ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಚ್ಚತಾ ಹೀ ಸೇವಾ ಪಾಕ್ಷಿಕ ಅಭಿಯಾನ ಶ್ರಮದಾನ

ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಚ್ಚತಾ ಹೀ ಸೇವಾ ಪಾಕ್ಷಿಕ ಅಭಿಯಾನ ಶ್ರಮದಾನ

ಕುಶಾಲನಗರ: ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಕೊಡಗು ಜಿಲ್ಲಾ ಪಂಚಾಯ್ತಿಯ ಸ್ವಚ್ಛತಾ ಅಭಿಯಾನ ಯೋಜನೆ, ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶಾಲೆಯ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ವತಿಯಿಂದ ಸ್ವಚ್ಚತಾ ಹೀ ಸೇವಾ ಪಾಕ್ಷಿಕ ಅಭಿಯಾನ:2025 ಕ್ಕೆ ಶ್ರಮದಾನದ ಮೂಲಕ ಚಾಲನೆ ನೀಡಲಾಯಿತು.

ಸ್ವಚ್ಛತಾ ಹೀ ಸೇವಾ ಅಭಿಯಾನ ಹಾಗೂ ಶ್ರಮದಾನದ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕರೂ ಆದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ‘ಸ್ವಚ್ಛ ಭಾರತ್ ಮಿಷನ್ ಮೂಲಕ ದೇಶದ ಜನರಲ್ಲಿ ಸ್ವಚ್ಛತೆ, ಆರೋಗ್ಯ, ನೈರ್ಮಲ್ಯ ಮತ್ತು ನೈರ್ಮಲ್ಯದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

 ನಾವು ಸ್ವಚ್ಛ , ಸುಂದರ ಮತ್ತು ಹಸಿರು ಪರಿಸರಕ್ಕೆ ಆದ್ಯತೆ ನೀಡುವ ಮೂಲಕ ನಮ್ಮ ಸುತ್ತಲಿನ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಸ್ವಚ್ಛತೆಗಾಗಿ ಸ್ವಯಂ ಪ್ರೇರಣೆ ಮತ್ತು ಸಾಮೂಹಿಕ ಶ್ರಮದಾನ ಚಟುವಟಿಕೆಗಳನ್ನು ಹಮ್ಮಿಕೊಂಡು ಸಮುದಾಯದಲ್ಲಿ ಸ್ವಚ್ಛತೆಯ ಆಶಯಗಳನ್ನು ಬಲಪಡಿಸಲು 2017 ರಿಂದ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಆಂದೋಲನವನ್ನು ಆಚರಿಸಲಾಗುತ್ತಿದೆ.

