೆ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಬೊಟ್ಟಂಗಡ ಗಣಪತಿ, ಕಾರ್ಯದರ್ಶಿ ಚಂದನ್ ನಂದರಬೆಟ್ಟು, ಸಂಘದ ನಿರ್ದೇಶಕರು ಹಾಗೂ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಎಂ.ಕೆ.ಆದರ್ಶ್, ಪ್ರೆಸ್ ಕ್ಲಬ್ ನಿರ್ದೇಶಕರು ಹಾಗೂ ಸಂಘದ ನಿರ್ದೇಶಕರಾದ ಲೋಹಿತ್ ಮಾಗಲು, ಸಂಘದ ನಿರ್ದೇಶಕರಾದ ಎಸ್.ಆರ್.ವತ್ಸಲ, ಪ್ರೆಸ್ ಕ್ಲಬ್ ನಿರ್ದೇಶಕರಾದ ಕೆ.ಎಸ್.ಲೋಕೇಶ್, ವಿನೋದ್ ಹಾಗೂ ವಿದ್ಯಾರ್ಥಿಗಳು, ಶಿಕ್ಷಕ ವೃಂದ್ ಹಾಜರಿದ್ದರು. ಕಾಲೇಜಿನ ವಿದ್ಯಾರ್ಥಿಗಳಾದ ಚೊಂದಮ್ಮ ಪ್ರಾರ್ಥಿಸಿದರು, ಬಬಿತಾ ಸ್ವಾಗತಿಸಿದರು, ಟಿ.ವಿ.ವರ್ಷ ನಿರೂಪಿಸಿದರು. ಪತ್ರಿಕೋದ್ಯಮ ಉಪನ್ಯಾಸಕಿ ಎ.ಎನ್.ಮೋನಿಕ ವಂದಿಸಿದರು.

ಛಾಯಾಚಿತ್ರ ಸ್ಪರ್ಧೆ ವಿಜೇತರು:

ಕಾರ್ಯಕ್ರಮದ ಪ್ರಯುಕ್ತ ಕೊಡಗಿನ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೊಡಗಿನ ವರ್ಷಧಾರೆ ಎಂಬ ವಿಷಯದ ಕುರಿತು ನಡೆದ ಜಿಲ್ಲಾ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿ ಸುದೀಪ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಗೋಣಿಕೊಪ್ಪ ಕಾವೇರಿ ಕಾಲೇಜಿನ ಚೆಂಗಪ್ಪ ಬಿ ದ್ವಿತೀಯ, ವಿರಾಜಪೇಟೆ ಕಾವೇರಿ ಕಾಲೇಜಿನ ಕೀರ್ತನ್ ಕಾವೇರಪ್ಪ ತೃತೀಯ ಸ್ಥಾನ ಪಡೆದುಕೊಂಡಿದ್ದು, ಉತ್ತಮ ಛಾಯಾಚಿತ್ರಗಳಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ದಿಯಾನ, ಪ್ರಗತಿ, ಪ್ರಣುತ, ಮಧು ಸೂದನ್, ಬಿ.ಆರ್.ವರ್ಷ ಬಹುಮಾನವನ್ನು ಪಡೆದುಕೊಂಡರು. ಸ್ಪರ್ಧೆಯ ವಿಜೇತರಿಗೆ ಪ್ರಥಮ ರೂ.೨೦೦೦, ದ್ವಿತೀಯ ರೂ.೧೫೦೦, ತೃತೀಯ ರೂ.೧೦೦೦ ನೀಡಲಾಯಿತು. ಅಲ್ಲದೇ ೫ ಉತ್ತಮ ಛಾಯಾಚಿತ್ರಗಳಿಗೆ ಆಕರ್ಷಕ ಬಹುಮಾನವ ಹಾಗೂ ಪ್ರಮಾಣ ಪತ್ರ ನೀಡಲಾಯಿತು.