ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಸಿದ್ಧತೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ

ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಸಿದ್ಧತೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ

ಮಡಿಕೇರಿ:-ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಅಧಿಕಾರಿಗಳಿಂದ ಸೋಮವಾರ ಮಾಹಿತಿ ಪಡೆದರು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅವರು ಬೆಂಗಳೂರಿನಲ್ಲಿ ನಡೆದ ಆರ್‍ಸಿಬಿ ತಂಡದ ವಿಜಯೋತ್ಸವ ಸಂದರ್ಭದಲ್ಲಿ ಆದ ಘಟನೆ, ಹಾಗೆಯೇ ಇತ್ತೀಚೆಗೆ ಗಣಪತಿ ಉತ್ಸವದಲ್ಲಿ ಹಾಸನದಲ್ಲಿ ನಡೆದ ಅವಘಡದಿಂದ ತುಂಬಾ ಎಚ್ಚರ ವಹಿಸಬೇಕಿದ್ದು, ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಜೊತೆ ನಗರಸಭೆ, ಸೆಸ್ಕ್, ಆರ್‍ಟಿಒ, ಇತರೆ ಇಲಾಖೆ ಅಧಿಕಾರಿಗಳು ಕೈಜೋಡಿಸುವಂತೆ ನಿರ್ದೇಶನ ನೀಡಿದರು.

 ಮಂಟಪಗಳ ಮೆರವಣಿಗೆ ಮಾರ್ಗದಲ್ಲಿ ವಿದ್ಯುತ್ ಮಾರ್ಗ ಬಗ್ಗೆ ಇನ್ನಷ್ಟು ಎಚ್ಚರವಹಿಸುವುದು, ನಗರಸಭೆಯವರು ಸ್ವಚ್ಛತೆ ಜೊತೆಗೆ ಪೊಲೀಸ್ ಇಲಾಖೆ ಜೊತೆ ಕೈಜೋಡಿಸಿ ಹಲವು ಸಮನ್ವಯತೆ ಕಾಯ್ದುಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. ಮಂಟಪಗಳ ಎತ್ತರ, ವಿದ್ಯುತ್ ಮಾರ್ಗ ಮತ್ತಿತರ ಬಗ್ಗೆ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಆರಂಭದಲ್ಲಿ ಮಾತನಾಡಿದ ನಗರಸಭೆ ಪೌರಾಯುಕ್ತರಾದ ಎಚ್.ಆರ್.ರಮೇಶ್ ಅವರು ಸ್ವಚ್ಛತೆಗೆ ಒತ್ತು ನೀಡಲಾಗಿದೆ. 42 ಕಡೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ. ಚೆಕ್‍ಪೋಸ್ಟ್‍ಗಳಲ್ಲಿ ಪೊಲೀಸ್ ಇಲಾಖೆ ಜೊತೆ ಸಹಕರಿಸಲಾಗುತ್ತದೆ. ಡಿಸ್‍ಪ್ಲೇ ಬೋರ್ಡ್ ಹಾಗೂ ಪೋಕಸ್ ಲೈಟ್ ಅಳವಡಿಕೆ, ಅಗತ್ಯವಿರುವ ಕಡೆ ಧ್ವನಿವರ್ಧಕ ಹಾಗೂ ಬೆಳಕಿನ ವ್ಯವಸ್ಥೆ ಮಾಡಲಾಗುತ್ತದೆ. ಹಾಗೆಯೇ ಪೊಲೀಸ್ ಇಲಾಖೆ ಜೊತೆ ಸಹಾಯವಾಣಿ ಕೇಂದ್ರ ತೆರೆಯಲಾಗುತ್ತದೆ ಎಂದು ತಿಳಿಸಿದರು. ಸೆಸ್ಕ್ ಇಇ ರಾಮಚಂದ್ರ ಅವರು ಮಾತನಾಡಿ ಈಗಾಗಲೇ ಮಂಟಪಗಳು ತೆರಳುವ ಮಾರ್ಗದಲ್ಲಿ ವಿದ್ಯುತ್ ಮಾರ್ಗ ಸರಿಪಡಿಸಲಾಗಿದೆ. ಮಂಟಪ ಮೆರವಣಿಗೆ ಸಂದರ್ಭದಲ್ಲಿ ಹೆಚ್ಚಿನ ಎಂಜಿನಿಯರ್‍ಗಳನ್ನು ನಿಯೋಜಿಸಿ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸಾರ್ವಜನಿಕ ಹಿತಾಸಕ್ತಿ ಅತೀ ಮುಖ್ಯ. ಮಂಟಪಗಳು ತೆರಳುವ ಮಾರ್ಗದಲ್ಲಿ ವಿದ್ಯುತ್ ಮಾರ್ಗ ಎತ್ತರದಲ್ಲಿ ಇರಬೇಕು. ಇಲ್ಲದಿದ್ದಲ್ಲಿ ಮಂಟಪದವರೊಂದಿಗೆ ಚರ್ಚಿಸಿ ಎತ್ತರ ಕಡಿಮೆ ಮಾಡಬೇಕು. ಈ ಬಗ್ಗೆ ಲಿಖಿತವಾಗಿ ಮಾಹಿತಿ ಇರಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅಬಕಾರಿ ಇಲಾಖೆ ಅಧಿಕಾರಿಯವರು ಈ ಬಾರಿ ಅಕ್ಟೋಬರ್, 02 ರಂದು ಗಾಂಧಿ ಜಯಂತಿ ಜೊತೆಗೆ ವಿಜಯ ದಶಮಿ ಇರುವುದರಿಂದ ಮದ್ಯ ಮಾರಾಟ ನಿಷೇಧಿಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮದ್ಯವನ್ನು ಬ್ಲಾಕ್‍ನಲ್ಲಿ ಮಾರಾಟ ಮಾಡದಂತೆ ಎಚ್ಚರವಹಿಸಬೇಕು. ಕುಶಾಲನಗರದಿಂದ ಮಡಿಕೇರಿ ವರೆಗೂ ಅಲ್ಲಲ್ಲಿ ಬಾಟಲಿಗಳು ಬಿದ್ದಿರುತ್ತವೆ. ಎಲ್ಲೆಂದರಲ್ಲಿ ಮದ್ಯಪಾನ ಮಾಡುವುದು ಕಂಡು ಬರುತ್ತದೆ. ಈ ಸಂಬಂಧ ಪ್ರಕರಣ ದಾಖಲಿಸುವಂತೆ ಸೂಚಿಸಿದರು.

ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ ಅವರು ಮಾಹಿತಿ ನೀಡಿ ರಸ್ತೆಗಳಲ್ಲಿ ಕಾಡು ಕಡಿಯಲಾಗುವುದು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗೋಣಿಕೊಪ್ಪ ದಸರಾ ಬಗ್ಗೆಯೂ ಗಮನಹರಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ದಸರಾ ಸಂದರ್ಭದಲ್ಲಿ ತಜ್ಞ ವೈದ್ಯರು ಹಾಗೂ ಶ್ರುಶ್ರೂಷಕರನ್ನು ನಿಯೋಜನೆ ಮಾಡಬೇಕು. ಅಗತ್ಯವಿರುವಕಡೆ ಆ್ಯಂಬುಲೆನ್ ಸೇವೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ವಿಜಯದಶಮಿ ದಿನದಂದು ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್‍ಗಳ ಸಂಚಾರ, ವಾಹನಗಳ ನಿಲುಗಡೆಗೆ ವ್ಯವಸ್ಥೆ ಮತ್ತಿತರ ಬಗ್ಗೆ ಸ್ಥಳ ನಿಗದಿ ಮಾಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಇನ್ಸ್‍ಪೆಕ್ಟರ್ ಮೇದಪ್ಪ ಅವರು ನಗರದ ಎಪಿಎಂಸಿ ಸ್ಥಳದಲ್ಲಿ ಕೆಎಸ್‍ಆರ್‍ಟಿಸಿ ಸರ್ಕಾರಿ ಹಾಗೂ ಖಾಸಗಿ ಬಸ್‍ಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು ಎಂದರು. ವಾಹನ ನಿಲುಗಡೆ ಮತ್ತು ಸಾರಿಗೆ ಸಂಚಾರದ ಮಾರ್ಗಸೂಚಿಯನ್ನು ವಿಜಯದಶಮಿಯ ಮೂರು ನಾಲ್ಕು ದಿನ ಮೊದಲು ಪ್ರಕಟಣೆ ನೀಡಲಾಗುವುದು ಎಂದು ಹೇಳಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ್ ಅವರು ಖಾಸಗಿ ಬಸ್ ಮಾಲೀಕರ ಸಭೆ ನಡೆಸಿ ಸುಗಮ ಸಾರಿಗೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಖಾಸಗಿ ಬಸ್‍ಗಳ ಸಂಚಾರ ಸಂಬಂಧ ಸಭೆ ನಡೆಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. ಕೆಎಸ್‍ಆರ್‍ಟಿಸಿಯ ಎಷ್ಟು ಬಸ್ಸುಗಳು ಸಂಚರಿಸುತ್ತವೆ, ಈ ಬಗ್ಗೆಯೂ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದ್ದು, ಈ ಸಂಬಂಧ ಟೆಂಡರ್ ಆಹ್ವಾನಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

 ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಚ್ಛತೆಗೆ ಒತ್ತು ನೀಡಬೇಕು. ಬೆಳಕಿನ ವ್ಯವಸ್ಥೆ ಮಾಡಬೇಕು. ಸಿಸಿಟಿವಿ ಅಳವಡಿಸಬೇಕು. ಇತರೆ ನಿರ್ವಹಣೆ ಸಂಬಂಧ ಕನಿಷ್ಠ 5 ರೂ.ವನ್ನಾದರೂ ವಾಹನ ನಿಲುಗಡೆ ಶುಲ್ಕ ಸಂಗ್ರಹಿಸಿ, ಅದನ್ನು ನಿರ್ವಹಣೆಗೆ ಬಳಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸಲಹೆ ಮಾಡಿದರು. ಅಗ್ನಿಶಾಮಕ ಇಲಾಖೆಯವರು ಜನರಲ್ ತಿಮ್ಮಯ್ಯ ವೃತ್ತ, ಅಜ್ಜಮಾಡ ದೇವಯ್ಯ ವೃತ್ತ ಜೊತೆಗೆ ಅಗತ್ಯವಿರುವ ಕಡೆ ಅಗ್ನಿಶಮನ ವಾಹನ ನಿಯೋಜಿಸುವಂತೆ ಸೂಚಿಸಿದರು.

ಆಹಾರ ಸುರಕ್ಷತೆಯ ಬಗ್ಗೆಯೂ ಗಮನಹರಿಸಬೇಕು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸಾರ್ವಜನಿಕ ಶೌಚಾಲಯದಲ್ಲಿ ಸ್ವಚ್ಛತೆ ಕಾಪಾಡಬೇಕು. ಈ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಸಲಹೆ ಮಾಡಿದರು. ಮಡಿಕೇರಿ ಸಂಪರ್ಕ ರಸ್ತೆಗಳಲ್ಲಿ ಸಾರಿಗೆ ದಟ್ಟಣೆ ಉಂಟಾಗದಂತೆ ಗಮನಹರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಅವರು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ವಾಹನ ನಿಲುಗಡೆ ಬಗ್ಗೆ ಮಾಹಿತಿ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು ಮಡಿಕೇರಿ ದಸರಾ ಸಂಬಂಧ ಅರಣ್ಯ ಇಲಾಖೆಯಿಂದ ಅಗತ್ಯ ಸಹಕಾರ ನಿಡಲಾಗುವುದು ಎಂದರು. ಡಿವೈಎಸ್‍ಪಿ ಸೂರಜ್ ಅವರು ಸಾರಿಗೆ ಸಂಚಾರ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.