ಪೊನ್ನಂಪೇಟೆ: ಅಪಘಾತದಲ್ಲಿ ವ್ಯಕ್ತಿ ಸಾವು: ಆರು ವರ್ಷಗಳ ಬಳಿಕ ಶಿಕ್ಷೆ ಪ್ರಕಟ

ಪೊನ್ನಂಪೇಟೆ: ಅಪಘಾತದಲ್ಲಿ ವ್ಯಕ್ತಿ ಸಾವು: ಆರು ವರ್ಷಗಳ ಬಳಿಕ ಶಿಕ್ಷೆ ಪ್ರಕಟ

ಮಡಿಕೇರಿ: ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ದಂಡ ಸಹಿತ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ತಾ. 5.12.2019 ರಂದು ಗೋಣಿಕೊಪ್ಪದಿಂದ ಪೊನ್ನಂಪೇಟೆಗೆ ಎಂ.ಎ. ವಿಜು ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಮಾರುತಿ 800 ಕಾರು ಮಾಚಿಮಾಡ ಎನ್. ಗಣಪತಿ ಅವರಿಗೆ ಡಿಕ್ಕಿಯಾಗಿದೆ. ಪರಿಣಾಮ ಗಂಭೀರ ಗಾಯಗೊಂಡ ಗಣಪತಿ ಅವರು ಮೃತಪಟ್ಟಿದ್ದರು.

ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ಎನ್.ಎನ್. ರಾಮರೆಡ್ಡಿ ಅವರು ಆರೋಪಿ ವಿಜು ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿ ಪೊನ್ನಂಪೇಟೆ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಾಥ್ ಅವರು ಆರೋಪಿ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆ 6 ತಿಂಗಳ ಕಾಲ ಸಾಧಾರಣ ಕಾರಾಗೃಹ ವಾಸ, ರೂ. 1 ಸಾವಿರ ದಂಡ, ಕಟ್ಟಲು ತಪ್ಪಿದ್ದಲ್ಲಿ 15 ದಿನ ಸಾಧಾರಣ ಜೈಲು ವಾಸ ವಿಧಿಸಿ ತೀರ್ಪು ನೀಡಿದ್ದಾರೆ.