ಅಮೃತಸರದ ಬಾಲಕನಿಗೆ ಹೊಸ ಸೈಕಲ್ ಕೊಡುಗೆ ನೀಡಿದ ರಾಹುಲ್ ಗಾಂಧಿ! | ಪ್ರವಾಹದಲ್ಲಿ ಸೈಕಲ್ ಕಳೆದುಕೊಂಡಿದ್ದ ಬಾಲಕ

ಅಮೃತಸರದ ಬಾಲಕನಿಗೆ ಹೊಸ ಸೈಕಲ್ ಕೊಡುಗೆ ನೀಡಿದ ರಾಹುಲ್ ಗಾಂಧಿ! | ಪ್ರವಾಹದಲ್ಲಿ ಸೈಕಲ್ ಕಳೆದುಕೊಂಡಿದ್ದ ಬಾಲಕ
Photo credit: DH

ಚಂಡೀಗಢ: ಪಂಜಾಬ್ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಮಾತು ನೆರವೇರಿದ್ದು, ಅಮೃತಸರದ ಆರು ವರ್ಷದ ಬಾಲಕ ಅಮೃತಪಾಲ ಸಿಂಗ್ ಗೆ ಹೊಸ ಸೈಕಲ್ ಲಭಿಸಿದೆ.

 ಸೆಪ್ಟೆಂಬರ್ 15 ರಂದು ಅಮೃತಸರದ ಘೋನೆವಾಲ್ ಗ್ರಾಮಕ್ಕೆ ಭೇಟಿ ನೀಡಿದಾಗ, ಪ್ರವಾಹದಲ್ಲಿ ಹಾನಿಗೊಳಗಾದ ಸೈಕಲ್‌ ಗಾಗಿ ಕಣ್ಣೀರು ಹಾಕುತ್ತಿದ್ದ ಅಮೃತಪಾಲ್ ನನ್ನು ರಾಹುಲ್ ಗಾಂಧಿಯವರು ಅಪ್ಪಿಕೊಂಡು ಸಮಾಧಾನಪಡಿಸಿದ್ದರು. ಆ ವೇಳೆ ಹೊಸ ಸೈಕಲ್ ನೀಡುವುದಾಗಿ ಅವರು ಭರವಸೆ ನೀಡಿದ್ದರು. ಇದೀಗ ಆ ಭರವಸೆ ನೆರವೇರಿಸಿದ್ದಾರೆ.

ಪಂಜಾಬ್ ಕಾಂಗ್ರೆಸ್ ಬುಧವಾರ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಅಮೃತಪಾಲ್, ರಾಹುಲ್ ಗಾಂಧಿಯವರೊಂದಿಗೆ ವೀಡಿಯೊ ಕರೆಯಲ್ಲಿ ಮಾತನಾಡುತ್ತಾ ಹೊಸ ಸೈಕಲ್‌ ಗಾಗಿ ಧನ್ಯವಾದ ಸಲ್ಲಿಸುತ್ತಿರುವುದು ಸೆರೆಯಾಗಿದೆ. “ಸೈಕಲ್ ಚೆನ್ನಾಗಿದೆಯೇ?” ಎಂದು ರಾಹುಲ್ ಗಾಂಧಿಯವರು ಬಾಲಕನನ್ನು ವೀಡಿಯೊ ಕರೆಯಲ್ಲಿ ಪ್ರಶ್ನಿಸಿದ ದೃಶ್ಯವೂ ಅಲ್ಲಿ ದಾಖಲಾಗಿದೆ.

ಅಮೃತಪಾಲ್ ನ ತಂದೆ ರವಿದಾಸ್ ಸಿಂಗ್, ತಮ್ಮ ಮಗನಿಗೆ ಹೊಸ ಸೈಕಲ್ ನೀಡಿದಕ್ಕಾಗಿ ರಾಹುಲ್ ಗಾಂಧಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈರಾಹುಲ್ ಗಾಂಧಿಯವರು ತಮ್ಮ ಪಂಜಾಬ್ ಪ್ರವಾಸದ ವೇಳೆ ಅಮೃತಸರದ ಘೋನೆವಾಲ್ ಹಾಗೂ ಗುರುದಾಸ್ಪುರದ ಗುರ್ಚಕ್ ಸೇರಿದಂತೆ ಪ್ರವಾಹದಿಂದ ಹಾನಿಗೊಳಗಾದ ಗ್ರಾಮಗಳಿಗೆ ಭೇಟಿ ನೀಡಿ, ಸಂತ್ರಸ್ತರ ಸ್ಥಿತಿಗತಿ ಪರಿಶೀಲಿಸಿದ್ದರು. ಸಂತ್ರಸ್ತರಿಗೆ ಪರಿಹಾರ ಪ್ಯಾಕೇಜ್ ತ್ವರಿತವಾಗಿ ತಲುಪುವಂತೆ ಪಂಜಾಬ್ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಅವರು ಮನವಿ ಮಾಡಿದ್ದರು.

 ಈ ವರ್ಷ ಪಂಜಾಬ್ ದಶಕಗಳಲ್ಲಿಯೇ ಅತಿದೊಡ್ಡ ಪ್ರವಾಹವನ್ನು ಎದುರಿಸಿತು. ಹಿಮಾಚಲ ಪ್ರದೇಶ ಹಾಗೂ ಜಮ್ಮು-ಕಾಶ್ಮೀರದ ಜಲಾನಯನ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಟ್ಲೆಜ್, ಬಿಯಾಸ್, ರಾವಿ ನದಿಗಳು ಉಕ್ಕಿ ಹರಿದವು. ಪಂಜಾಬ್‌ನಲ್ಲಿ ಸುರಿದ ಭಾರೀ ಮಳೆ ಕೂಡ ಪ್ರವಾಹದ ತೀವ್ರತೆಯನ್ನು ಹೆಚ್ಚಿಸಿತು.

ಅಮೃತಸರ, ಗುರುದಾಸ್ಪುರ್, ಕಪುರ್ತಲಾ, ಪಠಾಣ್‌ಕೋಟ್, ಹೋಶಿಯಾರ್‌ಪುರ್, ಫಿರೋಜ್‌ಪುರ್, ಫಜಿಲ್ಕಾ ಮತ್ತು ತರಣ್ ತರಣ್ ಜಿಲ್ಲೆಗಳು ಪ್ರವಾಹದಿಂದ ಭಾರಿ ಹಾನಿಗೊಳಗಾದವು.