ದೆಹಲಿಯಲ್ಲಿ ಬಾಂಬ್ ಸ್ಫೋಟ ಖಂಡಿಸಿ ಸೋಮವಾರಪೇಟೆಯಲ್ಲಿ ಪ್ರತಿಭಟನೆ
ಸೋಮವಾರಪೇಟೆ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಾಂಬ್ ಸ್ಪೋಟಿಸಿ ಅಮಾಯಕರ ಸಾವಿಗೆ ಕಾರಣರಾದ ಭಯೋತ್ಪಾದಕರ ನಡೆಯನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಭಯೋತ್ಪಾದನಾ ಕೃತ್ಯ, ಇದನ್ನು ಖಂಡಿಸದ ರಾಜಕಾರಣಿಗಳು, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಮತೀಯವಾದಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ದೇಶದೊಳಗಿನ ಇಂತಹ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಜರುಗಿಸುವುದರೊಂದಿಗೆ ಭವಿಷ್ಯದಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ್ ಬೋಜೇಗೌಡ ಅವರು, ಭಯೋತ್ಪಾದನೆಗೆ ಧರ್ಮವಿಲ್ಲ ಎಂದು ಹೇಳುವ ನಾಲಾಯಕ್‌ಗಳು, ದೇಶದಲ್ಲಿ ನಡೆಯುವ ಎಲ್ಲಾ ಭಯೋತ್ಪಾದಕ ಕೃತ್ಯಗಳ ಹಿಂದೆ ಯಾರಿದ್ದಾರೆ ಎಂಬುದನ್ನೂ ಮೊದಲು ಮನಗಾಣಲಿ ಎಂದರು.
ಭಯೋತ್ಪಾದಕ ಕೃತ್ಯಗಳು ನಡೆದಾಗ ಅದನ್ನು ಸಂಭ್ರಮಿಸುವ ಪಾಕಿಸ್ತಾನಿ ಪ್ರೇರಿತ ಮೂಲಭೂತವಾದಿ ಭಯೋತ್ಪಾದಕರು ದೇಶದೊಳಗೂ ಇದ್ದಾರೆ. ಅಂತಹವರು ಕೊಡಗಿನಲ್ಲೂ ಬೇಕಾದಷ್ಟಿದ್ದಾರೆ. ಇವರುಗಳನ್ನು ಮಟ್ಟ ಹಾಕುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕಿದೆ. ಇಲಾಖೆಯೊಂದಿಗೆ ಪ್ರಜ್ಞಾವಂತ ಸಮಾಜ ಕೈಜೋಡಿಸಬೇಕಿದೆ ಎಂದು ಅಭಿಪ್ರಾಯಿಸಿದರು.
ಭಯೋತ್ಪಾದಕರು ಬಾಂಬ್ ಸ್ಫೋಟಿಸುವುದು, ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾರ್ವಜನಿಕ ಸ್ಥಳದಲ್ಲಿ ವಿಷ ಬೆರೆಸಿ ಸಾಮೂಹಿಕ ಹತ್ಯೆಗೆ ಸಂಚು ರೂಪಿಸುವುದು, ವೈದ್ಯ ವೃತ್ತಿಯಲ್ಲಿರುವ ಕೆಲವೊಂದು ಮೂಲಭೂತವಾದಿ ಭಯೋತ್ಪಾದಕ ಮನಸ್ಥಿತಿ ಹೊಂದಿರುವ ವೈದ್ಯರುಗಳು ವಿಷಕಾರಿ ಔಷಧಿಗಳನ್ನು ನೀಡುವ ಮೂಲಕ ಹಿಂದೂಗಳನ್ನು ಹತ್ಯೆ ಮಾಡಲು ಸಂಚು ನಡೆಸುವುದು ಬಯಲಾಗುತ್ತಲೇ ಇದೆ. ಹಿಂದೂ ಸಮಾಜ ಇದರ ಬಗ್ಗೆ ಗಂಭೀರವಾಗಿ ಎಚ್ಚರಿಕೆ ವಹಿಸಬೇಕಿದೆ ಎಂದು ಬೋಜೇಗೌಡ ತಿಳಿಸಿದರು.
ಪಾಕಿಸ್ತಾನದ ಇಸ್ಲಾಮಿಕ್ ಭಯೋತ್ಪಾದಕತೆಯ ಮಾನಸಿಕತೆಯನ್ನು ಭಾರತದಲ್ಲೂ ಅಳವಡಿಸಿಕೊಂಡಿರುವ ದುಷ್ಕರ್ಮಿಗಳನ್ನು ಪತ್ತೆಹಚ್ಚುವ ಕಾರ್ಯ ಆಗಬೇಕಿದೆ. ಗಡಿಯಲ್ಲಿ ಭಯೋತ್ಪಾದಕರನ್ನು ತಡೆಗಟ್ಟಲು ಸೈನ್ಯವಿದೆ. ಆದರೆ ದೇಶದ ಒಳಗೆ ಇರುವ ಆಂತರಿಕ ಭಯೋತ್ಪಾದಕರ ಬಗ್ಗೆ ಪ್ರಜ್ಞಾವಂತ ನಾಗರಿಕರೇ ಜಾಗೃತಗೊಳ್ಳಬೇಕು. ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಸೋಮವಾರಪೇಟೆಯಲ್ಲೂ ಇರಬಹುದು.
ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಬೇಕು ಎಂದರು. ದೆಹಲಿ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ ಅಮಾಯಕರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಘಟಕದ ಸುಭಾಷ್ ತಿಮ್ಮಯ್ಯ, ತಾಲೂಕು ಸಂಯೋಜಕ್ ಎಂ.ಬಿ. ಉಮೇಶ್, ಪ್ರಚಾರ ಪ್ರಮುಖ್ ಹೇಮಂತ್ ಪೂಜಾರಿ, ವಿನು ಮಾದಾಪುರ, ದೀಪಕ್, ರತನ್ ಮಳ್ತೆ, ನಿಲಯ್ ಗೌಡ, ದಿಲೀಪ್, ಪ್ರಮುಖರಾದ ಬಿ.ಜೆ.ದೀಪಕ್, ಗೌತಮ್ ಗೌಡ, ಮಹೇಶ್ ತಿಮ್ಮಯ್ಯ, ಸೇರಿದಂತೆ ಇತರರು ಇದ್ದರು.
