ಆಸ್ತಿ ಹಂಚಿಕೆ ವಿವಾದ | ತಂಗಿಯ ಮಗನ ಮೇಲೆ ಮಾರಣಾಂತಿಕ ಹಲ್ಲೆ; ನಿವೃತ್ತ ಎಸ್ಐ ಬಂಧನ
ನೆಲಮಂಗಲ: ಆಸ್ತಿ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದ ಕಲಹ ಸಂಬಂಧಿಗಳ ನಡುವೆ ತೀವ್ರಗೊಂಡು, ತಂಗಿಯ ಮಗನ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನೆಲಮಂಗಲ ಬಳಿಯ ಚಿಕ್ಕಬಿದರಕಲ್ಲು ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಈ ಘಟನೆಯಲ್ಲಿ ನಿವೃತ್ತ ಸಬ್ ಇನ್ಸ್ಪೆಕ್ಟರ್ ಜಯಣ್ಣ ಹಾಗೂ ಅವರ ಮಗ ವಿಶ್ವಾಸ್ ಅವರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಕಳೆದ ಕೆಲವು ದಿನಗಳಿಂದ ವಿವೇಕ್ (35) ಹಾಗೂ ಆರೋಪಿಗಳ ಕುಟುಂಬದವರ ನಡುವೆ ಆಸ್ತಿ ಹಂಚಿಕೆ ವಿಚಾರವಾಗಿ ಕಲಹ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಇಂದು ಬೆಳಗ್ಗೆ ವಿವೇಕ್ ಮನೆ ಮುಂದೆ ವಾಗ್ವಾದ ಉಂಟಾಗಿ, ಕೋಪಗೊಂಡ ಜಯಣ್ಣ ಹಾಗೂ ವಿಶ್ವಾಸ್ ಕಬ್ಬಿಣದ ರಾಡ್ ಹಾಗೂ ದೊಣ್ಣೆಗಳಿಂದ ವಿವೇಕ್ ಮೇಲೆ ಹಲ್ಲೆ ನಡೆಸಿದ್ದಾರೆ.
ತಲೆಗೆ ತೀವ್ರ ಗಾಯಗೊಂಡ ವಿವೇಕ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದ ಮಾದನಾಯಕನಹಳ್ಳಿ ಪೊಲೀಸರು ಕೊಲೆ ಯತ್ನದ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಎನ್. ವೆಂಕಟೇಶ್ ಪ್ರಸನ್ನ ಅವರು, “ಆಸ್ತಿ ಹಂಚಿಕೆ ವಿಚಾರದಲ್ಲಿ ಹಳೆಯ ಕಲಹವಿತ್ತು. ಇಂದು ಬೆಳಗ್ಗೆ ವಾಗ್ವಾದದ ವೇಳೆ ಹಲ್ಲೆ ನಡೆದಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಯುತ್ತಿದೆ,” ಎಂದು ತಿಳಿಸಿದ್ದಾರೆ.
