ವಚನ ಸಾಹಿತ್ಯ ಅಂತರಂಗ ಬಹಿರಂಗ ಶುದ್ದಿಗೆ ದಿವ್ಯ ಔಷಧಿ: ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ ಸಂಸ್ಮರಣೆಯಲ್ಲಿ ಹೆಚ್.ವಿ.ಶಿವಪ್ಪ ಶ್ಲಾಘನೆ

ಕುಶಾಲನಗರ : ಜನಮಾನಸದಲ್ಲಿ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಶರಣ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸುವ ಮೂಲಕ ಜನರಲ್ಲಿ ಅಂತರಂಗ ಹಾಗೂ ಬಹಿರಂಗ ಶುದ್ದಿಗೆ ಔಷಧಿ ನೀಡಿದ ಕೀರ್ತಿ ಸುತ್ತೂರು ಸಂಸ್ಥಾನದ 23 ನೇ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮಿಗಳದ್ದು ಎಂದು ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ ಹೇಳಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಚಿಕ್ಕಹೊಸೂರಿನ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಗ್ರಾಮದ ಗಣಪತಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಸುತ್ತೂರು ಮಠದ 23 ನೇ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಸಂಸ್ಮರಣೆ ಅಂಗವಾಗಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ವಚನ ಸಾಹಿತ್ಯದ ವಾಸ್ತವಿಕ ಮತ್ತು ವೈಚಾರಿಕ ಚಿಂತನೆಗಳನ್ನು ಸಮಾಜಕ್ಕೆ ನಿರಂತರವಾಗಿ ತಲುಪಿಸುವ ಉದ್ದೇಶದಿಂದ 1986 ರಲ್ಲಿ ಶರಣ ಸಾಹಿತ್ಯ ಪರಿಷತ್ತು ಆರಂಭಿಸಿ ನಾಡಿನಾದ್ಯಂತ ಶರಣರ ವಚನಗಳು ಹಾಗೂ ಚಿಂತನೆಗಳ ಹರಿವಿಗೆ ಮುನ್ನುಡಿ ಬರೆದರು. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ನಾಡಿನಲ್ಲಿದ್ದ ಬಡತನ, ದಾರಿದ್ರ್ಯ, ಹಸಿವು, ನಿರುದ್ಯೋಗ ಹೋಗಲಾಡಿಸಲು ಹಳ್ಳಿ ಹಳ್ಳಿಗಳಿಗೆ ಉಳ್ಳವರ ಬಳಿ ತೆರಳಿ ಭಿಕ್ಷಾಟನೆ ಮಾಡಿ ನೊಂದವರಿಗೆ ಅನ್ನ, ಅರಿವು, ಆಶ್ರಯ ಕಲ್ಪಿಸಿದರು. ಜೆಎಸ್ ಎಸ್ ವಿದ್ಯಾಪೀಠದ ಮೂಲಕ ರಾಜ್ಯವಷ್ಟೇ ಅಲ್ಲದೇ, ದೇಶದ ಮೂಲೆ ಮೂಲೆಗಳು ಹಾಗೂ ವಿದೇಶಗಳಲ್ಲಿ 350 ಕ್ಕೂ ಹೆಚ್ಚಿನ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆಗಳನ್ನು ತೆರೆದ್ದರ ಫಲ ಲಕ್ಷಾಂತರ ಮಂದಿ ಇಂದು ಬದುಕು ಕಟ್ಟಿಕೊಳ್ಳಲು ನೆರವಾಯಿತು ಎಂದು ಡಾ. ರಾಜೇಂದ್ರ ಸ್ವಾಮೀಜಿಯವರ ಸೇವೆ ಹಾಗೂ ಸಾಧನೆಗಳನ್ನು ಶಿವಪ್ಪ ಸ್ಮರಿಸಿದರು.
ತೊರೆನೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಇಂದು ಎಳೆಯ ಮಕ್ಕಳಲ್ಲಿ ವಚನಗಳ ಅರಿವಿನ ಉತ್ತಮ ಸಂಸ್ಕಾರಗಳನ್ನು ತುಂಬುವ ಮೂಲಕ ತಾಯಂದಿರು ಸಮಾಜದ ಮಹತ್ತರ ಬದಲಾವಣೆಗೆ ಚಿಂತನೆ ನಡೆಸಬೇಕಿದೆ. ಅನ್ನದ ಬಟ್ಟಲು ಆಗಿರುವ ಭೂಮಿಗೆ ಯಥೇಚ್ಛವಾಗಿ ಸುರಿಯುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ಗಳ ನಿಯಂತ್ರಿಸಲು ಬಟ್ಟೆಗಳ ಕೈ ಚೀಲಗಳನ್ನು ಹೊಂದಬೇಕಿದೆ. ಹಳ್ಳಿಗಳಲ್ಲಿ ಮಹಿಳೆಯರು ಸತ್ಸಂಗಗಳ ಮೂಲಕ ಸಾಹಿತ್ಯ, ಸಂಸ್ಕ್ರತಿಯ ಅರಿವು ಹೊಂದಬೇಕಿದೆ ಎಂದರು. ಕೊಪ್ಪಾದ ಭಾರತಮಾತಾ ಪಿಯು ಕಾಲೇಜು ಉಪನ್ಯಾಸಕಿ ಮಮತಾ ಪ್ರವೀಣ್ ಮಾತನಾಡಿ, ತಾನು ಹೇಳಿದ್ದೇ ನಂಬಬೇಕೆನ್ನುವ ಧರ್ಮ, ಅಧಿಕಾರಕ್ಕೆ ತಲೆ ಬಾಗಬೇಕೆಂಬ ರಾಜಶಾಹಿ, ತಾನು ಕಲಿಸಿದ್ದನ್ನೇ ಕಲಿಯಬೇಕೆಂಬ ಶಿಕ್ಷಣ ಇತ್ಯಾದಿ ಸ್ಥಾಪಿತ ವ್ಯವಸ್ಥೆ ಗಳನ್ನು ಪ್ರಶ್ನಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ತಂದುಕೊಟ್ಟ ವಚನ ಸಾಹಿತ್ಯದ ಅರಿವು ಹಾಗೂ ಆಚರಣೆಗೆ ಮಹತ್ವ ಕೊಟ್ಟ ಡಾ.ರಾಜೇಂದ್ರ ಸ್ವಾಮೀಜಿಗಳ ಸಾಮಾಜಿಕ ಸೇವೆಗೆ ಬೆರಗಾದ ಮೈಸೂರು ರಾಜರು ರಾಜಗುರುತಿಲಕ ಎಂಬ ಬಿರುದು ನೀಡಿ ಗೌರವಿಸಿದ ಬಗೆಯನ್ನು ವಿವರಿಸಿದರು.
ಗ್ರಾಮದ ಪಟೇಲರೂ ಹಾಗೂ ವಕೀಲರೂ ಅದ ಸಿ.ಎಸ್.ಮಂಜುನಾಥ ಸ್ವಾಮಿ ಮಾತನಾಡಿ, ಚಿಕ್ಕಹೊಸೂರು ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ದೇವಾಲಯ ನಿರ್ಮಾಣದ ಭೂಮಿ ಪೂಜೆಗೆ ಡಾ.ರಾಜೇಂದ್ರ ಸ್ವಾಮೀಜಿ ಆಗಮಿಸಿದ್ದನ್ನು ಸ್ಮರಿಸಿದರು. ಕುಶಾಲನಗರ ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಹೇಮಲತಾ ವಿರೂಪಾಕ್ಷ ಮಾತನಾಡಿ, ನಾಡಿನಲ್ಲಿ ಶಿಕ್ಷಣ ಕ್ರಾಂತಿಗೈದ ಡಾ.ರಾಜೇಂದ್ರ ಸ್ವಾಮೀಜಿ ಲಕ್ಷಾಂತರ ಮಂದಿಯ ಮನೆ ಬೆಳಕಾಗಿರುವ ಬಗ್ಗೆ ವಿವರಿಸಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ.ಪರಮೇಶ್, ಕುಶಾಲನಗರ ಅಕ್ಕನ ಬಳಗದ ಗೌರವ ಅಧ್ಯಕ್ಷೆ ವಿಜಯಪಾಲಾಕ್ಷ, ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಸಿ.ಎಸ್.ರೇಣುಕಾಸ್ವಾಮಿ, ನಿವೃತ್ತ ಕಂದಾಯ ಅಧಿಕಾರಿ ಸೋಮಶೇಖರ್, ಗ್ರಾಮದ ಯಜಮಾನ ಪ್ರಭುಸ್ವಾಮಿ, ಕದಳಿ ವೇದಿಕೆ ಮಾಜಿ ಅಧ್ಯಕ್ಷೆ ಲೇಖನಾ ಧರ್ಮೇಂದ್ರ ಇದ್ದರು. ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಬಿ.ನಟರಾಜು ಕುಟುಂಬಸ್ಥರಿಂದ ಗ್ರಾಮದ ಭಕ್ತಾಧಿಗಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.