ದಿಲ್ಲಿಯ ಶೋರೂಮ್‌ನಿಂದ ಥಾರ್ ಕಾರು ಬಿದ್ದ ಘಟನೆ: ಮೃತ್ಯು ವದಂತಿ ತಳ್ಳಿಹಾಕಿದ ಮಹಿಳೆ

ದಿಲ್ಲಿಯ ಶೋರೂಮ್‌ನಿಂದ ಥಾರ್ ಕಾರು ಬಿದ್ದ ಘಟನೆ: ಮೃತ್ಯು ವದಂತಿ ತಳ್ಳಿಹಾಕಿದ ಮಹಿಳೆ
Photo credit: NDTV

ಹೊಸದಿಲ್ಲಿ: ದಿಲ್ಲಿಯ ನಿರ್ಮಾಣ್ ವಿಹಾರ್‌ನ ಮಹೀಂದ್ರಾ ಕಾರು ಶೋರೂಮ್‌ ನಲ್ಲಿ ಸಂಭವಿಸಿದ ಅಪರೂಪದ ಅಪಘಾತದಲ್ಲಿ ಹೊಸ ಥಾರ್ ಕಾರು ಶೋರೂಮ್‌ನ ಮೊದಲ ಮಹಡಿಯಿಂದ ಕೆಳಗೆ ಬಿದ್ದಿತು. ಅಪಘಾತದ ವೇಳೆ ಕಾರು ಚಾಲನೆ ಮಾಡುತ್ತಿದ್ದ ಮಾನಿ ಪವಾರ್ (29) ಅವರು ಸುರಕ್ಷಿತರಾಗಿದ್ದು, ತಮ್ಮ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಘಟನೆಯ ಸಮಯದಲ್ಲಿ ಪವಾರ್ ಅವರು ತಮ್ಮ ಕುಟುಂಬ ಸದಸ್ಯರು ಹಾಗೂ ಮಾರಾಟಗಾರರೊಂದಿಗೆ ಶೋರೂಮ್‌ನೊಳಗೆ ಸಾಂಪ್ರದಾಯಿಕವಾಗಿ ನಿಂಬೆ ಹಣ್ಣು ಒತ್ತುವ ಆಚರಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಎಕ್ಸಲರೇಟರ್ ಒತ್ತಲ್ಪಟ್ಟಿದ್ದು, ಸುಮಾರು 27 ಲಕ್ಷ ರೂಪಾಯಿ ಮೌಲ್ಯದ ಥಾರ್ ಕಾರು ಗಾಜಿನ ಗೋಡೆಗೆ ಗುದ್ದಿ ನೇರವಾಗಿ ಕೆಳಗೆ ಬಿದ್ದಿದೆ.

ಅಪಘಾತದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೊಗಳಲ್ಲಿ, ಮಾನಿ ಪವಾರ್ ಗಂಭೀರ ಗಾಯಗೊಂಡಿದ್ದಾರೆ, ಸಾವನ್ನಪ್ಪಿದ್ದಾರೆ ಎಂಬ ಸುಳ್ಳು ಸುದ್ದಿಗಳು ವೈರಲ್ ಆದವು. ಇದಕ್ಕೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತೀವ್ರ ಪ್ರತಿಕ್ರಿಯೆ ನೀಡಿದ ಪವಾರ್, “ನಾನು ಜೀವಂತವಾಗಿದ್ದೇನೆ ಮತ್ತು ಸುರಕ್ಷಿತವಾಗಿದ್ದೇನೆ. ಮೂಳೆ ಮುರಿತವಾಗಿದೆ ಮೃತಪಟ್ಟಿದ್ದೇನೆ ಎಂಬುದೆಲ್ಲವೂ ಸುಳ್ಳು ಸುದ್ದಿ. ದಯವಿಟ್ಟು ಇಂತಹ ಸುಳ್ಳು ವೀಡಿಯೊಗಳನ್ನು ಹಂಚುವುದನ್ನು ನಿಲ್ಲಿಸಿ” ಎಂದು ಸ್ಪಷ್ಟನೆ ನೀಡಿದ್ದಾರೆ.

 “ಅಪಘಾತದ ವೇಳೆ ಕಾರು ಹೆಚ್ಚಿನ ಆರ್‌ಪಿಎಂನಲ್ಲಿತ್ತು. ಇದ್ದಕ್ಕಿದ್ದಂತೆ ವೇಗ ಹೆಚ್ಚಾಗಿ ಕೆಳಗೆ ಬಿತ್ತು. ಆದರೆ, ನಾವು ಮೂವರೂ ಮುಂಭಾಗದ ಬಾಗಿಲಿನಿಂದ ಸುರಕ್ಷಿತವಾಗಿ ಹೊರಬಂದೆವು. ಯಾರಿಗೂ ಗಾಯವಾಗಿಲ್ಲ” ಎಂದು ಮಾನಿ ಪವಾರ್ ಹೇಳಿದ್ದಾರೆ.

ಪ್ರಸ್ತುತ, ಶೋರೂಮ್ ಹೊರಗಿನ ರಸ್ತೆಯಲ್ಲಿ ತಲೆಕೆಳಗಾಗಿ ಬಿದ್ದ ಥಾರ್ ಕಾರಿನ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.