ಐಗೂರು ಪ್ರೌಢಶಾಲಾ ಮಕ್ಕಳಿಂದ ಸೃಜನಶೀಲತೆಗೆ ವೇದಿಕೆಯಾದ ವಿಜ್ಞಾನ ವಸ್ತು ಪ್ರದರ್ಶನ

ಐಗೂರು ಪ್ರೌಢಶಾಲಾ  ಮಕ್ಕಳಿಂದ ಸೃಜನಶೀಲತೆಗೆ  ವೇದಿಕೆಯಾದ ವಿಜ್ಞಾನ ವಸ್ತು ಪ್ರದರ್ಶನ

ಸೋಮವಾರಪೇಟೆ, ಡಿ.12: ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಗುರುವಾರ ತಾಲ್ಲೂಕಿನ ಐಗೂರು ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಸಂಘದ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ಆವಿಷ್ಕಾರ ಕಾರ್ಯಕ್ರಮ: 2925-26 ದಡಿ ಏರ್ಪಡಿಸಿದ್ದ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳ ಸೃಜನಶೀಲ‌ ಚಟುವಟಿಕೆಗಳು ಹಾಗೂ ಕ್ರಿಯಾಶೀಲತೆಗೆ ಸಾಕ್ಷಿಯಾಯಿತು. ವಿದ್ಯಾರ್ಥಿಗಳು ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಚಟುವಟಿಕೆಗಳ ಅನಾವರಣಗೊಳಿಸುವ ಪ್ರಯತ್ನ ನಡೆಸಿದ್ದು ಪೋಷಕರು ಹಾಗೂ ಜನಮೆಚ್ಚುಗೆಗೆ ಪಾತ್ರವಾಗಿತ್ತು.

ಪ್ರೌಢಶಾಲೆಯ ಮುಖ್ಯಸ್ಥರಾದ ಎಂ.ಎಂ. ಯಶವಂತ್ ಕುಮಾರ್ ನೇತೃತ್ದದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿಜ್ಞಾನ ಶಿಕ್ಷಕಿ ಎಸ್.ಎಸ್.ರಂಜನಿ ಹಾಗೂ ಗಣಿತ ಶಿಕ್ಷಕ ಜಿ.ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಭೌತಶಾಸ್ರ್ತ, ರಸಾಯನ ಶಾಸ್ತ್ರ, ಜೀವ ವಿಜ್ಞಾನ, ಜೈವಿಕ ತಂತ್ರಜ್ಞಾನ, ಪರಿಸರ ವಿಜ್ಞಾನ, ಬಾಹ್ಯಾಕಾಶ ಕ್ಷೇತ್ರ ಸೇರಿದಂತೆ ಗಣಿತದ ಮೂಲಕ್ರಿಯೆಗಳು, ರೇಖಾಗಣಿತಕ್ಕೆ ಸಂಬಂಧಿಸಿದ ವಿವಿಧ ರಚನೆಯ ಮಾದರಿಗಳ ವಸ್ತುಪ್ರದರ್ಶನ ಗಮನ ಸೆಳೆಯಿತು. ಐಗೂರು ಪ್ರೌಢ ಶಾಲೆಯ ಎಲ್ಲಾ ಮಕ್ಕಳು ವಿವಿಧ ಮಾದರಿಗಳನ್ನಿಟ್ಟು ಗ್ರಾಮಸ್ಥರ ಗಮನ ಸೆಳೆದರು.

 ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ್ದ ಐಗೂರು ಸುತ್ತಲಿನ‌ ಕಾಜೂರು,ಬೇಳೂರು ಹಾಗೂ ಕಿರಗಂದೂರು ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು ತಮ್ಮ ಶಿಕ್ಷಕರೊಂದಿಗೆ ಭೇಟಿ ನೀಡಿ ವಿಜ್ಞಾನ ಮತ್ತು ಗಣಿತದ ವಿವಿಧ ಮಾದರಿಗಳನ್ನು ವೀಕ್ಷಿಸಿದರು.