ಪೊನ್ನಂಪೇಟೆ: ಹುದಿಕೇರಿ ಮುಖ್ಯರಸ್ತೆಯ 7ನೇ ಮೈಲಿಯಲ್ಲಿ‌ ಮನೆಯೊಂದರ ಗೋಡೆಗೆ ಅಪ್ಪಳಿಸಿ ಮಗುಚಿಬಿದ್ದ ಕಾರು

ಪೊನ್ನಂಪೇಟೆ: ಹುದಿಕೇರಿ ಮುಖ್ಯರಸ್ತೆಯ 7ನೇ ಮೈಲಿಯಲ್ಲಿ‌ ಮನೆಯೊಂದರ ಗೋಡೆಗೆ ಅಪ್ಪಳಿಸಿ ಮಗುಚಿಬಿದ್ದ ಕಾರು

ಪೊನ್ನಂಪೇಟೆ:ಪೊನ್ನಂಪೇಟೆಯಿಂದ-ಹುದಿಕೇರಿ ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿದ್ದ ಕಾರೊಂದು ತಿರುವು ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು ಮನೆಯೊಂದರ ಗೋಡೆಗೆ ಅಪ್ಪಳಿಸಿದ ಘಟನೆ ಹುದಿಕೇರಿ ಮುಖ್ಯ ರಸ್ತೆಯ 7ನೇ ಮೈಲಿ ಎಂಬಲ್ಲಿ ನಡೆದಿದೆ. ಕಾರು ಗೋಡೆಗೆ ಅಪ್ಪಳಿಸಿದ ಪರಿಣಾಮ ಅಲ್ಲಿನ ನಿವಾಸಿ ಮಲ್ಲಂಡ ಯತೀಶ್ ಎಂಬವರ ಮನೆಯ ಗೋಡೆಗೆ ಹಾನಿಯಾಗಿದೆ. ಬೆಂಗಳೂರು ಮೂಲದ ಡಿ.ಬಾಲಜಿ ಎಂಬವರ ಕಾರು ಜಖಂಗೊಂಡಿದೆ.

ಬೆಂಗಳೂರಿನಿಂದ ಹುಣಸೂರು, ಗೋಣಿಕೊಪ್ಪ, ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ, ಕುಟ್ಟ ಮಾರ್ಗವಾಗಿ ಕೇರಳದ ವಯನಾಡು ಕಡೆಗೆ ಪ್ರಯಾಣಿಸುತ್ತಿದ್ದ ಕಾರು ಹುದಿಕೇರಿ 7ನೇ ಮೈಲಿನ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಬಳಿಕ ರಸ್ತೆ ಪಕ್ಕದಲ್ಲಿದ್ದ ಮನೆಯ ಗೋಡೆಗೆ ಅಪ್ಪಳಿಸಿ ಮಗುಚಿ ಬಿದ್ದಿದೆ. ಕಾರಿನಲ್ಲಿದ್ದ ಹಿರನ್ ಮಹಿ ಎನ್ನುವ ಓರ್ವ ಮಹಿಳೆ ಸೇರಿದಂತೆ ರಾಹುಲ್ ಶ್ರೀನಿಧಿ, ಹಾಗೂ ಸಮೀರ್ ಕುಲಕರ್ಣಿ, ಎಂಬವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೊಳಗಾದ ಕಾರನ್ನು ಕ್ರೇನ್ ಹಾಗೂ ಗ್ರಾಮಸ್ಥರ ಸಹಾಯದಿಂದ ಮೇಲೆತ್ತಲಾಯಿತು. ಈ ಭಾಗದಲ್ಲಿ ಪ್ರವಾಸಿ ತಾಣಗಳಾದ ಟಿ-ಎಸ್ಟೇಟ್, ಮೃತ್ಯುಂಜಯ ದೇವಾಲಯ, ಇರ್ಪು ಫಾಲ್ಸ್ ಹಾಗೂ ಕೇರಳಕ್ಕೆ ತೆರಳುವ ಮುಖ್ಯ ರಸ್ತೆ ಇರುವುದರಿಂದ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದೆ. ಇದೇ ಸ್ಥಳದಲ್ಲಿ ಹಲವು ಅಪಘಾತ ಘಟನೆಗಳು ಮರುಕಳಿಸುತ್ತಿವೆ. ಶ್ರೀಮಂಗಲ ಪೊಲೀಸ್ ಠಾಣಾಧಿಕಾರಿ ರವೀಂದ್ರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಅಪಘಾತದ ಕುರಿತು ಮಾತನಾಡಿದ ಹುದಿಕೇರಿ ಗ್ರಾ.ಪಂ. ಸದಸ್ಯ ಕಿರಿಯಮಾಡ ಮಿಲನ್ ಗಣಪತಿ, ಪೊನ್ನಂಪೇಟೆಯಿಂದ ಕುಟ್ಟಕ್ಕೆ ತೆರಳುವ ರಾಜ್ಯ ಹೆದ್ದಾರಿಯ ಹುದಿಕೇರಿ 7ನೇ ಮೈಲ್ ಹತ್ತಿರ ರಸ್ತೆ ತಿರುವುಗಳಿಂದ ಕೂಡಿದೆ. ಕಳೆದ 5 ವರ್ಷಗಳಿಂದ ಹಲವಾರು ಅಪಘಾತ ಸಂಭವಿಸಿದ್ದು ಹಲವಾರು ವಾಹನಗಳು ಮಲ್ಲಂಡ ಯತೀಶ್ ಅವರ ಮನೆಗೆ ಅಪ್ಪಳಿಸಿವೆ. ಅಪಘಾತದಲ್ಲಿ ಅವರ ತಾಯಿ ಕೂದಲೆಳೆಯ ಅಂತರದಿಂದ ಪಾರಾಗಿದ್ದು, ಮನೆಯ ಗೋಡೆಗೆ ಹಾನಿ ಉಂಟಾಗಿದೆ. ಸಮಸ್ಯೆ ಪರಿಹಾರಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಕಳೆದ 2 ವರ್ಷಗಳಿಂದ ಪಂಚಾಯಿತಿಗೆ ಪತ್ರ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಇದೇ ರೀತಿ ನಿರ್ಲಕ್ಷ್ಯ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಜೀವ ಹಾನಿಯಾಗುವುದು ಖಂಡಿತ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಅವರು ಈ ಬಗ್ಗೆ ಕ್ರಮ ಕೈಗೊಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭ ಗ್ರಾಮದ ಅಧ್ಯಕ್ಷ ತಿತೀರ ಅಪ್ಪಣ್ಣ, ಮನೆ ಮಾಲೀಕ ಮಲ್ಲಂಡ ಸತೀಶ್, ಗ್ರಾಮಸ್ಥರಾದ ಕಡೇಮಾಡ ಸುರೇಶ್ ಹಾಗೂ ಪ್ರಕೃತಿ ಪೂವಮ್ಮ ಹಾಜರಿದ್ದರು.

 ವರದಿ; ಚೆಪ್ಪುಡಿರ ರೋಷನ್, ಪೊನ್ನಂಪೇಟೆ