ಮೆದುಳಿನ ಸಮಸ್ಯೆಯಿಂದ ಬಳಲುತ್ತಿದ್ದ 7 ವರ್ಷದ ಬಾಲಕನಿಗೆ ಮಿಡಿದ 'ಟೀಮ್ ಮಾಧ್ಯಮ ಸ್ಪಂದನ'; ಚಿಕಿತ್ಸೆಗೆ 7.50 ಲಕ್ಷ ರೂ. ನೆರವು
ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಕದನೂರು ನಿವಾಸಿ ಸಿ.ಎ. ಮನು ಮಹೇಶ್- ಸಿಂಧೂ ದಂಪತಿಯ 7 ವರ್ಷದ ಪುತ್ರ ಅಪರೂಪದ ಮೆದುಳಿನ ಸಮಸ್ಯೆಯಿಂದು ಬಳಲುತ್ತಿದ್ದನು. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಮಹೇಶ್ ಹಾಗೂ ಖಾಸಗಿ ಕ್ಲಿನಿಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಂಧೂ ಅವರಿಗೆ ತಮ್ಮ ಪುತ್ರನ ಚಿಕಿತ್ಸೆ ಬೇಕಾದ 7.50 ಲಕ್ಷ ರೂಪಾಯಿ ಪಾವತಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಗ್ಗೆ ಜೀವ ರಕ್ಷಕ ಚೋಕಂಡ ಸಂಜು ಸುಬ್ಬಯ್ಯ ಕೋರಿಕೆ ಅನ್ವಯ ಮಾಧ್ಯಮ ಸ್ಪಂದನ ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲು ದಾನಿಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಲಾಗಿತ್ತು.
ಮಾಧ್ಯಮ ಸ್ಪಂದನ ಮನವಿಗೆ ದಾನಿಗಳಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ದಾನಿಗಳ ಸಹಕಾರ ದಿಂದ ಇದೀಗ ಮಗುವಿನ ಶಸ್ತ್ರಚಿಕಿತ್ಸೆಗೆ ಬೇಕಾದ 7.50 ಲಕ್ಷ ರೂ ಸಂಗ್ರಹವಾಗಿದೆ. ಇದೇ ತಿಂಗಳು 19ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಶಸ್ತ್ರಚಿಕಿತ್ಸೆ ನಡೆಯಲಿದೆ.
300 ಕ್ಕೂ ಅಧಿಕ ದಾನಿಗಳಿಂದ ನೆರವು:
ಮೆದುಳಿನ ಸಮಸ್ಯೆಯಿಂದ ಬಳಲುತ್ತಿರುವ ಕದನೂರಿನ ಮಹೇಶ್ ಹಾಗೂ ಸಿಂಧೂರ ದಂಪತಿಯ ಪುತ್ರನ ಚಿಕಿತ್ಸೆ ದೊಡ್ಡ ಮೊತ್ತದ ನೆರವಿಗಾಗಿ ಮಾಧ್ಯಮ ಸ್ಪಂದನ ಸಾಮಾಜಿಕ ಜಾಲತಾಣದಲ್ಲಿ ನೆರವು ನೀಡಲು ಕೋರಿದಾಗ ಜಿಲ್ಲೆ,ರಾಜ್ಯ ಹಾಗೂ ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡಗಿನ ದಾನಿಗಳು ಕೈ ಜೋಡಿಸಿದ್ದಾರೆ.
ಮಾಧ್ಯಮ ಸ್ಪಂದನ ಮನವಿಗೆ 300 ಮಂದಿ ನೆರವು ನೀಡಿದ್ದು, ಮಗುವಿನ ಚಿಕಿತ್ಸೆಗೆ ದೇಣಿಗೆ ನೀಡಿದವರ ಹೆಸರು ಮತ್ತು ಅವರು ನೀಡಿರುವ ಹಣದ ಮಾಹಿತಿಯನ್ನು ಮಾಧ್ಯಮ ಸ್ಪಂದನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಅದಲ್ಲದೇ ವಿಶೇಷವಾಗಿ ವೈಯುಕ್ತಿಕವಾಗಿ ಮಾಧ್ಯಮ ಸ್ಪಂದನ ಸದಸ್ಯರ ಪ್ರಯತ್ನದಿಂದಲೂ ಕೂಡ ಮಗುವಿನ ಚಿಕಿತ್ಸೆ ಹಣ ಸಂಗ್ರಹವಾಗಿದೆ. ಮಾಧ್ಯಮ ಸ್ಪಂದನ ಕರೆಗೆ ನೆರವು ನೀಡಿ ಮಗುವಿನ ಶಸ್ತ್ರಚಿಕಿತ್ಸೆಗೆ ಕೈ ಜೋಡಿಸಿದ ಎಲ್ಲರಿಗೂ ಮಾಧ್ಯಮ ಸ್ಪಂದನ ಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
