ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ

ಮಡಿಕೇರಿ-ನಗರದ ಕೊಡಗು ನಿರ್ಮಿತಿ ಕೇಂದ್ರ ವತಿಯಿಂದ ಸಿಎಸ್‍ಆರ್ ಉಪ ಕಾರ್ಯಕ್ರಮಗಳ ಅಡಿಯಲ್ಲಿ ಎಫ್‍ಒಎಸ್‍ಆರ್‍ಒಸಿ ಕೆಮಿಕಲ್ಸ್ ಇಂಡಿಯಾ ಪ್ರೈ.ಲಿ.ನ ಪ್ರಾಯೋಜಕತ್ವದಲ್ಲಿ ಇನ್‍ಸ್ಟ್ರಕ್ಟ್ ಸಂಸ್ಥೆ ಸಹಕಾರದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ‘ಮೇಸನ್ ಮತ್ತು ಟೈಲ್ಸ್ ಲೇಯರ್’ ಕಾರ್ಮಿಕರಿಗೆ ಎರಡು ದಿನದ ತರಬೇತಿ ಕಾರ್ಯಕ್ರಮಕ್ಕೆ ಗುರುವಾರ ನಗರದ ಗಾಂಧಿ ಭವನದಲ್ಲಿ ಚಾಲನೆ ದೊರೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸುಳ್ಯ ಕೆವಿಜಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರಾದ ಚಂದ್ರಶೇಖರ್ ಅವರು ಕೃಷಿ ಕ್ಷೇತ್ರದ ನಂತರ ಸಿವಿಲ್ ಮತ್ತು ಕಟ್ಟಡ ಕ್ಷೇತ್ರದಲ್ಲಿ ರಾಷ್ಟ್ರದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದೆ ಎಂದು ಹೇಳಿದರು. ಸಮಾಜದಲ್ಲಿನ ಎಲ್ಲಾ ಸ್ತರಗಳಲ್ಲಿ ಹೆಚ್ಚು ಜನರಿಗೆ ಕೆಲಸ ನೀಡುವಲ್ಲಿ ಸಿವಿಲ್ ಕ್ಷೇತ್ರದ ಕೊಡುಗೆ ಅಪಾರವಾಗಿದೆ ಎಂದು ಚಂದ್ರಶೇಖರ್ ಅವರು ನುಡಿದರು. ಭಾರತದಿಂದ ಕಟ್ಟಡ ಕಾರ್ಮಿಕರನ್ನು ಇಸ್ರೇಲ್, ಗಾಲ್ಫ್ ರಾಷ್ಟ್ರಗಳಿಗೆ ಕರೆಸಿಕೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಕಟ್ಟಡ ವೃತ್ತಿ ಕೌಶಲ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಕಟ್ಟಡಕ್ಕೆ ಎಂಸ್ಯಾಂಡ್ ಬಳಸಲಾಗುತ್ತದೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕೆಂಪುಕಲ್ಲನ್ನು ಕಟ್ಟಡ ನಿರ್ಮಾಣಕ್ಕೆ ಬಳಸಲಾಗುತ್ತದೆ. ಈಗ ಕೆಂಪು ಕಲ್ಲು ಬಳಕೆ ನಿಷೇಧ ಹೇರಲಾಗಿದೆ. ಹಾಗಾಗಿ ಸಿಮೆಂಟ್ ಇಟ್ಟಿಗೆ ಬಳಕೆ ಮಾಡಲಾಗುತ್ತಿದೆ. ಹೀಗೆ ಹೊಸ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಂಡು ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಚಂದ್ರಶೇಖರ್ ಅವರು ಸಲಹೆ ಮಾಡಿದರು. ಉತ್ತಮ ಕಟ್ಟಡ ನಿರ್ಮಾಣ ಮಾಡಿದಲ್ಲಿ ಎಂಜಿನಿಯರ್‍ಗಳು ಮತ್ತು ಕಟ್ಟಡ ಕಾರ್ಮಿಕರಿಗೆ ಒಳ್ಳೆಯ ಹೆಸರು ಬರಲಿದೆ. ಆ ನಿಟ್ಟಿನಲ್ಲಿ ಸಮಾಜದಲ್ಲಿ ಉತ್ತಮ ಕೆಲಸಗಾರರಾಗಿ ಗುರುತಿಸಿಕೊಳ್ಳಬೇಕು ಎಂದರು.
ಬೆಂಗಳೂರಿನ ಇನ್‍ಸ್ಟ್ರಕ್ಟ್ ಸಂಸ್ಥೆಯ ಉಪಾಧ್ಯಕ್ಷರಾದ ಮಂಜುನಾಥ್ ಅವರು ಮಾತನಾಡಿ ಪ್ರತಿಯೊಬ್ಬ ಮನುಷ್ಯನಿಗೆ ಊಟ, ಬಟ್ಟೆ, ಸೂರು ಅತ್ಯಗತ್ಯ. ಸಿವಿಲ್ ವಿಭಾಗದಲ್ಲಿ ಕಟ್ಟಡ ಕಾರ್ಮಿಕರ ಪಾತ್ರ ಪ್ರಮುಖವಾಗಿದೆ ಎಂದರು. ಕಟ್ಟಡ ವೃತ್ತಿ ಕೌಶಲ್ಯ ಕಲಿತು ಒಳ್ಳೆಯ ಕಾರ್ಮಿಕರಾಗಿ ಕೆಲಸ ಮಾಡಬೇಕು. ಸಿವಿಲ್ ಕ್ಷೇತ್ರದಲ್ಲಿ ನೈಪುಣ್ಯತೆ ಕಲಿತು ಕಟ್ಟಡ ನಿರ್ಮಾಣ ಮಾಡಬೇಕು. ಕಟ್ಟಡ ಕಾರ್ಮಿಕರಲ್ಲಿ ಜವಾಬ್ದಾರಿ ಹೆಚ್ಚಿದ್ದು, ಕೆಲಸದಲ್ಲಿ ಉತ್ತಮ ಸಾಧನೆ ಮಾಡುವಂತಾಗಬೇಕು ಎಂದರು. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್, ಇನ್‍ಸ್ಟ್ರಕ್ಟ್ ಸಂಸ್ಥೆಯ ನವೀನ್ ಆರಾಧ್ಯ, ನಿರ್ಮಿತಿ ಕೇಂದ್ರದ ಕಾರ್ಯಪ್ಪ, ಎಂಜಿನಿಯರ್‍ಗಳಾದ ರಾಘವೇಂದ್ರ, ಸುಕೇಶ್, ವಿಜಯ ಮಹಾಂತೇಶ್, ಇತರರು ಇದ್ದರು.