ಅಕ್ರಮ ಗಾಂಜಾ ಮಾರಾಟ: ಇಂಜಿನಿಯರಿಂಗ್ ವಿದ್ಯಾರ್ಥಿ ಸಹಿತ ಏಳು ಮಂದಿಯ ಬಂಧನ

ಮಂಗಳೂರು: ಮಾದಕ ದ್ರವ್ಯ ಮುಕ್ತ ಮಂಗಳೂರು ಅಭಿಯಾನದಡಿ ನಗರ ಪೊಲೀಸ್ ಕಮಿಷನರೇಟ್, ವ್ಯಾಪ್ತಿಯ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಸಹಿತ 7 ಮಂದಿಯನ್ನು ಬಂಧಿಸಿದ್ದಾರೆ. ನಗರದ ಕುದ್ರೋಳಿಯ ಕಂಡತ್‌ಪಳ್ಳಿ ಪರಿಸರದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಅಬ್ದುಲ್ ಸಮದ್ ಯಾನೆ ಚಮ್ಮು ಎಂಬಾತನನ್ನು ಆ.8ರಂದು ಬಂದರ್ ಪೊಲೀಸರು ಬಂಧಿಸಿ ಆತನಿಂದ 1.40 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ನಾಡು ಲಿಂಗಪಾಯ್ಯನ ಕಾಡು ಪರಿಸರದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೂಲಿ ಕಾರ್ಮಿಕರಿಗೆ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಮುಲ್ಕಿ ಪೊಲೀಸರು ದಾಳಿ ನಡೆಸಿ ಕಾರ್ನಾಡು ಗ್ರಾಮದ ಧರ್ಮಲಿಂಗ ಎಂಬಾತನನ್ನು ಬಂಧಿಸಿ ಆತನಿಂದ 1.90 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮರವೂರು ಬಳಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಬಿಹಾರ ಮೂಲದ ದೋಲತ್ ಕುಮಾರ್ ಶರ್ಮಾ, ಮುಹಮ್ಮದ್ ಖುಷಲಂ ಎಂಬವರನ್ನು ಬಂಧಿಸಿ ಅವರ ಬಳಿಯಿದ್ದ 1.189 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ಬಳಿ ಗಾಂಜಾವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಕಾರ್ತಿಕ್ ಮತ್ತು ಮೋತ್ ಎಂಬವರನ್ನು ಬಂಧಿಸಿ ಅವರಿಂದ 800 ಗ್ರಾಂ ಗಾಂಜಾವನ್ನು ವಶಪಡಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಕೇರಳ ಮೂಲದ ಪ್ರಣವ್ ಕೆ. ಎಂಬಾತ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬಂಧಿಸಿ ಆತನಿಂದ 1.100 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ನಗರದಲ್ಲಿ ಅಕ್ರಮ ಮಾದಕ ವಸ್ತು ಗಾಂಜಾವನ್ನು ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ ಮತ್ತು ಸಾರ್ವಜನಿಕರಿಗೆ ನಿರಂತರ ಮಾರಾಟ ಮಾಡುತ್ತಿರುವವರ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಎಲ್ಲಾ ಆರೋಪಿಗಳಿಂದ ಗಾಂಜಾವನ್ನು ಖರೀದಿಸಿದ ವ್ಯಕ್ತಿಗಳ ವಿವರಗಳು ಕೂಡಾ ಲಭ್ಯವಾಗಿದೆ. ಅವರೆಲ್ಲರನ್ನು ಪತ್ತೆ ಹಚ್ಚಲು ಠಾಣಾ ವ್ಯಾಪ್ತಿಗಳಲ್ಲಿ ಈಗಾಗಲೇ ತಂಡಗಳನ್ನು ರಚಿಸಿದ್ದು, ಪತ್ತೆಗೆ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.