 ಸೆಪ್ಟೆಂಬರ್ 17 ರಿಂದ ಆರಂಭಗೊಂಡಿರುವ ಅಕ್ಟೋಬರ್ 2 ರ ಗಾಂಧಿ ಜಯಂತಿ ತನಕ ಹಮ್ಮಿಕೊಂಡಿರುವ *ಸ್ವಚ್ಚತಾ ಹೀ ಸೇವಾ* *ಅಭಿಯಾನ* ದ ಮೂಲಕ ವಿದ್ಯಾರ್ಥಿಗಳು ಕೂಡ್ಲೂರು ಗ್ರಾಮದ ಜನರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು. ನಾವು ನಮ್ಮ ದಿನನಿತ್ಯದ ಬಳಕೆಯಲ್ಲಿ ಮಾಲಿನ್ಯಕಾರಿ ಪ್ಲಾಸ್ಟಿಕ್ ತ್ಯಜಿಸಿ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳಾದ ಬಟ್ಟೆ, ಸೆಣಬು, ಕಾಗದ ಬ್ಯಾಗ್‌ಗಳು ಇತ್ಯಾದಿ ವಸ್ತುಗಳನ್ನು ಬಳಕೆ ಮಾಡಬೇಕು ಎಂದು ತಿಳಿಸಿದ ಪ್ರೇಮಕುಮಾರ್ ಅವರು, ವಿದ್ಯಾರ್ಥಿಗಳು ತಮ್ಮ ಮನೆ, ಶಾಲೆ, ಗ್ರಾಮ , ಜನ ವಸತಿ ಪ್ರದೇಶ ಸೇರಿದಂತೆ ತಮ್ಮ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಲು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ನಾವು ನಮ್ಮ ದಿನನಿತ್ಯದ ಬಳಕೆಯಲ್ಲಿ ಮಾಲಿನ್ಯಕಾರಿ ಪ್ಲಾಸ್ಟಿಕ್ ತ್ಯಜಿಸಿ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳಾದ ಬಟ್ಟೆ, ಸೆಣಬು, ಕಾಗದದ ಬ್ಯಾಗ್‌ಗಳು ಇತ್ಯಾದಿ ವಸ್ತುಗಳನ್ನು ಸ್ವಚ್ಛತೆಯ ಉದ್ದೇಶ ಕುರಿತು ಮಾಹಿತಿ ನೀಡಿದ ಶಾಲೆಯ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ, ಪ್ಲಾಸ್ಟಿಕನ್ನು ಹೆಚ್ಚು ಉಪಯೋಗಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಮೂಲಕ ಅನೇಕ ಕಾಯಿಲೆಗಳು ಉದ್ಭವಿಸುತ್ತದೆ. ಈ ದಿಸೆಯಲ್ಲಿ ನಾವು ಪ್ಲಾಸ್ಟಿಕ್ ಬಳಕೆಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಲು ಜನಜಾಗೃತಿ ಮೂಡಿಸಬೇಕಿದೆ ಎಂದರು.

 ಅಭಿಯಾನದಲ್ಲಿ ಶಿಕ್ಷಕರಾದ ದಯಾನಂದ ಪ್ರಕಾಶ್, ಕೆ.ಗೋಪಾಲಕೃಷ್ಣ, ಬಿ.ಎನ್. ಸುಜಾತ, ಬಿ.ಎಸ್. ಅನ್ಸಿಲಾ ರೇಖಾ, ಕೆ.ಟಿ.ಸೌಮ್ಯ, ಸಿಬ್ಬಂದಿ ಎಂ.ಉಷಾ ಇದ್ದರು. ವಿದ್ಯಾರ್ಥಿಗಳು ಸ್ವಚ್ಚತೆಯೇ ಸೇವೆ, ಸ್ವಚ್ಚತೆ ಇದ್ದಲ್ಲಿ ಆರೋಗ್ಯ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ನಮ್ಮ ಕಸ - ನಮ್ಮ ಹೊಣೆ ಎಂಬಿತ್ಯಾದಿ ಸ್ವಚ್ಚತೆಯ ಕುರಿತಾದ ಘೋಷಣಾ ಫಲಕಗಳನ್ನು ಹಿಡಿದು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆದರು. ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ಸೆಪ್ಟೆಂಬರ್ 25 ರಂದು 'ಒಂದು ದಿನ, ಒಂದು ಗಂಟೆ, ಎಲ್ಲರೂ ಒಟ್ಟಿಗೆ ಸೇರಿ 'ಶ್ರಮದಾನ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಚ್ಛತಾ ಕಾರ್ಯದಲ್ಲಿ ತೊಡಗಲು ನಾಗರಿಕರು ಕೈಜೋಡಿಸಲು ಮನವಿ ಮಾಡಲಾಗಿದೆ ಎಂದು ಟಿ.ಜಿ.ಪ್ರೇಮಕುಮಾರ್ ತಿಳಿಸಿದರು. ಅಭಿಯಾನದಲ್ಲಿ ಆರೋಗ್ಯ, ನೈರ್ಮಲ್ಯ ಹಾಗೂ ಪರಿಸರ ಕಾಪಾಡಿಕೊಳ್ಳಲು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಶಿಕ್ಷಕರು ಮಕ್ಕಳಿಗೆ ಮಾಹಿತಿ ನೀಡಿದರು.